ಕೆಲ ಸ್ವಾಮೀಜಿಗಳ ಹೇಳಿಕೆಗಳು ಸಮಾಜದಲ್ಲಿ ಒಡಕು ಮೂಡಲು ಕಾರಣ: ಸಚಿವ ಈಶ್ವರ ಖಂಡ್ರೆ ಪ್ರತಿಕ್ರಿಯೆ.
ಬೇಲೂರು:
ಇಲ್ಲಿನ ವೀರಶೈವಲಿಂಗಾಯಿತ ಯುವ ಹಾಗೂ ಮಹಿಳಾ ಘಟಕದಿಂದ ವೀರಶೈವ ಕಲ್ಯಾಣಮಂಟಪದಲ್ಲಿ ಏರ್ಪಡಿಸಿದ್ದ ಬಸವೇಶ್ವರರ ಜಯಂತಿಯಲ್ಲಿ ಮಾತನಾಡಿದ ಅವರು, ಸಾಲುಮರದ ತಿಮ್ಮಕ್ಕ ಅವರ ಸ್ಮಾರಕಕ್ಕೆ ಶಾಸಕ ಹೆಚ್.ಕೆ.ಸುರೇಶ್ ಅವರು ಮನವಿ ಮಾಡಿದ್ದು ಅದರಂತೆ ಮುಖ್ಯಮಂತ್ರಿಗಳ ಬಳಿ ಚರ್ಚಿಸುವುದಾಗಿ ತಿಳಿಸಿದರು.
ಯುವಕರು ದುಶ್ಚಟಗಳ ದಾಸರಾಗುತ್ತಿದ್ದಾರೆ, ಸಂಸ್ಕಾರ ರಹಿತರಾಗಿ ಸಮಾಜದ ಸ್ವಾಸ್ಥ್ಯ ಹಾಳು ಮಾಡುತ್ತಿದ್ದಾರೆ. ದುಶ್ಚಟದಿಂದಾಗಿ ಆರೋಗ್ಯ ಹಾಳು ಮಾಡಿಕೊಳ್ಳುವುದರ ಜೊತೆಗೆ ಮಾನಸಿಕ ಅಸ್ವಸ್ಥರಾಗುತ್ತಿದ್ದಾರೆ, ಇಂತಹವರು ಶರಣ ಸಾಹಿತ್ಯ ವಚನ ವಾಚನದತ್ತ ಗಮನ ಹರಿಸಬೇಕೆಂದರು.
ವೀರಶೈವ ಲಿಂಗಾಯಿತ ಮಠಮಾನ್ಯಗಳಿಂದ ಸಮಾಜಕ್ಕೆ ಅಪಾರ ಕೊಡುಗೆಯಾಗಿದ್ದರೂ ಕೆಲವರ ಹೇಳಿಕೆಗಳು ಸಮಾಜದಲ್ಲಿ ಒಡಕು ಉಂಟಾಗಲು ಕಾರಣವಾಗುತ್ತಿದೆ. ಕವಲು ದಾರಿಯಲ್ಲಿದ್ದು ಸಮಾಜವನ್ನು ಹಾಳು ಮಾಡುತ್ತಿದೆ. ವಚನ ಸಾಹಿತ್ಯ ಇಂದಿಗೂ ಅವಶ್ಯವಿದೆ. ಬಸವಣ್ಣನವರು 897 ವರ್ಷಗಳ ಅವಧಿಯಲ್ಲಿಯೇ ಮಹಿಳೆಯರಿಗೆ ಪ್ರಾಧಾನ್ಯತೆ ನೀಡಿದ್ದರೆಂದರು. ಜಿಲ್ಲಾ ಕೇಂದ್ರಗಳಲ್ಲಿ ವೀರಶೈವಲಿಂಗಾಯಿತ ಸಮುದಾಯ ಭವನ, ವಿದ್ಯಾರ್ಥಿನಿಯರ ವಸತಿನಿಲಯ, ಪ್ರತಿಭಾನ್ವಿತರಿಗೆ ತರಬೇತಿ ಕೇಂದ್ರ ಜೊತೆಗೆ ಪ್ರತಿಭಾ ಪುರಸ್ಕಾರದ ಯೋಜನೆಯಿದೆ.
ಸಾಲುಮರದ ತಿಮ್ಮಕ್ಕ ಸ್ಮಾರಕಕ್ಕೆ 25 ಎಕರೆ ಜಾಗ ಮೀಸಲಿರಿಸಿದ್ದು 25 ಕೋಟಿ ಅನುದಾನ ನೀಡುವ ಬಗ್ಗೆ ಪ್ರಯತ್ನ ಮಾಡಲಾಗುವುದು.
ಬೇಲೂರು ತಾಲ್ಲೂಕು ಸೇರಿದಂತೆ ಮಲೆನಾಡಭಾಗದಲ್ಲಿ ಆನೆ ಹಾವಳಿ ಹೆಚ್ಚಿದ್ದು ಆನೆಧಾಮ ನಿರ್ಮಾಣಕ್ಕೆ 2 ಸಾವಿರ ಎಕರೆ ಭೂಮಿ ಗುರುತಿಸಲಾಗಿದೆ. ಸರಕಾರ 52 ಕೋಟಿ ರೂ. ಹಣ ಬಿಡುಗಡೆ ಮಾಡಿದ್ದು ಒಂದು ವಾರದಲ್ಲಿ ಕಾಮಗಾರಿಗೆ ಚಾಲನೆ ನೀಡಲಾಗುವುದು. ಅರಣ್ಯ ಪ್ರದೇಶ ಕ್ಷೀಣಿಸುತ್ತಿರುವುದೆ ಕಾಡುಪ್ರಾಣಿಗಳು ನಾಡಿನತ್ತ ಬರಲು ಕಾರಣವಾಗಿದೆ. ಹಾಸನ ಜಿಲ್ಲೆಯಲ್ಲಿ ಈವರಗೆ 60 ಕೋಟಿ ರೂ. ಪರಿಹಾರ ನೀಡಲಾಗಿದೆ. ಅರಣ್ಯ ಸಿಬ್ಬಂದಿ ಪ್ರಾಮಾಣಿಕ ಕೆಲಸ ಮಾಡುತ್ತಿದ್ದಾರೆಂದರು.
ಶಾಸಕ ಹೆಚ್.ಕೆ.ಸುರೇಶ್ ಮಾತನಾಡಿ, ಜಾತಿಗೋಡೆ ಬದಿಗೊತ್ತಿ ಸಮಾಜದ ಏಳಿಗೆಗೆ ದುಡಿದವರು ಬಸವಣ್ಣನವರು, ಮಹಿಳೆಯರು ಜಯಂತಿಯನ್ನು ಅಚ್ಚುಕಟ್ಟಾಗಿ ಮಾಡಿದ್ದಾರೆಂದ ಶಾಸಕರು, ಸಾಲುಮರದ ತಿಮ್ಮಕ್ಕ ಸ್ಮಾರಕ ನಿರ್ಮಾಣ, ಹಳೇಬೀಡು ಪುಷ್ಪಗಿರಿ ಬಳಿ ಇರುವ ಪ್ರವಾಸೋಧ್ಯಮ ಇಲಾಖೆಯ ಪಾಳುಬಿದ್ದ ಕಟ್ಟಡವನ್ನು ಪುಷ್ಪಗಿರಿ ಮಠಕ್ಕೆ ಹಸ್ತಾಂತರಿಸುವುದು, ಆನೆ ಹಾವಳಿಗೆ ಶಾಶ್ವತ ಪರಿಹಾರಕ್ಕೆ ಮನವಿ ಮಾಡಿದರು.
