🔴ಕಾಡಾನೆ ಹಾವಳಿ ವಿರುದ್ಧ ಬೃಹತ್ ಜಾಥಾ ಅನಿವಾರ್ಯ: -ಮಂಜುನಾಥ್ ಶೆಟ್ಟಿ.
(ಎಲ್ ನಿನೋ ಪರಿಣಾಮ ಎದುರಿಸಲು ವೈಜ್ಞಾನಿಕ ಕೃಷಿ ಅಳವಡಿಸಿಕೊಳ್ಳುವಂತೆ ಬೆಳೆಗಾರರಿಗೆ ಸಲಹೆ.)
ಸಕಲೇಶಪುರ :-ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಕಾಡಾನೆ ಹಾವಳಿ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸುವ ನಿಟ್ಟಿನಲ್ಲಿ ಮಲೆನಾಡಿನ ಎಲ್ಲಾ ಬೆಳೆಗಾರರನ್ನು ಒಗ್ಗೂಡಿಸಿ ಅಗತ್ಯವಿದ್ದರೆ ಬೃಹತ್ ಪ್ರತಿಭಟನೆ ಹಾಗೂ ಕಾಲ್ನಡಿಗೆ ಜಾಥಾ ಹಮ್ಮಿಕೊಳ್ಳಲಾಗುವುದು ಎಂದು ಹಾಸನ ಜಿಲ್ಲಾ ಪ್ಲಾಂಟರ್ಸ್ ಸಂಘದ ಅಧ್ಯಕ್ಷ ಮಂಜುನಾಥ್ ಶೆಟ್ಟಿ ಎಚ್ಚರಿಕೆ ನೀಡಿದರು.
ಪಟ್ಟಣದ ಎಚ್.ಡಿ.ಪಿ.ಎ. (HDPA) ಸಭಾಂಗಣದಲ್ಲಿ ಮಂಗಳವಾರ ನಡೆದ ಹಾಸನ ಜಿಲ್ಲಾ ಪ್ಲಾಂಟರ್ಸ್ ಸಂಘದ 2026–28ನೇ ಸಾಲಿನ ಎರಡನೇ ಮಾಸಿಕ ಕಾರ್ಯಕಾರಿ ಮಂಡಳಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.ವಳಲಹಳ್ಳಿ ಗ್ರಾಮ ಪಂಚಾಯಿತಿ ಸೇರಿದಂತೆ ಜಿಲ್ಲೆಯ ಹಲವೆಡೆ ಕಾಡಾನೆ ಹಾವಳಿ ತೀವ್ರಗೊಂಡಿದ್ದು, ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಸರ್ಕಾರದ ಗಮನ ಸೆಳೆಯಲು ಗ್ರಾಮ ಪಂಚಾಯಿತಿ ಮಟ್ಟದ ಎಲ್ಲಾ ಬೆಳೆಗಾರರ ಸಂಘಗಳನ್ನು ಒಗ್ಗೂಡಿಸಿ ಹೋರಾಟ ರೂಪಿಸಲಾಗುವುದು. ಕಾನೂನು ಹೋರಾಟದ ಜೊತೆಗೆ ಜನಾಂದೋಲನಕ್ಕೂ ಸಂಘ ಸಜ್ಜಾಗಿದೆ ಎಂದು ಹೇಳಿದರು.
ಕಾಫಿ ಬೆಳೆ ನಷ್ಟಕ್ಕೆ ಸರ್ಕಾರ ನೀಡುತ್ತಿರುವ ಪರಿಹಾರ ಅತೀ ಕಡಿಮೆಯಾಗಿದ್ದು, ರೈತರಿಗೆ ನ್ಯಾಯಸಮ್ಮತ ಹಾಗೂ ವಾಸ್ತವಿಕ ಪರಿಹಾರ ನೀಡುವಂತೆ ಸರ್ಕಾರದ ಮೇಲೆ ಒತ್ತಡ ತರಲಾಗುವುದು ಎಂದರು.
ಕಾಳುಮೆಣಸು ವಿಮೆ ಗಡುವು ವಿಸ್ತರಣೆಗೆ ಒತ್ತಾಯ.:-
ಕಾಳುಮೆಣಸು ಬೆಳೆ ವಿಮೆ ಪ್ರೀಮಿಯಂ ಪಾವತಿಸಲು 15 ದಿನಗಳ ಕಾಲಾವಕಾಶ ವಿಸ್ತರಿಸುವಂತೆ ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿದೆ. ಹೆಚ್ಚಿನ ರೈತರು ವಿಮೆ ಸೌಲಭ್ಯ ಪಡೆಯಲು ಈ ಕ್ರಮ ಅಗತ್ಯವಾಗಿದೆ ಎಂದು ಮಂಜುನಾಥ್ ಶೆಟ್ಟಿ ತಿಳಿಸಿದರು.
