ನಾಗೇಶ್ ಎಂ ಎಚ್.
ಮಾಗೇರಿ.
MA (His,Soc,kan) M.Sc(Psy), M.Ed, M.phill,
PGDHE,PGDAS,PGDKS,DIill,NET, ಪದವಿಗಳ ಸರಮಾಲೆ ಕೊರಳಿಗೆ ಹಾಕಿಸಿಕೊಂಡ
ಶತೇಂದ್ರಕುಮಾರ್ ಪಿ ಬಿ.
ಡಾ.ಬಿ.ಆರ್.ಅಂಬೇಡ್ಕರ್ ಹೇಳಿರುವಂತೆ “ಶಿಕ್ಷಣದಿಂದ ಯಾರನ್ನೂ ಸಹ ವಂಚಿತರನ್ನಾಗಿ ಮಾಡಬಾರದು, ಇದು ಈ ದೇಶದ ಎಲ್ಲಾ ಜನರನ್ನು ತಲುಪಬೇಕು ಮತ್ತು ಶೋಷಿತ
ವರ್ಗದವರು ಅದನ್ನು ಕನಿಷ್ಠ ವೆಚ್ಚದಲ್ಲಿ
ಪಡೆಯುವಂತಿರಬೇಕು.” ಆದ್ದರಿಂದ ಅವರು
ಸಂವಿಧಾನದಲ್ಲಿ ಶಿಕ್ಷಣವನ್ನು ಈ ದೇಶದ ಪ್ರತಿಯೊಬ್ಬ
ಪ್ರಜೆಯ ಮೂಲಭೂತ ಹಕ್ಕಾಗಿ ನೀಡಿದರು… ಈ ವಿಶ್ವ ರತ್ನ ಹೇಳಿದ ಮಾತುಗಳನ್ನು ಕಾಯಾ, ವಾಚ, ಮನಸ, ಪಾಲಿಸಿ ಶಿಕ್ಷಣ ಪಡೆದು ಎಂಟು ಪದವಿಗಳನ್ನು ಮೂಡಿಗೆರಿಸಿಕೊಂಡು.. ಪಡೆದ ಶಿಕ್ಷಣವನ್ನು ಗುರುವಾಗಿ ಸಾವಿರಾರು ವಿದ್ಯಾರ್ಥಿಗಳಿಗೆ ಧಾರೆ ಎರೆಯುತ್ತಿರುವ ನಮ್ಮೂರ ಸಾಧಕ ಶತೇಂದ್ರ ಕುಮಾರ್ ನಮ್ಮ ಹೆಮ್ಮೆ.
ದಟ್ಟಮಲೆನಾಡಿನ, ಪುಟ್ಟ ಹಳ್ಳಿಯಾದ ವನಗೂರು ಗ್ರಾನ ಪಂಚಾಯತಿ ವ್ಯಾಪ್ತಿಯ ಪಟ್ಲ ಎಂಬ ಸಕಲೇಶಪುರದ ಗಡಿಯಂಚಿನ ಗ್ರಾಮ. ಈ ಗ್ರಾಮದ ಶ್ರೀಮತಿ ಮಂಜುಳ ಮತ್ತು ಶ್ರೀ ಬಸವಯ್ಯ ಪಿ ಸಿ
(ನಿವೃತ್ತ ಸಿನಿಯರ್ ಹೆಲ್ತ್ ಇನ್ಸ್ ಪೆಕ್ಟರ್) ರವರ ಮಗನಾಗಿ 1979 ಫೆಬ್ರವರಿ 15ರಂದು ಆಯುಷ್ಮಾನ್ ಶತೇಂದ್ರಕುಮಾರ್ ರವರು ಜನಿಸಿದರು. ಶ್ರೀಯುತರಿಗೆ ವರಮಹಾಲಕ್ಷ್ಮೀ ಎಂಬ ಅಕ್ಕ, ಪಿ.ಬಿ. ಜ್ಞಾನೆಂದ್ರಕುಮಾರ್ (ಜೆ.ಕೆ) ಎಂಬ ಅಣ್ಣ, ನಳಿನ, ಸಂಘರ್ಷಕುಮಾರಿ ಎಂಬ ತಂಗಿಯರು ಇದ್ದಾರೆ.
