ಅಧಿಕ ಇಳುವರಿಗಾಗಿ ಯಾಂತ್ರಿಕೃತ ಬತ್ತ ನಾಟಿ ಅಳವಡಿಸಿಕೊಳ್ಳಿ: ರೈತರಿಗೆ ಕೃಷಿ ಇಲಾಖೆಯ ಸಲಹೆ
ಸಕಲೇಶಪುರ, : ಕೃಷಿ ಇಲಾಖೆಯ ಕೇಂದ್ರ ಪುರಸ್ಕೃತ ಆತ್ಮ (ATMA) ಯೋಜನೆ ಅಡಿಯಲ್ಲಿ ಅಧಿಕ ಇಳುವರಿಗಾಗಿ ಬತ್ತದ ಸಮಗ್ರ ಬೆಳೆ ನಿರ್ವಹಣೆ ಕುರಿತು ರೈತರ ಕ್ಷೇತ್ರ ಪಾಠ ಶಾಲೆಯ ಮೊದಲ ಅಧಿವೇಶನವನ್ನು ರೈತರ ಜಮೀನಿನಲ್ಲಿ ಯಾಂತ್ರಿಕೃತ ಬತ್ತ ನಾಟಿ ಮಾಡುವ ಮೂಲಕ ಚಾಲನೆ ನೀಡಲಾಯಿತು.
ಕಾರ್ಯಕ್ರಮದಲ್ಲಿ ಕೃಷಿ ಇಲಾಖೆಯ ತಾಲೂಕು ತಾಂತ್ರಿಕ ವ್ಯವಸ್ಥಾಪಕರಾದ ಶ್ರವಣ್ ಕುಮಾರ್ ಹಾಗೂ ಸಹಾಯಕ ತಾಂತ್ರಿಕ ವ್ಯವಸ್ಥಾಪಕರಾದ ಸುಷ್ಮಾ ಕೆ.ಎಸ್. ಅವರು ಯಾಂತ್ರಿಕೃತ ಬತ್ತ ನಾಟಿಯ ಉಪಯೋಗಗಳು, ನಾಟಿ ಮಾಡುವ ವಿಧಾನ, ಕಡಿಮೆ ಸಮಯದಲ್ಲಿ ಹೆಚ್ಚಿನ ವಿಸ್ತೀರ್ಣದಲ್ಲಿ ನಾಟಿ ಮಾಡುವ ಅನುಕೂಲ, ಕಾರ್ಮಿಕರ ಕೊರತೆಗೆ ಪರಿಹಾರ ಹಾಗೂ ಉತ್ಪಾದನಾ ವೆಚ್ಚ ತಗ್ಗಿಸುವ ಬಗ್ಗೆ ರೈತರಿಗೆ ವಿವರವಾದ ಮಾಹಿತಿ ನೀಡಿದರು.
ಬಳಿಕ ರೈತರ ಜಮೀನಿನಲ್ಲಿ ಸ್ವತಃ ಯಾಂತ್ರಿಕೃತ ಬತ್ತ ನಾಟಿ ನಡೆಸಿ ಪ್ರಾತ್ಯಕ್ಷಿಕೆ ನೀಡಿದ ಅಧಿಕಾರಿಗಳು, ಈ ಆಧುನಿಕ ಕೃಷಿ ಪದ್ಧತಿಯನ್ನು ಅಳವಡಿಸಿಕೊಳ್ಳುವುದರಿಂದ ಗಿಡಗಳ ಸಮರ್ಪಕ ಅಂತರ ಕಾಪಾಡಲು ಸಾಧ್ಯವಾಗುವುದರ ಜೊತೆಗೆ ಉತ್ತಮ ಬೆಳವಣಿಗೆ, ಹೆಚ್ಚಿನ ಇಳುವರಿ ಹಾಗೂ ಉತ್ತಮ ಗುಣಮಟ್ಟದ ಉತ್ಪಾದನೆ ಪಡೆಯಬಹುದೆಂದು ತಿಳಿಸಿದರು.
ಇಂದಿನ ಪರಿಸ್ಥಿತಿಯಲ್ಲಿ ಕೃಷಿ ಕ್ಷೇತ್ರದಲ್ಲಿ ಯಾಂತ್ರೀಕರಣದ ಮಹತ್ವ ಹೆಚ್ಚಾಗಿದ್ದು, ಕಾರ್ಮಿಕರ ಕೊರತೆ ಮತ್ತು ಹೆಚ್ಚುತ್ತಿರುವ ಕೃಷಿ ವೆಚ್ಚವನ್ನು ಗಮನದಲ್ಲಿಟ್ಟುಕೊಂಡು ರೈತರು ಯಾಂತ್ರಿಕೃತ ಬತ್ತ ನಾಟಿ ಸೇರಿದಂತೆ ಆಧುನಿಕ ತಂತ್ರಜ್ಞಾನಗಳನ್ನು ಅಳವಡಿಸಿಕೊಳ್ಳಬೇಕು ಎಂದು ಅಧಿಕಾರಿಗಳು ಕರೆ ನೀಡಿದರು.
ಈ ಸಂದರ್ಭದಲ್ಲಿ ಭಾಗವಹಿಸಿದ್ದ ರೈತರು ಯಾಂತ್ರಿಕೃತ ಬತ್ತ ನಾಟಿಯ ಪ್ರಾತ್ಯಕ್ಷಿಕೆಯನ್ನು ವೀಕ್ಷಿಸಿ, ವಿವಿಧ ತಾಂತ್ರಿಕ ಮಾಹಿತಿಗಳನ್ನು ಪಡೆದುಕೊಂಡರು.
previous post
