🔴ಕಸಬಾ ಹೋಬಳಿ ಬೆಳೆಗಾರರ ಸಂಘದ ಮಾಸಿಕ ಸಭೆ
🔴ಕಾಫಿ ಬೆಳೆಗಾರರ ಸಮಸ್ಯೆಗಳ ಕುರಿತು ಚರ್ಚೆ
ಸಕಲೇಶಪುರ: ಕಸಬಾ ಹೋಬಳಿ ಬೆಳೆಗಾರರ ಸಂಘದ 2025–27ನೇ ಸಾಲಿನ ಕಾರ್ಯಕಾರಿ ಮಂಡಳಿಯ 16ನೇ ಮಾಸಿಕ ಸಭೆಯು ಸಂಘದ ಅಧ್ಯಕ್ಷ ಕೆ.ವಿ. ಮೇಘರಾಜ್ ಅವರ ಅಧ್ಯಕ್ಷತೆಯಲ್ಲಿ ಅಕ್ಟೋಬರ್ 27ರಂದು ಹೆಬ್ಬಸಾಲೆ ಗ್ರಾಮ ಪಂಚಾಯಿತಿ ಸಭಾಂಗಣದಲ್ಲಿ ನಡೆಯಿತು.
ಸಭೆಯಲ್ಲಿ ಕಾಫಿ ಉದ್ಯಮದ ಮೇಲೆ ಎಲ್‌ನಿನೊ ಪರಿಣಾಮ, ಕಾಡಾನೆ ಹಾವಳಿ, ಸರ್ಫೇಸಿ ಕಾಯ್ದೆ ಹಾಗೂ ಕಾಫಿ ತೋಟಗಳಲ್ಲಿ ನೀರಿನ ನಿರ್ವಹಣೆ ಸೇರಿದಂತೆ ಬೆಳೆಗಾರರ ವಿವಿಧ ಸಮಸ್ಯೆಗಳ ಕುರಿತು ಚರ್ಚಿಸಲಾಯಿತು.
ಬಾಳೆಹೊನ್ನೂರಿನ ಕೇಂದ್ರೀಯ ಕಾಫಿ ಸಂಶೋಧನಾ ಸಂಸ್ಥೆಯ ವಿಜ್ಞಾನಿಗಳಾದ ಡಾ. ಗೋವಿಂದಪ್ಪ ಮತ್ತು ಡಾ. ಕಿಶೋರ್ ಅವರು ಪ್ರಾತ್ಯಕ್ಷಿಕೆ ಮೂಲಕ ಮಾಹಿತಿ ನೀಡಿದರು. ಹಾಸನ ಕಾಫಿ ಮಂಡಳಿಯ ಉಪನಿರ್ದೇಶಕಿ ಡಾ. ಜ್ಯೋತಿ ಅವರು ಮಂಡಳಿಯ ಸೌಲಭ್ಯಗಳು, ರಾಸಾಯನಿಕಗಳ ಬಳಕೆಯಿಂದಾಗುವ ಅಡ್ಡಪರಿಣಾಮಗಳು ಹಾಗೂ ಪರ್ಯಾಯ ಕ್ರಮಗಳ ಕುರಿತು ವಿವರಿಸಿದರು. ಹಾನುಬಾಳು ಹೋಬಳಿಯ ದಬ್ಬೆಗದ್ದೆ ಗ್ರಾಮದ ಪ್ರಗತಿಪರ ಬೆಳೆಗಾರ ಕಾಂತರಾಜ್ ಅವರು ಜೇನು ಸಾಕಾಣಿಕೆ ಕುರಿತು ಮಾಹಿತಿ ನೀಡಿದರು.
ಯುಪಿಎಸ್‌ಸಿ ಪರೀಕ್ಷೆಯಲ್ಲಿ 389ನೇ ರ‍್ಯಾಂಕ್ ಪಡೆದ ಗುರ್ಜನಳ್ಳಿ ಗ್ರಾಮದ ಜಿ.ಎಸ್. ಮನೋಜ್, ಸಂಘದ ಸ್ಥಾಪಕ ಅಧ್ಯಕ್ಷ ಎಂ.ಎಚ್. ಪ್ರಕಾಶ್ ಹಾಗೂ ಸಮಾಜಮುಖಿ ಸೇವೆಯಲ್ಲಿ ತೊಡಗಿಸಿಕೊಂಡಿರುವ ಶಿಕ್ಷಕ ವೆಂಕಟೇಶ್ ಅವರನ್ನು ಸಂಘದ ವತಿಯಿಂದ ಅಭಿನಂದಿಸಲಾಯಿತು.
2027ನೇ ಸಾಲಿನ ಸಂಘದ ಕ್ಯಾಲೆಂಡರ್ ಪ್ರಕಟಣೆಗಾಗಿ ಜಾಹೀರಾತು ಸಂಗ್ರಹಿಸಲು ಸಭೆಯಲ್ಲಿ ನಿರ್ಧರಿಸಲಾಯಿತು. ಸಂಘದ ಖಜಾಂಚಿ ವಿಜಿತ್ ಲೆಕ್ಕಪತ್ರ ಮಂಡಿಸಿದರು.
ಸಭೆಯಲ್ಲಿ ಸಂಘದ ಗೌರವ ಕಾರ್ಯದರ್ಶಿ ಎನ್.ಡಿ. ರಾಕೇಶ್ ಸೇರಿದಂತೆ ಪದಾಧಿಕಾರಿಗಳು ಹಾಗೂ ನಿರ್ದೇಶಕರು ಉಪಸ್ಥಿತರಿದ್ದರು.
previous post
