ಜೆಡಿಎಸ್ ಮುಖಂಡರಿಂದ ಚೆನ್ನಮ್ಮರವರಿಗೆ ಶ್ರದ್ದಾಂಜಲಿ ಕಾರ್ಯಕ್ರಮ
ಆಲೂರು : ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಅವರ ಪತ್ನಿ ಚನ್ನಮ್ಮ ಅವರ ನಿಧನಕ್ಕೆ ಆಲೂರು ತಾಲ್ಲೂಕು ಜೆಡಿಎಸ್ ಮುಖಂಡರು ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಿದರು.
ಜೆಡಿಎಸ್‌ನ ಮಾಜಿ ಶಾಸಕ ಹೆಚ್.ಕೆ.ಕುಮಾರಸ್ವಾಮಿ ಹಾಗೂ ತಾಲ್ಲೂಕು ಅಧ್ಯಕ್ಷ ಕೆ ಎಸ್ ಮಂಜೇಗೌಡ ಹಾಗೂ ಕಾರ್ಯಕರ್ತರು ಚನ್ನಮ್ಮ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ, ಅವರ ಆತ್ಮಕ್ಕೆ ಚಿರಶಾಂತಿ ಸಿಗಲಿ ಹಾಗೂ ದೇವೇಗೌಡರ ಕುಟುಂಬಕ್ಕೆ ದುಃಖ ಭರಿಸುವ ಶಕ್ತಿ ದೊರೆಯಲಿ ಎಂದು ಪ್ರಾರ್ಥಿಸಿದರು.
ಬಳಿಕ ಕೆಲಕಾಲ ಮೌನಾಚರಣೆ ನಡೆಸಿ ಗೌರವ ನಮನ ಸಲ್ಲಿಸಿದರು. ಈ ಸಂದರ್ಭದಲ್ಲಿ ಮಾಜಿ ಶಾಸಕರಾದ ಹೆಚ್ ಕೆ ಕುಮಾರಸ್ವಾಮಿ ಮಾತನಾಡಿ ಚೆನ್ನಮ್ಮ ರವರ ಅಗಲಿಕೆ ಜೆಡಿಎಸ್ ಕುಟುಂಬಕ್ಕೆ ಅಪಾರ ದುಃಖವನ್ನುಂಟು ಮಾಡಿದೆ. ಪ್ರಧಾನಮಂತ್ರಿಯವರ ಪತ್ನಿಯಾಗಿದ್ದರೂ ಯಾವುದೇ ಅಹಂಕಾರವಿಲ್ಲದೆ ಮನೆಗೆ ಬಂದ ಪ್ರತಿಯೊಬ್ಬರನ್ನೂ ತಾಯಿಯಂತೆ ಮಮತೆಯಿಂದ ಸ್ವಾಗತಿಸಿ ಗೌರವಿಸುತ್ತಿದ್ದರು ಅವರ ಸರಳತೆ, ಕರುಣೆ ಮತ್ತು ಮಾನವೀಯ ಗುಣಗಳು ಸದಾ ಸ್ಮರಣೀಯವಾಗಿರಲಿವೆ ಎಂದು ಹೇಳಿದರು.
ತಾಲ್ಲೂಕು ಜೆ ಡಿ ಎಸ್ ಅಧ್ಯಕ್ಷ ಕೆ ಎಸ್ ಮಂಜೇಗೌಡ ಮಾತನಾಡಿ,
ಚನ್ನಮ್ಮ ಅವರು ಎಲ್ಲರನ್ನು ಪ್ರೀತಿ ಮತ್ತು ಆತ್ಮೀಯತೆಯಿಂದ ಕಾಣುತ್ತಿದ್ದ ಆದರ್ಶ ಗೃಹಿಣಿಯಾಗಿದ್ದರು ಅವರ ಅಗಲಿಕೆ ಸಮಾಜಕ್ಕೆ ತುಂಬಲಾರದ ನಷ್ಟವಾಗಿದ್ದು, ಅವರ ಆತ್ಮಕ್ಕೆ ಚಿರಶಾಂತಿ ದೊರೆಯಲಿ ಎಂದು ಪ್ರಾರ್ಥಿಸಿದರು.
ಜೆ ಡಿ ಎಸ್ ಮುಖಂಡ ನಟರಾಜು ನಾಕಲಗೂಡು ಮಾತನಾಡಿ, ‘ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರ ಪತ್ನಿ ಚನ್ನಮ್ಮ ಅವರು ಕುಟುಂಬದ ಶಕ್ತಿಯಾಗಿ ಮಾದರಿಯಾಗಿದ್ದರು
ದೇಶದ ರಾಜಕೀಯ ವ್ಯವಸ್ಥೆಗೆ ಪ್ರಧಾನಿ, ಮುಖ್ಯಮಂತ್ರಿ ಹಾಗೂ ಸಚಿವರನ್ನು ಕೊಡುಗೆಯಾಗಿ ನೀಡಿದ ಮಹಾತಾಯಿ ಅವರು’ ಎಂದು ಬಣ್ಣಿಸಿದರು.
‘ಚನ್ನಮ್ಮ ಅವರಲ್ಲಿದ್ದ ತಾಳ್ಮೆ ಮತ್ತು ಸಂಸ್ಕಾರದಿಂದ ಕುಟುಂಬದಲ್ಲಿ ಉತ್ತಮ ನಾಯಕರು ರೂಪುಗೊಳ್ಳಲು ಸಾಧ್ಯವಾಯಿತು, ಅವರ ಆದರ್ಶಗಳು ಪ್ರತಿ ಮನೆ-ಮನದಲ್ಲೂ ಹಸಿರಾಗಿ ಉಳಿಯಲಿವೆ’ ಎಂದರು.
ಈ ಸಂದರ್ಭದಲ್ಲಿ ಮಾಜಿ ಶಾಸಕ ಹೆಚ್ ಕೆ ಕುಮಾರಸ್ವಾಮಿ ತಾಲ್ಲೂಕು ಅಧ್ಯಕ್ಷ ಕೆ ಎಸ್ ಮಂಜೇಗೌಡ ಹಾಗೂ ಜೆ ಡಿ ಎಸ್. ಮುಖಂಡರಿದ್ದರು.
previous post
