ರಸ್ತೆ ಅಪಘಾತದಲ್ಲಿ ಗಾಯಗೊಂಡ ವಿದ್ಯಾರ್ಥಿ ಭವಿಷ್ ಆರೋಗ್ಯ ವಿಚಾರಿಸಿದ – ಶಾಸಕ ಸಿಮೆಂಟ್ ಮಂಜು.
ಸಕಲೇಶಪುರ: ರಸ್ತೆ ಅಪಘಾತದಲ್ಲಿ ಗಾಯಗೊಂಡು ಹಾಸನದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಸಕಲೇಶಪುರ ಪಟ್ಟಣದ ಬಾಳೆಗದ್ದೆ ನಿವಾಸಿ ಹೇಮಂತ್ ಅವರ ಪುತ್ರ ಹಾಗೂ 10ನೇ ತರಗತಿ ವಿದ್ಯಾರ್ಥಿ ಭವಿಷ್ ಅವರನ್ನು ಶಾಸಕ ಸಿಮೆಂಟ್ ಮಂಜು ಗುರುವಾರ ಭೇಟಿ ನೀಡಿ ಆರೋಗ್ಯ ವಿಚಾರಿಸಿದರು.
ವೈದ್ಯರಿಂದ ಚಿಕಿತ್ಸೆ ಕುರಿತು ಮಾಹಿತಿ ಪಡೆದು, ವಿದ್ಯಾರ್ಥಿಗೆ ಅಗತ್ಯ ವೈದ್ಯಕೀಯ ಸೌಲಭ್ಯಗಳನ್ನು ಸಮರ್ಪಕವಾಗಿ ಒದಗಿಸುವಂತೆ ಸೂಚಿಸಿದರು. ಬಳಿಕ ಕುಟುಂಬ ಸದಸ್ಯರಿಗೆ ಧೈರ್ಯ ತುಂಬಿ, ಭವಿಷ್ ಶೀಘ್ರ ಗುಣಮುಖರಾಗಿ ಮತ್ತೆ ವಿದ್ಯಾಭ್ಯಾಸಕ್ಕೆ ಮರಳಲಿ ಎಂದು ಹಾರೈಸಿದರು.
ಘಟನೆ ಹಿನ್ನೆಲೆ
ಬುಧವಾರ ರಾತ್ರಿ ಬಾಳೆಗದ್ದೆ ಸಮೀಪ ರಸ್ತೆ ದಾಟುತ್ತಿದ್ದ ವೇಳೆ ವಿದ್ಯಾರ್ಥಿಯ ಅಜ್ಜ ಸಿದ್ದರಾಜು ಅವರು ಬೈಕ್ ಡಿಕ್ಕಿಯಾಗಿ ಗಾಯಗೊಂಡಿದ್ದರು. ಅದೇ ಮಾರ್ಗವಾಗಿ ತೆರಳುತ್ತಿದ್ದ ಶಾಸಕ ಸಿಮೆಂಟ್ ಮಂಜು ಅವರು ಗಾಯಾಳುವನ್ನು ತಮ್ಮ ಕಾರಿನಲ್ಲೇ ಆಸ್ಪತ್ರೆಗೆ ದಾಖಲಿಸಿ ಪ್ರಥಮ ಚಿಕಿತ್ಸೆ ಒದಗಿಸಿ ಮಾನವೀಯತೆ ಮೆರೆದಿದ್ದರು.
ನಂತರ ಹೆಚ್ಚಿನ ಚಿಕಿತ್ಸೆಗೆ ಸಿದ್ದರಾಜು ಅವರನ್ನು ಆಂಬುಲೆನ್ಸ್ ಮೂಲಕ ಹಾಸನಕ್ಕೆ ಕರೆದೊಯ್ಯುವ ವೇಳೆ, ಅಜ್ಜನನ್ನು ನೋಡಲು ರಸ್ತೆ ದಾಟುತ್ತಿದ್ದ ಭವಿಷ್‌ಗೆ ಮತ್ತೊಂದು ಕಾರು ಡಿಕ್ಕಿ ಹೊಡೆದ ಪರಿಣಾಮ ಆತ ಗಂಭೀರವಾಗಿ ಗಾಯಗೊಂಡಿದ್ದಾನೆ.
ಈ ವೇಳೆ ಶಾಸಕರು, ವಿದ್ಯಾರ್ಥಿ ಸಂಪೂರ್ಣ ಗುಣಮುಖರಾಗಿ ಶೀಘ್ರವೇ ಸಹಜ ಜೀವನಕ್ಕೆ ಮರಳಲೆಂದು ಹಾರೈಸಿದರು.

