🔴ಅರಣ್ಯ ಇಲಾಖೆಯಲ್ಲಿ, ಸಿಬ್ಬಂದಿಗಳೊಂದಿಗೆ ಸ್ವಾತಂತ್ರ್ಯೋತ್ಸವವನ್ನು ಆಚರಿಸಿದ ಸಂಸ್ಕೃತಿ ಇಂಟರ್ನ್ಯಾಷನಲ್ ಶಾಲೆಯ ಪುಟಾಣಿಗಳು
ಸಕಲೇಶಪುರ: ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಸಂಸ್ಕೃತಿ ಇಂಟರ್ನ್ಯಾಷನಲ್ ಶಾಲೆಯ ವಿದ್ಯಾರ್ಥಿಗಳು ಅರಣ್ಯ ಇಲಾಖೆಯ ಸಿಬ್ಬಂದಿಗಳೊಂದಿಗೆ ಸೇರಿ ಸಂಭ್ರಮದಿಂದ ಸ್ವಾತಂತ್ರ್ಯೋತ್ಸವವನ್ನು ಆಚರಿಸಿದರು. ಈ ಸಂದರ್ಭದಲ್ಲಿ ಅರಣ್ಯ ಇಲಾಖೆಯ ಅಧಿಕಾರಿಗಳು ವಿದ್ಯಾರ್ಥಿಗಳಿಗೆ ಕಾಡು, ವನ್ಯಜೀವಿಗಳು ಹಾಗೂ ಪರಿಸರ ಸಂರಕ್ಷಣೆಯ ಕುರಿತು ಮಾಹಿತಿ ನೀಡುವ ಮೂಲಕ ಕಾರ್ಯಕ್ರಮವನ್ನು ಅರ್ಥಪೂರ್ಣವಾಗಿಸಿದರು.
ವಲಯ ಅರಣ್ಯಾಧಿಕಾರಿಗಳು ಹಾಗೂ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ (ಎಸಿಎಫ್) ಮಧುಸೂದನ್ ರವರು ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿ, ಕಾಡು ಪ್ರಾಣಿಗಳ ವಿವಿಧ ಪ್ರಭೇದಗಳು, ಅವುಗಳ ವಾಸಸ್ಥಳ, ಚಲನವಲನ, ಆಹಾರ ಪದ್ಧತಿ ಹಾಗೂ ವನ್ಯಜೀವಿಗಳ ಸಂರಕ್ಷಣೆಯ ಅಗತ್ಯತೆ ಕುರಿತು ಸರಳವಾಗಿ ವಿವರಿಸಿದರು. ಕಾಡು ಮತ್ತು ಕಾಡುಪ್ರಾಣಿಗಳ ರಕ್ಷಣೆಯಲ್ಲಿ ಮಕ್ಕಳ ಪಾತ್ರ ಹಾಗೂ ಪರಿಸರ ಸಮತೋಲನ ಕಾಪಾಡುವ ಮಹತ್ವದ ಬಗ್ಗೆಯೂ ಅರಿವು ಮೂಡಿಸಿದರು.
ಶಾಲೆಯ ಮುಖ್ಯ ಶಿಕ್ಷಕಿ ಪ್ರತಿಮಾ ಸಂತೋಷ್ ಮಾತನಾಡಿ, “ಸ್ವಾತಂತ್ರ್ಯೋತ್ಸವವನ್ನು ಕೇವಲ ಧ್ವಜಾರೋಹಣಕ್ಕೆ ಸೀಮಿತಗೊಳಿಸದೆ, ಅರಣ್ಯಾಧಿಕಾರಿಗಳ ಮೂಲಕ ಮಕ್ಕಳಿಗೆ ಕಾಡು ಮತ್ತು ವನ್ಯಜೀವಿಗಳ ಕುರಿತು ಮಾಹಿತಿ ನೀಡುವ ಮೂಲಕ ಅರ್ಥಪೂರ್ಣವಾಗಿ ಆಚರಿಸಲಾಗಿದೆ. ಚಿಕ್ಕ ವಯಸ್ಸಿನಿಂದಲೇ ಮಕ್ಕಳಲ್ಲಿ ಪರಿಸರ ಹಾಗೂ ವನ್ಯಜೀವಿಗಳ ಬಗ್ಗೆ ಕಾಳಜಿ ಬೆಳೆಸುವುದು ಅಗತ್ಯ” ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಸಹ ಶಿಕ್ಷಕಿಯರಾದ ಮೌಲ್ಯ, ಪವಿತ್ರ ಶ್ರೀಧರ್, ಆಶಿಕ ಮುರುಳಿ, ಶಶಿಕಲಾ, ಮೇಘ ಸುಧೀರ್, ಮಾಲಿನಿ ಸೇರಿದಂತೆ ಶಾಲೆಯ ಆಡಳಿತ ಮಂಡಳಿ, ಶಿಕ್ಷಕ ವೃಂದ, ಪೋಷಕರು,ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
previous post
next post
