Blog

ಹಾಡ್ಯ ಸರಕಾರಿ ಶಾಲೆ ವಿಲೀನಕ್ಕೆ ಗ್ರಾಮಸ್ಥರ ವಿರೋಧ

ಹಾಡ್ಯ ಸರ್ಕಾರಿ ಶಾಲೆ ವಿಲೀನಕ್ಕೆ ಗ್ರಾಮಸ್ಥರ ತೀವ್ರ ವಿರೋಧ.

(ಶಾಲೆ ಉಳಿಸುವಂತೆ ಶಿಕ್ಷಣ ಇಲಾಖೆಗೆ ಒತ್ತಾಯ.)

ಸಕಲೇಶಪುರ : ತಾಲೂಕಿನ ಹಾಡ್ಯ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯನ್ನು ಕೆಪಿಎಸ್ ಹೆತ್ತೂರು ಶಾಲೆಗೆ ವಿಲೀನಗೊಳಿಸುವ ಪ್ರಕ್ರಿಯೆಗೆ ಗ್ರಾಮಸ್ಥರು, ಎಸ್‌ಡಿಎಂಸಿ ಸದಸ್ಯರು, ಪೋಷಕರು ಹಾಗೂ ಗ್ರಾಮ ಪಂಚಾಯಿತಿ ಸದಸ್ಯರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.

ಸರ್ಕಾರದ ಆದೇಶದಂತೆ 5 ಕಿ.ಮೀ ವ್ಯಾಪ್ತಿಯೊಳಗಿನ ಸರ್ಕಾರಿ ಶಾಲೆಗಳನ್ನು ಕೆಪಿಎಸ್ ಹೆತ್ತೂರು ಶಾಲೆಗೆ ವಿಲೀನಗೊಳಿಸುವ ಪ್ರಕ್ರಿಯೆ ನಡೆಯುತ್ತಿದ್ದು, ಅದರ ಭಾಗವಾಗಿ ಹಾಡ್ಯ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯನ್ನೂ ವಿಲೀನಗೊಳಿಸಲು ಶಿಕ್ಷಣ ಇಲಾಖೆ ಮುಂದಾಗಿದೆ ಎನ್ನಲಾಗಿದೆ. ಈ ಕ್ರಮಕ್ಕೆ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿ ಶಾಲೆ ಉಳಿಸುವಂತೆ ಆಗ್ರಹಿಸಿದ್ದಾರೆ.

ಈ ಕುರಿತು ಶಾಲೆಯ ಎಸ್‌ಡಿಎಂಸಿ ಅಧ್ಯಕ್ಷ ಹೆಚ್.ಕೆ. ವಿಜಯ್ ಕುಮಾರ್ ಮಾತನಾಡಿ, “ಹಾಡ್ಯ ಸರ್ಕಾರಿ ಶಾಲೆ ಸುತ್ತಮುತ್ತಲಿನ ನಾಲ್ಕು ಗ್ರಾಮಗಳ ಬಡ ಮಕ್ಕಳ ಶಿಕ್ಷಣದ ಆಶಾಕಿರಣವಾಗಿದೆ. ಈ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡಿದ ಅನೇಕ ವಿದ್ಯಾರ್ಥಿಗಳು ಇಂದು ವಿವಿಧ ಕ್ಷೇತ್ರಗಳಲ್ಲಿ ಉತ್ತಮ ಸಾಧನೆ ಮಾಡಿದ್ದಾರೆ. ಇತಿಹಾಸ ಹೊಂದಿರುವ ಈ ಶಾಲೆಯನ್ನು ಮುಚ್ಚಿದರೆ ಗ್ರಾಮೀಣ ಭಾಗದ ಮಕ್ಕಳಿಗೆ ಶಿಕ್ಷಣ ಪಡೆಯುವುದು ಕಷ್ಟವಾಗುತ್ತದೆ. ಹೆತ್ತೂರು ಕೆಪಿಎಸ್ ಶಾಲೆಗೆ ತೆರಳಲು ದೂರದ ಸಮಸ್ಯೆ, ಕಾಡು ಪ್ರಾಣಿಗಳ ಹಾವಳಿ ಹಾಗೂ ಮಳೆಯ ಅವಾಂತರಗಳೂ ಎದುರಾಗುತ್ತವೆ. ಯಾವುದೇ ಕಾರಣಕ್ಕೂ ಶಾಲೆ ಮುಚ್ಚಲು ಅವಕಾಶ ನೀಡುವುದಿಲ್ಲ” ಎಂದು ಎಚ್ಚರಿಸಿದ್ದಾರೆ.

ಪ್ರಸ್ತುತ ಶಾಲೆಯಲ್ಲಿ 15 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದು, ಶಾಲೆಯನ್ನು ಮುಚ್ಚುವ ಬದಲು ಅಗತ್ಯ ಸೌಲಭ್ಯಗಳನ್ನು ಒದಗಿಸಿ ಅಭಿವೃದ್ಧಿಪಡಿಸಬೇಕು ಎಂದು ಗ್ರಾಮ ಪಂಚಾಯಿತಿ ಸದಸ್ಯ ಉಮೇಶ್ ಒತ್ತಾಯಿಸಿದ್ದಾರೆ.

ಗ್ರಾಮಸ್ಥರು, ಪೋಷಕರು ಹಾಗೂ ಎಸ್‌ಡಿಎಂಸಿ ಸದಸ್ಯರು ಶಿಕ್ಷಣ ಇಲಾಖೆ ಅಧಿಕಾರಿಗಳಾದ ಬಿಇಒ ಪುಷ್ಪಾ, ಬಿಆರ್‌ಪಿ ಹಾಗೂ ಸಿಆರ್‌ಪಿ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಸ್ಥಿತಿ ಪರಿಶೀಲಿಸಿ ಶಾಲೆಯನ್ನು ಉಳಿಸುವ ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದ್ದಾರೆ.

ಶಾಲೆ ವಿಲೀನದ ನಿರ್ಧಾರವನ್ನು ಹಿಂಪಡೆದು ಗ್ರಾಮೀಣ ಭಾಗದ ಬಡ ಮಕ್ಕಳ ಶಿಕ್ಷಣ ಹಿತವನ್ನು ಕಾಪಾಡಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

Related posts

ಆಟೋ ನಿಲ್ದಾಣ ಮಾಡಿ ಕೊಡುವಂತೆ ಮನವಿ

Bimba Prakashana

ಚಂಗಡಹಳ್ಳಿ ಹೆಗ್ಗಡಹಳ್ಳಿಯಲ್ಲಿ ಜಾತ್ರಾ ಮಹೋತ್ಸವ

Bimba Prakashana

ನಾರ್ವೆ ಎನ್ ಎಂ ರಾಜಶೇಖರ್ ನಿಧನ

Bimba Prakashana

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More