🔴ವಳಲಹಳ್ಳಿ, ಹಿರಿಯೂರು–ಹಡ್ಲಹಳ್ಳಿ ಸುತ್ತಮುತ್ತ ಕಾಡಾನೆ ಹಾವಳಿ.
🔴ಐದು ಎಕರೆ ತೋಟದಲ್ಲಿ ಬೆಳೆದ ಕಾಫಿ, ಏಲಕ್ಕಿ, ಮೆಣಸು ಬೆಳೆಗಳಿಗೆ ಹಾನಿ; ಸೂಕ್ತ ಪರಿಹಾರಕ್ಕೆ ಬೆಳೆಗಾರರ ಆಗ್ರಹ.
ಸಕಲೇಶಪುರ: ತಾಲೂಕಿನ ಹೆತ್ತೂರು ಹೋಬಳಿಯ ವಳಲಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಿರಿಯೂರು ಮತ್ತು ಹಡ್ಲಹಳ್ಳಿ ಗ್ರಾಮಗಳ ಸುತ್ತಮುತ್ತ ಕಾಡಾನೆಗಳ ಹಾವಳಿ ಹೆಚ್ಚಾಗಿದ್ದು, ಬೆಳೆಗಾರರು ಆತಂಕಕ್ಕೊಳಗಾಗಿದ್ದಾರೆ. ಕಾಡಾನೆಗಳ ಹಿಂಡು ತೋಟಗಳಿಗೆ ನುಗ್ಗಿ ಬೆಳೆ ಹಾಗೂ ನೀರಾವರಿ ವ್ಯವಸ್ಥೆಯನ್ನು ಹಾಳು ಮಾಡುತ್ತಿರುವುದರಿಂದ ರೈತರು ನಷ್ಟ ಅನುಭವಿಸುವಂತಾಗಿದೆ.
ಹಿರಿಯೂರು ಗ್ರಾಮದ ಸುಬ್ಬೇಗೌಡ ಅವರ ಪುತ್ರ ಕುಶಾಲಪ್ಪ ಅವರಿಗೆ ಸೇರಿದ ಹಿರಿಯೂರು ಗ್ರಾಮದ ಸರ್ವೇ ನಂಬರ್ 13/1, 13/2 ಮತ್ತು 13/3ರ ಒಟ್ಟು 5 ಎಕರೆ 10 ಗುಂಟೆ ಜಮೀನಿನ ತೋಟಕ್ಕೆ ನೆನ್ನೆ ಮಂಗಳವಾರ ರಾತ್ರಿ ಸುಮಾರು 11 ಗಂಟೆಗೆ ನುಗ್ಗಿದ ನಾಲ್ಕು ಕಾಡಾನೆಗಳು ದಾಂಧಲೆ ನಡೆಸಿವೆ. ಇದರಿಂದ ಸುಮಾರು 50 ಕಾಫಿ ಗಿಡಗಳು ಹಾಗೂ 100 ಬಾಳೆ ಗಿಡಗಳು ಹಾನಿಗೊಳಗಾಗಿವೆ. ಅಲ್ಲದೆ, ತೋಟಕ್ಕೆ ನೀರು ಪೂರೈಸಲು ಅಳವಡಿಸಿದ್ದ ಪೈಪ್‌ಲೈನ್‌ಗಳನ್ನು ಹಾನಿಗೊಳಿಸಿ, ನೀರಿನ ಪೈಪ್‌ಗಳನ್ನು ಹಾದುಹೋಗಲು ನಿರ್ಮಿಸಿದ್ದ ಸುಮಾರು 100 ಮೀಟರ್ ಉದ್ದದ ಚರಂಡಿಯನ್ನು ತುಳಿದು ಮುಚ್ಚಿವೆ. ಇದರಿಂದ ನೀರಾವರಿ ವ್ಯವಸ್ಥೆಗೂ ಹಾನಿಯಾಗಿದೆ.