ಪ್ರಾಥಮಿಕ ವಿದ್ಯಾಭ್ಯಾಸವನ್ನು ಸಕಲೇಶಪುರದ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ, ಪ್ರೌಢಶಾಲಾ ಶಿಕ್ಷಣವನ್ನು ಮಾನಸ ಪ್ರೌಢ ಶಾಲೆಯಲ್ಲಿ ಹಾಗೂ ಪದವಿ ಪೂರ್ವ ಶಿಕ್ಷಣವನ್ನು ಗೌತಮ ಪದವಿ ಪೂರ್ವಕಾಲೇಜು ಸಕಲೇಶಪುರದಲ್ಲಿ ಪೂರೈಸಿದ ಇವರ ಮುಂದಿನ ಶಿಕ್ಷಣದ ಪಯಣ ಮೈಸೂರಿನತ್ತ ತೆರಳಿತ್ತು. ಬಿ.ಎ ಪದವಿಯನ್ನು ಮಹಾರಾಜ ಕಾಲೇಜು, ಮೈಸೂರಿನಲ್ಲಿ ಎಂ,ಎ
( ಸಮಾಜ ಶಾಸ್ತ್ರ) ಪದವಿಯನ್ನು ಮಾನಸಗಂಗೋತ್ರಿಯಲ್ಲಿ ಪೂರೈಸಿ, ನಂತರ ಸಕಲೇಶಪುರದ ಬಿ.ಆರ್.ಡಿ.ಎಂ ಶಿಕ್ಷಣ ಮಹಾವಿದ್ಯಾಲಯದಲ್ಲಿ ಬಿ.ಇಡಿ ಪದವಿಯನನ್ನು ಪೂರೈಸಿ,
ಮಾನಸಗಂಗೋತ್ರಿಯಲ್ಲಿ ಎಂ.ಇಡಿ ಪದವಿಯನ್ನು ಪೂರೈಸಿದರು.
ನಂತರ ಎನ್.ಡಿಆರ್.ಕೆ, ಶಿಕ್ಷಣ ಮಹಾವಿದ್ಯಾಲಯದಲ್ಲಿ ಹಾಗೂ NDRK D,Ed ಕಾಲೇಜಿನಲ್ಲಿ 2005-2012ರ ವರೆಗೆ ಸಪ್ತವರ್ಷಗಳ ಕಾಲ ಉಪನ್ಯಾಸಕರಾಗಿ ಸೇವೆ ಸಲ್ಲಿಸಿ ಸಾವಿರಾರು ವಿದ್ಯಾರ್ಥಿಗಳ ಜ್ಞಾನಾಭಿವೃದ್ಧಿಗೆ ಪ್ರಯತ್ನಿಸಿದ್ದು ಇವರ ಪಾಲಿಗೆ ಅವಿಸ್ಮರಣೀಯ ಮತ್ತು ಬದುಕಿನ ತಿರುವಿನ ಘಟ್ಟ ಎಂಬುದು ಇವರದೇ ಮಾತುಗಳಲ್ಲಿ ಪ್ರತಿಧ್ವನಿಸುತ್ತದೆ.
ಶತೇಂದ್ರಕುಮಾರ್ ರವರು ಉಪನ್ಯಾಸಕರಾಗಿ ಸೇವೆಸಲ್ಲಿಸಲು ಆರಂಭಿಸಿದಂತೆ ಅವರ ಮತ್ತೊಂದು ವಿದ್ಯಾಭ್ಯಾಸದ, ಓದುವಿಕೆಯ ಮಗ್ಗುಲು ಆರಂಭವಾಗುತ್ತದೆ.ಇವರು
ಪಡೆದಿರುವ ವಿದ್ಯಾಭ್ಯಾಸದ ಅರ್ಹತೆಗಳು MA (His,Soc,kan) M.Sc(Psy), M.Ed, M.phill,
PGDHE,PGDAS,PGDKS,DIill,NET, ಪದವಿಗಳೇ ಇದಕ್ಕೆ ಪ್ರತಿಬಿಂಬವಾಗಿ ನಿಲ್ಲುತ್ತವೆ.
ಈ ವಿದ್ಯಾರ್ಹತೆಯನ್ನು ಪಡೆಯುವ ಹಂತದಲ್ಲಿ MA ಸಮಾಜಶಾಸ್ತ್ರದ ಪದವಿಯಲ್ಲಿ ಚಿನ್ನದ ಪದಕವನ್ನು ಪಡೆದಿದ್ದಾರೆ. ಚಿನ್ನದ ಪದಕ ಪಡೆದರೂ ಆಯ್ಕೆಯ
ಪಕ್ಷಪಾತದಿಂದಾಗಿ P.hdಯನ್ನು ಮಾಡಬಾರದೆಂದೇ ನಿರ್ಧರಿಸಿ ಪದವಿಗಳ ಸಂಖ್ಯೆಯನ್ನು ಹೆಚ್ಚಿಸಿಕೊಂಡಿರುವ ಬಗ್ಗೆ ಹೆಮ್ಮೆ ಇದೆ ಎನ್ನುತ್ತಾರೆ.