ಮಹಿಳೆಯರ ಪಾಲ್ಗೊಳ್ಳುವಿಕೆಗೆ ಉತ್ತೇಜನ ನೀಡುವ ಉದ್ದೇಶದಿಂದ ಪ್ರತಿ ಹೋಬಳಿಯಿಂದ ಮಹಿಳಾ ಪ್ರತಿನಿಧಿಗಳನ್ನು ಸಂಘಕ್ಕೆ ನೇಮಕ ಮಾಡುವ ಕುರಿತು ಸಭೆಯಲ್ಲಿ ಚರ್ಚಿಸಿ ಅಗತ್ಯ ಕ್ರಮ ಕೈಗೊಳ್ಳಲು ಸೂಚನೆ ನೀಡಲಾಯಿತು.
ಎಲ್ ನಿನೋ ಪರಿಣಾಮಕ್ಕೆ ಎಚ್ಚರಿಕೆ :-
ಸಭೆಯಲ್ಲಿ ಸಕಲೇಶಪುರ ಕಾಫಿ ಮಂಡಳಿಯ ಹಿರಿಯ ಸಂಪರ್ಕ ಅಧಿಕಾರಿ ಡಾ. ರಂಜಿತ್ ಕುಮಾರ್ ಎಲ್ ನಿನೋ ಹವಾಮಾನ ವಿದ್ಯಮಾನದ ಪರಿಣಾಮಗಳು ಹಾಗೂ ಕಾಫಿ ಸೇರಿದಂತೆ ಕೃಷಿ ಕ್ಷೇತ್ರದ ಮೇಲಿನ ಅದರ ಪರಿಣಾಮಗಳ ಕುರಿತು ಸಮಗ್ರ ಮಾಹಿತಿ ನೀಡಿದರು.
ಎಲ್ ನಿನೋ ಪರಿಣಾಮದಿಂದ ಮುಂಗಾರು ಮಳೆಯ ಪ್ರಮಾಣ ಕಡಿಮೆಯಾಗುವ ಸಾಧ್ಯತೆ, ತಾಪಮಾನ ಏರಿಕೆ, ಬೆಳೆ ಇಳುವರಿ ಕುಸಿತ ಹಾಗೂ ರೈತರ ಆದಾಯದ ಮೇಲೆ ಉಂಟಾಗುವ ದುಷ್ಪರಿಣಾಮಗಳನ್ನು ವಿವರಿಸಿದರು.
ಬದಲಾಗುತ್ತಿರುವ ಹವಾಮಾನಕ್ಕೆ ಹೊಂದಿಕೊಳ್ಳಲು ಮಳೆನೀರು ಸಂರಕ್ಷಣೆ, ವೈಜ್ಞಾನಿಕ ಕೃಷಿ ಪದ್ಧತಿ, ಬೆಳೆ ವೈವಿಧ್ಯೀಕರಣ ಹಾಗೂ ತೋಟಗಳಲ್ಲಿ ನೀರಿನ ಸಮರ್ಪಕ ನಿರ್ವಹಣೆ ಅಳವಡಿಸಿಕೊಳ್ಳುವುದು ಅತ್ಯಗತ್ಯ ಎಂದು ಸಲಹೆ ನೀಡಿದರು. ಕಾಫಿ ಉದ್ಯಮದ ಮೇಲೆ ಉಂಟಾಗಬಹುದಾದ ಪರಿಣಾಮಗಳು ಹಾಗೂ ಅದನ್ನು ಎದುರಿಸಲು ಸಂಘಟನೆಯು ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆಯೂ ವಿವರಿಸಿದರು.