ಕಳೆದ ಮೂರ್ನಾಲ್ಕು ದಿನಗಳಿಂದ ಈ ಭಾಗದಲ್ಲಿ ಕಾಡಾನೆಗಳು ನಿರಂತರವಾಗಿ ಕಾಣಿಸಿಕೊಳ್ಳುತ್ತಿದ್ದು, ಕಾಫಿ ತೋಟಗಳ ಸುತ್ತಮುತ್ತಲೇ ಬೀಡುಬಿಟ್ಟಿವೆ. ಕಾಫಿ ವಾರ್ಷಿಕ ಬೆಳೆಯಾಗಿದ್ದು, ಫಸಲು ಕೈಗೆ ಬರುವ ಸಂದರ್ಭದಲ್ಲಿ ಕಾಡಾನೆಗಳ ಹಾವಳಿಯಿಂದ ಬೆಳೆ ಹಾನಿಯಾದರೆ ಬೆಳೆಗಾರರಿಗೆ ಆರ್ಥಿಕವಾಗಿ ದೊಡ್ಡ ಹೊಡೆತ ಬೀಳಲಿದೆ ಎಂದು ಗ್ರಾಮಸ್ಥರು ಆತಂಕ ವ್ಯಕ್ತಪಡಿಸಿದ್ದಾರೆ.
ಅರಣ್ಯ ಇಲಾಖೆ ತಕ್ಷಣ ಕ್ರಮ ಕೈಗೊಳ್ಳಲಿ.:-
ಹಿರಿಯೂರು, ಹಡ್ಲಹಳ್ಳಿ ಹಾಗೂ ಸುತ್ತಮುತ್ತಲಿನ ಗ್ರಾಮಗಳ ತೋಟಗಳಲ್ಲಿ ಬೀಡುಬಿಟ್ಟಿರುವ ಕಾಡಾನೆಗಳನ್ನು ಸುರಕ್ಷಿತವಾಗಿ ಕಾಡಿನತ್ತ ಓಡಿಸಲು ಯಸಳೂರು ಅರಣ್ಯ ಇಲಾಖೆಯ ಅಧಿಕಾರಿಗಳು ತಕ್ಷಣ ಕ್ರಮ ಕೈಗೊಳ್ಳಬೇಕು. ಹಾನಿಗೊಳಗಾದ ತೋಟಕ್ಕೆ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿ, ಬೆಳೆ ಹಾಗೂ ನೀರಾವರಿ ವ್ಯವಸ್ಥೆಗೆ ಉಂಟಾಗಿರುವ ನಷ್ಟವನ್ನು ಅಂದಾಜಿಸಿ, ನಿಯಮಾನುಸಾರ ಸೂಕ್ತ ಪರಿಹಾರ ಒದಗಿಸಬೇಕು ಎಂದು ನೊಂದ ಕಾಫಿ ಬೆಳೆಗಾರ ಕುಶಾಲಪ್ಪ ಹಾಗೂ ಗ್ರಾಮಸ್ಥರು ಆಗ್ರಹಿಸಿದ್ದಾರೆ.
ಕಾಡಾನೆಗಳ ಹಾವಳಿಗೆ ಶಾಶ್ವತ ಪರಿಹಾರ ಕಲ್ಪಿಸುವ ನಿಟ್ಟಿನಲ್ಲಿ ಅರಣ್ಯ ಇಲಾಖೆ ಗಂಭೀರವಾಗಿ ಸ್ಪಂದಿಸಬೇಕು. ಬೆಳೆಗಾರರ ವರ್ಷಪೂರ್ತಿ ಶ್ರಮಕ್ಕೆ ತಕ್ಕ ಫಸಲು ದೊರೆಯುವ ಸಂದರ್ಭದಲ್ಲಿ ಕಾಡಾನೆಗಳಿಂದ ಬೆಳೆ ನಾಶವಾಗುವುದನ್ನು ತಡೆಯಲು ತುರ್ತು ಕ್ರಮ ಕೈಗೊಳ್ಳಬೇಕು ಎಂದು ಗ್ರಾಮಸ್ಥರು ಮನವಿ ಮಾಡಿದ್ದಾರೆ.