2016ರಲ್ಲಿ ಬನವಾಸೆಯ ವಿನುತ ಬಿ.ಬಿ ( 2023ರಲ್ಲಿ GPT ಶಿಕ್ಷಕರಾಗಿ ನೇಮಕವಾಗಿ ಮಾರನಹಳ್ಳಿ ಸರ್ಕಾರಿ ಶಾಲೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ) ರವರೊಂದಿಗೆ ವಿವಾಹವಾಗಿ , ಸಹಿ ಎಸ್ ಕುಮಾರ್, ಮಗ ಸಹಿತ್ ಎಸ್ ಕುಮಾರ್ ಸಂತೃಪ್ತ ಜೀವನ ನಡೆಸುತ್ತಿರುವ ಇವರಿಗೆ ಕುಟುಂಬ ವರ್ಗ
ಮತ್ತು ಸ್ನೇಹಿತರು, ಮತ್ತು ಸಹದ್ಯೋಗಿಗಳ ವ್ಯಾಪಕ ಬೆಂಬಲ, ಸಹಕಾರದೊರೆಯುತ್ತಿದೆ. ಪುಸ್ತಕ ಪ್ರೇಮಿಯಾದ ಇವರು ತಮ್ಮ ವೈಯಕ್ತಿಕ ಗ್ರಂಥಲಾಯದಲ್ಲಿ 1000ಕ್ಕೂ ಹೆಚ್ಚು ಪುಸ್ತಕಗಳನ್ನು ಸಂಗ್ರಹಿಸಿದ್ದಾರೆ. ಪುಸ್ತಕ ಓದುವುದು, ಪುಸ್ತಕ ಸಂಗ್ರಹಿಸುವ ಹವ್ಯಾಸದ ಜೊತೆಜೊತೆಗೆ ಹಾಡುವುದು, ಲೇಖನ-ಕವಿತೆಗಳನ್ನು ಬರೆಯುವುದು ಇವರ
ಬಲುಮುಖ್ಯಹವ್ಯಾಸವಾಗಿದೆ. ಭಾರತಸರ್ಕಾರಕ್ಕೆ ಬೆಂಗಳೂರಿನ ISEC ಸಂಸ್ಥೆಯಡಿಯಲ್ಲಿ ನಲಿ-ಕಲಿ ಶಿಕ್ಷಣಕ್ಕೆ
ಸಂಬಂಧಿಸಿದ ಹಾಸನ ಜಿಲ್ಲೆಯ ವರದಿ ತಯಾರಿಕೆಯಲ್ಲಿ ತೊಡಗಿಸಿಕೊಂಡ ಇವರು ಸಾಹಿತ್ಯ ಸಮ್ಮೇಳನಗಳಲ್ಲಿ, ಕಾರ್ಯಕ್ರಮಗಳಲ್ಲಿ ಕವನವಾಚನ ಮಾಡಿದ್ದಾರೆ.
2009ರಲ್ಲಿ ಪ್ರಥಮ ಸಹಾಯಕರ, 2010ರಲ್ಲಿ ದ್ವೀತಿಯ ದರ್ಜೆ ಸಹಾಯಕರ ಹುದ್ದೆಗಾಗಿ ನಡೆದ ಪರೀಕ್ಷೆಯಲ್ಲಿ
ಉತ್ತೀರ್ಣರಾಗಿದ್ದಾರೂ ಸದರಿ ಹುದ್ದೆಗಳಿಗೆ ತೆರಳಲಿಲ್ಲ. ನಂತರ 2011 ರಲ್ಲಿ KES ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ಸಂದರ್ಶನಕ್ಕೂ ಆಯ್ಕೆಯಾಗಿದ್ದರು. ನಂತರ 2011ರಲ್ಲಿ ನಡೆದ ಮೊರಾರ್ಜಿದೇಸಾಯಿ ವಸತಿಶಾಲೆಗಳ ಪ್ರಾಂಶುಪಾಲರ ಹುದ್ದೆಗೆ ಆಯ್ಕೆಯಾಗಿ, ಮಲೆನಾಡಿನ ತನವನ್ನು ಮೈಗೂಡಿಸಿಕೊಂಡು ಸದ್ಯ, ಕರ್ನಾಟಕ ಸರ್ಕಾರವು ಗ್ರಾಮೀಣ ಪ್ರತಿಭಾವಂತ ಬಡ ವಿದ್ಯಾರ್ಥಿಗಳಿಗಾಗಿ ಸ್ಥಾಪಿಸಿರುವ ವಸತಿ ಶಾಲೆಗಳಲ್ಲಿ ಒಂದಾದ ಮೊರಾರ್ಜಿ ದೇಸಾಯಿ ವಸತಿ ಶಾಲೆ ಬ್ಯಾಕರವಳ್ಳಿಯಲ್ಲಿ2012 ರಿಂದ
ಪ್ರಾಂಶುಪಾಲರಾಗಿ ಸೇವೆ ಸಲ್ಲಿಸುತ್ತಿದ್ದಾರೆ ನಮ್ಮ ಹೆಮ್ಮೆಯ ಶತೇಂದ್ರಕುಮಾರ್.