ಸರ್ಕಾರದೊಂದಿಗೆ ಸಮಾಲೋಚನೆ ಅಗತ್ಯ.:-
ಕೆ.ಜಿ.ಎಫ್. ಉಪಾಧ್ಯಕ್ಷ ಬೆಕ್ಕನಹಳ್ಳಿ ನಾಗರಾಜ್ ಮಾತನಾಡಿ, ಬೆಳೆಗಾರರ ಸಮಸ್ಯೆಗಳ ಕುರಿತು ಸಂಘ ಕೈಗೊಂಡ ಹಲವು ನಿರ್ಣಯಗಳು ಸಮರ್ಪಕವಾಗಿ ಜಾರಿಯಾಗಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಸಂಬಂಧಪಟ್ಟ ಸಚಿವರು ಹಾಗೂ ಅಧಿಕಾರಿಗಳನ್ನು ಭೇಟಿ ಮಾಡಿ ಸಮಸ್ಯೆಗಳ ಬಗ್ಗೆ ಸಮಗ್ರವಾಗಿ ಮನವರಿಕೆ ಮಾಡಿಕೊಡಬೇಕು. ಹೊಸ ಸರ್ಕಾರದಲ್ಲಿ ಅರಣ್ಯ ಸಚಿವರ ನೇಮಕವಾದ ಬಳಿಕ ಕಾಡಾನೆ ಹಾವಳಿ ಕುರಿತು ಸರ್ಕಾರದೊಂದಿಗೆ ಉನ್ನತ ಮಟ್ಟದ ಚರ್ಚೆ ನಡೆಸಲು ಸಂಘ ಮುಂದಾಗಲಿದೆ ಎಂದರು.
ಟ್ರಸ್ಟ್ ಪುನರ್‌ರಚನೆ.:-
ಸಭೆಯಲ್ಲಿ ಎಚ್.ಡಿ.ಪಿ.ಎ. ಅಂಗಸಂಸ್ಥೆಯಾದ ಟ್ರಸ್ಟ್ ಅನ್ನು ಪುನರ್‌ರಚಿಸಿ, ಮಾಜಿ ಅಧ್ಯಕ್ಷ ಕ್ಯಾನಹಳ್ಳಿ ಸುಬ್ರಮಣ್ಯ ಅವರನ್ನು ನಿಯಮಾನುಸಾರ ನೂತನ ಟ್ರಸ್ಟ್ ಅಧ್ಯಕ್ಷರಾಗಿ ಆಯ್ಕೆ ಮಾಡಲಾಯಿತು.
ಟ್ರಸ್ಟ್‌ನ ಆಡಳಿತ, ಪತ್ರ ವ್ಯವಹಾರ, ಆಸ್ತಿ ಸಂರಕ್ಷಣೆ ಹಾಗೂ ಆರ್ಥಿಕ ಶಿಸ್ತು ಕುರಿತು ಸಭೆಯಲ್ಲಿ ಚರ್ಚೆ ನಡೆಯಿತು. ಮಹಿಳಾ ಪ್ರಾತಿನಿಧ್ಯ ಹೆಚ್ಚಿಸಲು ಬೈಲಾ ನಿಯಮಾನುಸಾರ ಮಹಿಳಾ ಪ್ರತಿನಿಧಿಗಳನ್ನು ನೇಮಕ ಮಾಡುವ ಸಲಹೆಯೂ ವ್ಯಕ್ತವಾಯಿತು.
ಕೋರ್ಟ್ ಹೋರಾಟಕ್ಕೆ ನಿಧಿ ಸಂಗ್ರಹ.:-
ಮಾಜಿ ಟ್ರಸ್ಟ್ ಅಧ್ಯಕ್ಷ ಕೃಷ್ಣಪ್ಪ ಮಾತನಾಡಿ, ಕಾಡಾನೆ ಸಮಸ್ಯೆಗೆ ಶಾಶ್ವತ ಪರಿಹಾರಕ್ಕಾಗಿ ನ್ಯಾಯಾಲಯದಲ್ಲಿ ಪರಿಣಾಮಕಾರಿ ಹೋರಾಟ ನಡೆಸಬೇಕಿದೆ. ಇದಕ್ಕಾಗಿ ಅಗತ್ಯವಿರುವ ಹಣಕಾಸು ವ್ಯವಸ್ಥೆಯನ್ನು ಎಚ್.ಡಿ.ಪಿ.ಎ. ಹಾಗೂ ಅದರ ಎಲ್ಲಾ ಅಂಗಸಂಸ್ಥೆಗಳು ಒಗ್ಗಟ್ಟಿನಿಂದ ಕಲ್ಪಿಸಬೇಕು ಎಂದು ಕರೆ ನೀಡಿದರು.
ಟ್ರಸ್ಟ್ ಬಲಿಷ್ಠಗೊಳಿಸುವ ಭರವಸೆ.:-
ನೂತನ ಟ್ರಸ್ಟ್ ಅಧ್ಯಕ್ಷ ಕ್ಯಾನಹಳ್ಳಿ ಸುಬ್ರಮಣ್ಯ ಮಾತನಾಡಿ, 1991ರಲ್ಲಿ ಸ್ಥಾಪನೆಯಾದ ಟ್ರಸ್ಟ್ ಬೆಳೆಗಾರರ ಹಿತಾಸಕ್ತಿಗಾಗಿ ಕಾರ್ಯನಿರ್ವಹಿಸುತ್ತಿದೆ. ಸಂಘದ ಆಸ್ತಿಪಾಸ್ತಿಗಳ ಸಂರಕ್ಷಣೆ ಹಾಗೂ ಪಾರದರ್ಶಕ ಆಡಳಿತಕ್ಕೆ ಆದ್ಯತೆ ನೀಡಲಾಗುವುದು ಎಂದರು.
