Blog

10 ದಿನದಿಂದ ಸರಕಾರಿ ಬಸ್ ಸಂಚಾರ ಸ್ಥಗಿತ

ರಸ್ತೆ ದುರಸ್ತಿಯಾಗದೆ 10 ದಿನದಿಂದ ಬಸ್ ಸಂಚಾರ ಸ್ಥಗಿತ: ಗ್ರಾಮಸ್ಥರ ಆಕ್ರೋಶ

ಸಕಲೇಶಪುರ: ಪಿಡಬ್ಲ್ಯುಡಿ ಅಧಿಕಾರಿಗಳ ನಿರ್ಲಕ್ಷ್ಯದಿಂದ ವಳಲಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಲವು ಗ್ರಾಮಗಳಿಗೆ ಕಳೆದ 10 ದಿನಗಳಿಂದ ಸರ್ಕಾರಿ ಬಸ್ ಸಂಚಾರ ಸ್ಥಗಿತಗೊಂಡಿದ್ದು, ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ತೊಂದರೆ ಅನುಭವಿಸುತ್ತಿದ್ದಾರೆ ಎಂದು ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ವಿ.ಎಂ. ರಾಜೇಗೌಡ ಆರೋಪಿಸಿದರು.

ಹೆತ್ತೂರು ಹೋಬಳಿಯ ಹಾಡ್ಲಹಳ್ಳಿ, ಜಾತಹಳ್ಳಿ, ಬೊಬ್ಬನಹಳ್ಳಿ, ಚೀರಿ ಹಾಗೂ ಚಿನ್ನುಹಳ್ಳಿ ಗ್ರಾಮಗಳ ಜನರಿಗೆ ಅನುಕೂಲವಾಗಿದ್ದ ಕಾಗಿನಹರೆ ಹಾಗೂ ಗೊದ್ದು–ಸೋಮವಾರಪೇಟೆ ಮಾರ್ಗದ ಬಸ್‌ಗಳು ಬೆಳಗ್ಗೆ ಮತ್ತು ಸಂಜೆ ಸಂಚರಿಸುತ್ತಿದ್ದವು. ಭಾರಿ ಮಳೆಯಿಂದ ಬೊಬ್ಬನಹಳ್ಳಿ ಸಮೀಪದ ತಿರುವಿನಲ್ಲಿ ರಸ್ತೆ ಬಿರುಕು ಬಿಟ್ಟು ಕುಸಿದು ಹೊಂಡ ನಿರ್ಮಾಣವಾಗಿದ್ದು, ಬಸ್‌ಗಳ ಚಾರ್ಸಿಗೆ ರಸ್ತೆ ಅಂಚು ತಾಗುವ ಕಾರಣ ಸಂಚಾರ ಸ್ಥಗಿತಗೊಂಡಿದೆ.

‘ರಸ್ತೆ ದುರಸ್ತಿಪಡಿಸದೆ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿರುವುದರಿಂದ ಜನರಿಗೆ ಬಸ್ ಸೌಲಭ್ಯವೂ ತಪ್ಪಿದೆ. ಕೂಡಲೇ ರಸ್ತೆ ಸರಿಪಡಿಸಿ ಬಸ್ ಸಂಚಾರ ಪುನರಾರಂಭಿಸಬೇಕು’ ಎಂದು ರಾಜೇಗೌಡ ಒತ್ತಾಯಿಸಿದರು.

ಹಾಸನ ಜಿಲ್ಲಾ ಡಿಎಸ್ಎಸ್ ಸಂಚಾಲಕ ವಳಲಹಳ್ಳಿ ವಿರೇಶ್ ಮಾತನಾಡಿ, ‘ಆಟೋ ಅಥವಾ ನಡೆದುಕೊಂಡೇ ಸಕಲೇಶಪುರಕ್ಕೆ ತೆರಳಬೇಕಾಗಿದೆ. ಭಾರಿ ಮಳೆ ಹಾಗೂ ಕಾಡಾನೆಗಳ ಹಾವಳಿಯಿಂದ ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರಿಗೆ ಮತ್ತಷ್ಟು ಸಮಸ್ಯೆಯಾಗಿದೆ. ಅಧಿಕಾರಿಗಳ ಗಮನಕ್ಕೆ ತಂದರೂ ಸ್ಪಂದಿಸಿಲ್ಲ. ಶೀಘ್ರ ಕ್ರಮ ಕೈಗೊಳ್ಳದಿದ್ದರೆ ಪ್ರತಿಭಟನೆ ನಡೆಸಲಾಗುವುದು’ ಎಂದು ಎಚ್ಚರಿಸಿದರು.

ಕರ್ನಾಟಕ ರಕ್ಷಣಾ ವೇದಿಕೆ ತಾಲೂಕು ರೈತ ಘಟಕದ ಅಧ್ಯಕ್ಷ ವಸಂತ್ ಬೊಮ್ಮನಕೆರೆ ಹಾಗೂ ವಳಲಹಳ್ಳಿ ಗ್ರಾಮ ಪಂಚಾಯಿತಿ ಬೆಳೆಗಾರರ ಸಂಘದ ಮಾಜಿ ಅಧ್ಯಕ್ಷ ದರ್ಶನ್ ಮರ್ಚನಹಳ್ಳಿ ಕೂಡ ರಸ್ತೆ ದುರಸ್ತಿಪಡಿಸಿ ಬಸ್ ಸಂಚಾರ ಪುನರಾರಂಭಿಸುವಂತೆ ಆಗ್ರಹಿಸಿದರು. ಬಸ್ ಇಲ್ಲದ ಕಾರಣ ವಳಲಹಳ್ಳಿ ಕೂಡಿಗೆಯಿಂದ ಆಟೋದಲ್ಲಿ ಸುಮಾರು ₹100 ವೆಚ್ಚವಾಗುತ್ತಿದೆ ಎಂದು ದರ್ಶನ್ ತಿಳಿಸಿದರು.

ಪಿಡಬ್ಲ್ಯುಡಿ ಎಇಇ ವಸಂತ್ ಅವರು ಸ್ಥಳ ಪರಿಶೀಲಿಸಿ ತಿರುವಿನ ರಸ್ತೆಯನ್ನು ತಕ್ಷಣ ದುರಸ್ತಿಪಡಿಸಿ ಬಸ್ ಸಂಚಾರಕ್ಕೆ ಅನುವು ಮಾಡಿಕೊಡಬೇಕು ಎಂಬುದು ಗ್ರಾಮಸ್ಥರ ಒತ್ತಾಯವಾಗಿದೆ.

Related posts

ಮಲೆನಾಡು ಭಾಗದ ಶಾಲೆಗಳ ದುರಸ್ತಿಗೆ ಸರಕಾರ ಅನುದಾನ ಬಿಡುಗಡೆ ಮಾಡಲಿ

Bimba Prakashana

ಇಂದು ವಳಲ ಹಳ್ಳಿಯಲ್ಲಿ ನೂತನ ಮಳಿಗೆ ಆರಂಭ

Bimba Prakashana

ಸ್ನೇಹ ಸಮ್ಮಿಲನ ಹಾಗೂ ಗುರುವಂದನಾ ಕಾರ್ಯಕ್ರಮ

Bimba Prakashana

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More