ದಿನೂರವರು ಬರೆದ “ದೇಸೀಮಾತು ಕೃತಿಗೆ ಬೆನ್ನುಡಿ ಬರದ ಇವರು ಜ್ಞಾನಕೋಳ, ಜ್ಞಾನಬುತ್ತಿ, ಮತ್ತಿತರ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಪುಸ್ತಕ ರಚಿಸುವಲ್ಲಿ ಇತರರೊಂದಿಗೆ
ಸಹಕರಿಸಿದ್ದಾರೆ, ಮೊರಾರ್ಜಿದೇಸಾಯಿ/ಆದರ್ಶ/ ವಸತಿಶಾಲೆಗಳ ಪ್ರವೇಶ ಪರೀಕ್ಷೆಗಾಗಿ ಮಾರ್ಗದರ್ಶಿ ಕೈಪಿಡಿ “ಸೋಪಾನ” ವನ್ನು ತಮ್ಮ ಪ್ರಧಾನ ಸಂಪಾದಕತ್ವದಲ್ಲಿ ನಿರಂತರ ನಾಲ್ಕು ವರ್ಷಗಳಿಂದ ಹೊರತರುತ್ತಿದ್ದಾರೆ. ಸದ್ಯದಲ್ಲಿಯೇ ಕವನ ಸಂಕಲನ ಮತ್ತು ಲೇಖನಗಳ ಪುಸ್ತಕಗಳನ್ನು ಹೊರತರುವ ಉಮ್ಮೇದಿಯಲ್ಲಿದ್ದಾರೆ. ಇವರ ಸಾಹಿತ್ಯ ಪ್ರೇಮವನ್ನು ತಾವು ಕಾರ್ಯನಿರ್ವಹಿಸುತ್ತಿರುವ ಶಾಲೆಯಲ್ಲಿಯೂ ಮುಂದುವರೆಸುತ್ತಿರುವ
ಇವರು ತಮ್ಮ ವಿದ್ಯಾರ್ಥಿಗಳಿಂದ ಪ್ರತೀವಾರವು “ಚಿಗುರು”
ಹೆಸರಿನ ವಾರಪತ್ರಿಕೆಯನ್ನು ತಮ್ಮ ಸಹದ್ಯೋಗಿಗಳ ಸಹಕಾರದೊಂದಿಗೆ ಪಕಟಿಸುತ್ತಿದ್ದಾರೆ. ಅಲ್ಲದೇ ವಿದ್ಯಾರ್ಥಿಗಳ ಜನುಮದಿನಕ್ಕೆ ಇಂಗ್ಲೀಷ್ ನ ” Happy Birthday to you……” ಹಾಡಿನಬದಲಾಗಿ “ಪ್ರಾರ್ಥಿಸುವೆವು ನಾವು ನಿನ್ನ ಜನುಮದಿನ ಇಂದು” ಎಂಬ
ಕನ್ನಡ ಗೀತೆಯನ್ನು ಬರೆದು ಸಹದ್ಯೋಗಿಗಳಾದ ಅಭಿಷೇಕ್ ನವೀನರವರಿಂದ ರಾಗ ಸಂಯೋಜಿಸಿ ಶುಭಾಷಯ ಹೇಳಿಸುತ್ತಿದ್ದಾರೆ.