ಇನ್ನೂ ನಡೆಯದಿರುವ ಹೋಬಳಿ ಮಟ್ಟದ ಸಾಮಾನ್ಯ ಸಭೆಗಳನ್ನು ಮುಂದಿನ ಎರಡು ತಿಂಗಳೊಳಗೆ ಪೂರ್ಣಗೊಳಿಸಿ, ಟ್ರಸ್ಟ್ ಅನ್ನು ಮತ್ತಷ್ಟು ಬಲಿಷ್ಠಗೊಳಿಸಲಾಗುವುದು ಎಂದು ಭರವಸೆ ನೀಡಿದರು.
ಸಂಶೋಧನೆಗೆ ಆದ್ಯತೆ :-
ರೀಸರ್ಚ್ ಫೌಂಡೇಶನ್ ನೂತನ ಅಧ್ಯಕ್ಷರಾಗಿ ಆಯ್ಕೆ ಅದ ಮಹೇಶ್ ಮಾತನಾಡಿ, ರೈತರಿಗೆ ಅನುಕೂಲವಾಗುವ ಸಂಶೋಧನಾ ಚಟುವಟಿಕೆಗಳಿಗೆ ಹೆಚ್ಚಿನ ಆದ್ಯತೆ ನೀಡಲಾಗುವುದು. ಬೆಳೆಗಾರರ ಅಗತ್ಯಗಳಿಗೆ ತಕ್ಕಂತೆ ಕಾರ್ಯನಿರ್ವಹಿಸುವ ಆಧುನಿಕ ಪ್ರಯೋಗಾಲಯ (ಲ್ಯಾಬ್) ಅಭಿವೃದ್ಧಿಗೆ ಮುಂದಿನ ಎರಡು ವರ್ಷಗಳಲ್ಲಿ ಪ್ರಾಮಾಣಿಕವಾಗಿ ಶ್ರಮಿಸಲಾಗುವುದು ಎಂದು ಹೇಳಿದರು.
ಇದೇ ವೇಳೆ ನೂತನವಾಗಿ ಆಯ್ಕೆಯಾದ 10 ನಿರ್ದೇಶಕರನ್ನು ಸಭೆಗೆ ಪರಿಚಯಿಸಲಾಯಿತು.
ಆದಾಯ-ವೆಚ್ಚ ವರದಿ ಮಂಡನೆ.:-
ಸಭೆಯಲ್ಲಿ ಖಜಾಂಚಿ ಲೋಕೇಶ್ ಡಿ.ಎಸ್. ಅವರು 2026ರ ಜೂನ್ 9ರಿಂದ ಜುಲೈ 13ರವರೆಗಿನ ಆದಾಯ-ವೆಚ್ಚದ ವಿವರಗಳನ್ನು ಮಂಡಿಸಿದರು. ವಿವಿಧ ಹೋಬಳಿ ಬೆಳೆಗಾರರ ಸಂಘಗಳಿಂದ ಜಿಲ್ಲಾ ಸಂಘಕ್ಕೆ ಬರಬೇಕಿರುವ ಬಾಕಿ ಮೊತ್ತದ ಕುರಿತು ವರದಿಯನ್ನೂ ಸಲ್ಲಿಸಿದರು.
ಸಭೆಯಲ್ಲಿ ಗೌರವ ಕಾರ್ಯದರ್ಶಿ ಹೆಗ್ಗೋವೆ ಪುಟ್ಟರಾಜ್, ಉಪಾಧ್ಯಕ್ಷರಾದ ಸಚಿನ್ ಹೆತ್ತೂರು,ಜಂಟಿ ಕಾರ್ಯದರ್ಶಿ ರವಿಕುಮಾರ್ ಹೆಚ್.ಎ., ಸಂಘಟನಾ ಕಾರ್ಯದರ್ಶಿ ಹೆಚ್.ಎಂ. ಮಂಜುನಾಥ್, ವಿವಿಧ ತಾಲ್ಲೂಕು ಹಾಗೂ ಹೋಬಳಿ ಮಟ್ಟದ ಪದಾಧಿಕಾರಿಗಳು, ಕಾರ್ಯದರ್ಶಿಗಳು ಮತ್ತು ಸದಸ್ಯರು ಉಪಸ್ಥಿತರಿದ್ದರು.
previous post
