*ನಾಗೇಶ್ ಎಂ ಎಚ್ ಮಾಗೇರಿ.
🔴ಕಾಡೆಮ್ಮೆ ದಾಳಿಗೆ ಗಾಯಗೊಂಡ ರೈತನಿಗೆ ಪರಿಹಾರದ ಚೆಕ್ ವಿತರಿಸಿದ ಶಾಸಕ ಸಿಮೆಂಟ್ ಮಂಜು.
🔴ಹಾಸನ ಜಿಲ್ಲಾ ಆಸ್ಪತ್ರೆಗೆ ಮತ್ತೆ ಭೇಟಿ | ಗಾಯಾಳುವಿನ ಆರೋಗ್ಯ ವಿಚಾರಣೆ | ಚಿಕಿತ್ಸಾ ವೆಚ್ಚ ಅರಣ್ಯ ಇಲಾಖೆಯಿಂದ ಭರಿಸಲು ಸೂಚನೆ.
ಸಕಲೇಶಪುರ: ಕಾಡೆಮ್ಮೆ ದಾಳಿಯಿಂದ ಗಂಭೀರವಾಗಿ ಗಾಯಗೊಂಡು ಹಾಸನ ಕರ್ಣ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ತಾಲೂಕಿನ ಹೆತ್ತೂರು ಹೋಬಳಿಯ ಹಿಳಿಗಲು ಗ್ರಾಮದ ರೈತ ಜಯಪ್ರಕಾಶ್ (42) ಅವರನ್ನು ಶಾಸಕ ಸಿಮೆಂಟ್ ಮಂಜು ಸೋಮವಾರ ಮತ್ತೆ ಭೇಟಿ ಮಾಡಿ ಆರೋಗ್ಯ ವಿಚಾರಿಸಿ, ಅರಣ್ಯ ಇಲಾಖೆಯಿಂದ ಮಂಜೂರಾದ ಪರಿಹಾರ ಧನದ ಚೆಕ್ ವಿತರಿಸಿದರು.
ಹೊಂಗಡಹಳ್ಳ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಿಳಿಗಲು ಗ್ರಾಮದ ಜಯಪ್ರಕಾಶ್ ಅವರು ಶನಿವಾರ ಪತ್ನಿಯೊಂದಿಗೆ ಜಮೀನಿನ ಕೆಲಸ ಮುಗಿಸಿಕೊಂಡು ಮನೆಗೆ ಹಿಂದಿರುಗುತ್ತಿದ್ದ ವೇಳೆ ಏಕಾಏಕಿ ಕಾಡೆಮ್ಮೆ ದಾಳಿ ನಡೆಸಿತ್ತು.
ದಾಳಿಯಿಂದ ಅವರ ಕೈ-ಕಾಲುಗಳಿಗೆ ಗಂಭೀರ ಗಾಯಗಳಾಗಿದ್ದು, ಬಲ ಭುಜದ ಮೂಳೆ ಮುರಿದಿದೆ.
ಗಾಯಾಳುವಿಗೆ ಹೆತ್ತೂರು ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಪ್ರಥಮ ಚಿಕಿತ್ಸೆ ನೀಡಿ, ಹೆಚ್ಚಿನ ಚಿಕಿತ್ಸೆಗಾಗಿ ಹಾಸನ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಘಟನೆ ನಡೆದ ದಿನವೇ ಶಾಸಕ ಸಿಮೆಂಟ್ ಮಂಜು ಆಸ್ಪತ್ರೆಗೆ ಭೇಟಿ ನೀಡಿ ಜಯಪ್ರಕಾಶ್ ಅವರ ಆರೋಗ್ಯ ವಿಚಾರಿಸಿ, ವೈದ್ಯರಿಂದ ಚಿಕಿತ್ಸೆಯ ಕುರಿತು ಮಾಹಿತಿ ಪಡೆದಿದ್ದರು.