ವಿದ್ಯಾರ್ಥಿಗಳನ್ನು ಗದ್ದೆಗೆ ಕರೆದೊಯ್ದು ನಾಟಿಮಾಡಿಸಿ ಇರವು ಪಾಠದ ಬಗೆಗೆ ಪ್ರತ್ಯಕ್ಷಿಕೆ ನೀಡುವ, ಶಾಲಾ ಆವರಣದಲ್ಲಿ 25 ಚದರಡಿಗಳಲ್ಲಿ ಭಾರತ ಭೂಪಟ
ಮತ್ತು ಅಂಬೇಡ್ಕರ್‌ರವರ ಚಿತ್ರವನ್ನು ಮಕ್ಕಳೇ ನಿಂತು ರಚಿದಂತಹ,ವಿನೂತನ ಕಾರ್ಯಗಾರಗಳನ್ನು ಮಾಡುತ್ತಾ ಶಾಲೆಯ ಕೀರ್ತಿಯನ್ನು ಪಸರಿಸುತ್ತಿರುವ ಇವರು,
ವಿದ್ಯಾರ್ಥಿಗಳಿಗೆ ಪೋಷಕರ ಸಹಕಾರದಿಂದ ಪ್ರತೀವಿದ್ಯಾರ್ಥಿಗೆ ಒಂದು “ಸ್ಪರ್ಧಾವಿಜೇತ,
“ಸ್ಪರ್ಧಾಸ್ಫೂರ್ತಿ” ಯಂತಹ ಪುಸ್ತಕಗಳನ್ನು ದೊರೆಯುವಂತೆ ಮಾಡಿ ಸ್ಪರ್ಧಾತ್ಮಕ
ಪರೀಕ್ಷೆಗಳಿಗೆ ಇಂದಿನಿಂದಲೇ ಸಜ್ಜುಗೊಳಿಸುತ್ತಿದ್ದಾರೆ, ಅಲ್ಲದೇ ಸಾಹಿತ್ಯಕವಾಗಿ ಮಾತ್ರವಲ್ಲದ
ಶೈಕ್ಷಣಿಕವಾಗಿಯೂ ಶಾಲೆಯನ್ನು ಉನ್ನತಿಗೆ ಕರೆದೊಯುತ್ತಿರುವ ಇವರ ನೇತ್ರತ್ವದ ಶಾಲಾ
ಬಳಗವು 829 ಶಾಲೆಗಳಿರುವ ಕ್ರೈಸ್ ಸಂಸ್ಥೆಯಲ್ಲಿ (KREIS) SSLC ಫಲಿತಾಂಶದಲ್ಲಿ ಇಡೀ ರಾಜ್ಯಕ್ಕೆ 14
ನೇ ಸ್ಥಾನ ಪಡೆದುದಲ್ಲದೆ ಹಾಸನ ಜಿಲ್ಲಾ ವಸತಿಶಾಲೆಗಳಲ್ಲಿ ಪ್ರಥಮ ಸ್ಥಾನವನ್ನು ಪಡೆದು ಶಾಲೆಗೆ ಕೀರ್ತಿ
ತಂದಿದ್ದಾರೆ.
ಇಂತಹ ಪ್ರತಿಭಾನ್ವಿತರು 2026-27ನೇ ಸಾಲಿನ ತಾಲ್ಲೂಕು ಉತ್ತಮ ಶಿಕ್ಷಕ ಪ್ರಶಸ್ತಿಗೆ ಭಾಜನವಾಗಿರುವುದು ಇನ್ನಷ್ಟು ಹೆಮ್ಮೆ.
ಶ್ರೀಯುತರ ವೃತ್ತಿ ಸೇವೆ ಶತಕಾಲಗಳ ಕಾಲ ಮುನ್ನಡೆಯಲಿಯೆಂದು ಹಾರೈಸುತ್ತಾ ಹಲವಾರು ಪ್ರಶಸ್ತಿಗಳನ್ನು ಪಡೆದಿರುವ ಇವರಿಗೆ “ತಾಲ್ಲೂಕು ಉತ್ತಮ ಶಿಕ್ಷಕ ಪ್ರಶಸ್ತಿ -2026” ಲಭಿಸಿರುವುದಕ್ಕೆ ಅವರ ಸ್ನೇಹಿತ ಬಳಗ, ನೆಚ್ಚಿನ ವಿದ್ಯಾರ್ಥಿಗಳು, ಸಾರ್ವಜನಿಕರು ಪ್ರಶಂಸೆಗಳೊಂದಿಗೆ ಅಭಿನಂದನೆ ಸಲ್ಲಿಸಿರುತ್ತಾರೆ.
next post
