ಆಲೂರು ಗ್ಯಾಸ್ ವಿತರಕ ಏಜೆನ್ಸಿಯವರು ಹಾಗೂ ವಿತರಣೆಗೆ ನೇಮಿಸಿರುವ ಸಿಬ್ಬಂದಿ ಹಲವು ಗ್ರಾಹಕರಿಂದ ಒಟಿಪಿ ಪಡೆದು ಸಿಲಿಂಡರ್ ವಿತರಣೆ ಮಾಡದೇ ಕಾಳಸಂತೆಯಲ್ಲಿ ಗ್ಯಾಸ್ ಮಾರಾಟ ಮಾಡುತ್ತಿರುವ ಬಗ್ಗೆ ಗಂಭೀರ ಆರೋಪಗಳು ಕೇಳಿಬಂದಿವೆ ಎಂದು ಶಾಸಕರಾದ ಸಿಮೆಂಟ್ ಮಂಜು ಹೇಳಿದರು.
ಪಟ್ಟಣದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಗ್ಯಾಸ್ ವಿತರಣೆಯಲ್ಲಿ ಗ್ರಾಹಕರಿಗೆ ಆಗುತ್ತಿರುವ ತೊಂದರೆ ಕುರಿತು ಗ್ಯಾಸ್ ಏಜೆನ್ಸಿ ಪ್ರತಿನಿಧಿಗಳು ಹಾಗೂ ಅಧಿಕಾರಿ ವರ್ಗದ ಸಮ್ಮುಖದಲ್ಲಿ ನಡೆದ ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು.
ಕಳೆದ 15 ದಿನಗಳಿಂದ ಈ ಕುರಿತು ಮಾಧ್ಯಮಗಳಲ್ಲಿ ನಿರಂತರವಾಗಿ ಸುದ್ದಿಗಳು ಪ್ರಕಟವಾಗುತ್ತಿದ್ದು, ಪ್ರಕರಣದ ತನಿಖೆಗೆ ಅಧಿಕಾರಿಗೆ ಸೂಚನೆ ನೀಡಲಾಗಿದೆ. ಗ್ರಾಹಕರು
ಗ್ಯಾಸ್ ಬುಕ್ ಮಾಡಿದ 45 ದಿನಗಳೊಳಗೆ ಸಿಲಿಂಡರ್ ವಿತರಣೆ ಮಾಡುವ ವ್ಯವಸ್ಥೆ ಮಾಡಲಾಗುವುದು. ಗ್ರಾಹಕರು ಕಡ್ಡಾಯವಾಗಿ ಗ್ಯಾಸ್ ಗೋಡೌನ್ ಅಥವಾ ಕಚೇರಿಯಲ್ಲಿ ಒಟಿಪಿ ನೀಡಿ ತಮ್ಮ ಸಿಲಿಂಡರ್ ಪಡೆದುಕೊಳ್ಳಬೇಕು. ತಮ್ಮ ಸರದಿ ಬರುವವರೆಗೂ ಅನಾವಶ್ಯಕವಾಗಿ ಕಚೇರಿ ಬಳಿ ಹೋಗಿ ಸಮಯ ವ್ಯರ್ಥ ಮಾಡಿಕೊಳ್ಳಬಾರದು ಎಂದು ಮನವಿ ಮಾಡಿದರು.
ಈ ಹಿಂದೆ ಇದ್ದಂತೆ ತಕ್ಷಣ ಸಿಲಿಂಡರ್ ದೊರೆಯುವ ಪರಿಸ್ಥಿತಿ ಇಲ್ಲ. ಮಧ್ಯಪ್ರಾಚ್ಯ ದೇಶಗಳಲ್ಲಿ ಯುದ್ಧ ಆರಂಭವಾದ ಬಳಿಕ ಗ್ಯಾಸ್ ಪೂರೈಕೆಯಲ್ಲಿ ವ್ಯತ್ಯಾಸ ಉಂಟಾಗಿದ್ದು, ಸಿಲಿಂಡರ್ ಪ್ರಮಾಣ ಕಡಿಮೆಯಾಗಿರುವುದರಿಂದ ಬುಕ್ ಮಾಡಿದ 45 ದಿನಗಳೊಳಗೆ ವಿತರಣೆ ಮಾಡಲಾಗುವುದು.
ಈ ವೇಳೆ ಗ್ಯಾಸ್ ಏಜೆನ್ಸಿಯವರನ್ನು ತರಾಟೆಗೆ ತೆಗೆದುಕೊಂಡ ಶಾಸಕರು, ಹಾಸನ ಜಿಲ್ಲೆಯಲ್ಲಿಯೇ
ಆಲೂರು ತಾಲೂಕಿನ ಗ್ಯಾಸ್ ಏಜೆನ್ಸಿಯ ವಿರುದ್ಧ ಗಂಭೀರ ಆರೋಪಗಳು ಕೇಳಿಬರುತ್ತಿವೆ. ಗ್ರಾಹಕರಿಗೆ ವಿತರಿಸಬೇಕಾದ ಸಿಲಿಂಡರ್‌ಗಳನ್ನು ಕಾಳಸಂತೆಯಲ್ಲಿ ಹೆಚ್ಚಿನ ಹಣಕ್ಕೆ ಮಾರಾಟ ಮಾಡಲಾಗುತ್ತಿದೆ ಎಂಬುದಕ್ಕೆ ಮಾಧ್ಯಮಗಳು ಸಾಕ್ಷಿ ಸಮೇತ ವರದಿ ಮಾಡುತ್ತಿದ್ದರೂ, ಏಜೆನ್ಸಿಯವರು ತಮ್ಮ ನಡವಳಿಕೆಯನ್ನು ತಿದ್ದಿಕೊಳ್ಳದೆ ಉದ್ದಟತನ ಪ್ರದರ್ಶಿಸುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಸಭೆಯಲ್ಲಿ ಉಪ ವಿಭಾಗಾಧಿಕಾರಿ ಹುಲ್ಲುಮನಿ ತಿಮ್ಮಣ್ಣನವರ್, ತಹಸೀಲ್ದಾರ್ ಮಲ್ಲಿಕಾರ್ಜುನ, ಆಹಾರ ಇಲಾಖೆ ಜಂಟಿ ನಿರ್ದೇಶಕರು, ತಾ.ಪಂ. ಇಓ ಸುಬ್ರಹ್ಮಣ್ಯ ಶರ್ಮಾ, ಪ.ಪಂ. ಮುಖ್ಯಾಧಿಕಾರಿ ಮಂಜುನಾಥ್, ಆಹಾರ ನಿರೀಕ್ಷಕ ಮೋಹನ್ ಕುಮಾರ್, ಗ್ಯಾಸ್ ವಿತರಕ ಏಜೆನ್ಸಿ ಪ್ರತಿನಿಧಿ ಮಂಜುನಾಥ್ ಉಪಸ್ಥಿತರಿದ್ದರು.
previous post