ಅಲ್ಲದೆ, ಚಿಕಿತ್ಸೆಗೆ ತಗಲುವ ಸಂಪೂರ್ಣ ವೆಚ್ಚವನ್ನು ಅರಣ್ಯ ಇಲಾಖೆಯೇ ಭರಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದರು.
ಸೋಮವಾರ ಮತ್ತೆ ಭೇಟಿ: ಗಾಯಾಳುವಿನ ಆರೋಗ್ಯ ಸ್ಥಿತಿಯನ್ನು ತಿಳಿಯಲು ಸೋಮವಾರ ಮತ್ತೊಮ್ಮೆ ಹಾಸನದ ಕರ್ಣ ಆಸ್ಪತ್ರೆಗೆ ತೆರಳಿದ ಶಾಸಕ ಸಿಮೆಂಟ್ ಮಂಜು, ಜಯಪ್ರಕಾಶ್ ಹಾಗೂ ಕುಟುಂಬದವರೊಂದಿಗೆ ಮಾತನಾಡಿ ಧೈರ್ಯ ತುಂಬಿದರು.
ಇದೇ ವೇಳೆ ಅರಣ್ಯ ಇಲಾಖೆಯಿಂದ ಮಂಜೂರಾದ ಪರಿಹಾರ ಧನದ ಚೆಕ್ ಅನ್ನು ಗಾಯಾಳುವಿಗೆ ವಿತರಿಸಿದರು.
ಬಳಿಕ ಮಾತನಾಡಿದ ಶಾಸಕ ಸಿಮೆಂಟ್ ಮಂಜು, “ವನ್ಯಜೀವಿಗಳ ದಾಳಿಯಿಂದ ಸಂಕಷ್ಟಕ್ಕೆ ಒಳಗಾಗುವ ರೈತ ಕುಟುಂಬಗಳಿಗೆ ಪರಿಹಾರ ನೀಡುವುದರ ಜತೆಗೆ ಗಾಯಾಳುಗಳಿಗೆ ಸಮರ್ಪಕ ಚಿಕಿತ್ಸೆ ದೊರೆಯುವಂತೆ ಅರಣ್ಯ ಇಲಾಖೆ ಕ್ರಮ ಕೈಗೊಳ್ಳಬೇಕು. ಜಯಪ್ರಕಾಶ್ ಅವರ ಚಿಕಿತ್ಸಾ ವೆಚ್ಚವನ್ನು ಇಲಾಖೆಯೇ ಭರಿಸಬೇಕು” ಎಂದು ಸೂಚಿಸಿದರು.
ಮಲೆನಾಡು ಭಾಗದಲ್ಲಿ ಕಾಡಾನೆಗಳ ಜತೆಗೆ ಕಾಡೆಮ್ಮೆ ಸೇರಿದಂತೆ ಇತರ ವನ್ಯಜೀವಿಗಳ ಹಾವಳಿಯೂ ರೈತರಲ್ಲಿ ಆತಂಕ ಮೂಡಿಸುತ್ತಿದೆ. ರೈತರು ತಮ್ಮ ಜಮೀನುಗಳಿಗೆ ತೆರಳುವುದಕ್ಕೂ ಭಯಪಡುವ ಪರಿಸ್ಥಿತಿ ನಿರ್ಮಾಣವಾಗದಂತೆ ವನ್ಯಜೀವಿಗಳ ಚಲನವಲನದ ಮೇಲೆ ನಿಗಾ ಇಟ್ಟು, ಇಂತಹ ಘಟನೆಗಳು ಮರುಕಳಿಸದಂತೆ ಪರಿಣಾಮಕಾರಿ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಅರಣ್ಯ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.
ಈ ಸಂದರ್ಭದಲ್ಲಿ ಯಸಳೂರು ವಲಯ ಅರಣ್ಯಾಧಿಕಾರಿ ರೇವಣ್ಣ ಸಿದ್ದಯ್ಯ ಹಿರೇಮಠ್ ಸೇರಿದಂತೆ ಅರಣ್ಯ ಇಲಾಖೆ ಸಿಬ್ಬಂದಿ ಉಪಸ್ಥಿತರಿದ್ದರು.
