ಆಲೂರು.ಕೆ.ಹೊಸಕೋಟೆ ಆರೋಗ್ಯ ತಾಲೂಕಿನ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕೂಡಲೇ ಶಾಶ್ವತ ವೈದ್ಯರನ್ನು ನೇಮಿಸಬೇಕೆಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.
ಕೆ.ಹೊಸಕೋಟೆ ಹೋಬಳಿ ವ್ಯಾಪ್ತಿಗೊಳಪಡುವ ಹತ್ತು ಕಿ.ಮೀ. ವ್ಯಾಪ್ತಿಯಲ್ಲಿ ಯಾವುದೇ ಸರ್ಕಾರಿ ಆಸ್ಪತ್ರೆಗಳಿಲ್ಲ. ಸರ್ಕಾರಿ ಆಸ್ಪತ್ರೆಗಳಿರುವ ರಾಯರಕೊಪ್ಪಲು, ಬಾಳು ಪೇಟೆ, ಯಸಳೂರು, ಹೆತ್ತೂರು, ಶುಕ್ರವಾರಸಂತೆ ಸೇರಿದಂತೆ ಯಾವುದೇ ಕೇಂದ್ರಕ್ಕೆ ರಾತ್ರಿ ವೇಳೆ ಹೋಗಬೇಕಾದರೂ ಕನಿಷ್ಟ ಹನ್ನೆರಡರಿಂದ ಹದಿನೈದು ಕಿ.ಮೀ. ಸಾಗಿ ಚಿಕಿತ್ಸೆ ಪಡೆಯ ಬೇಕಾಗಿದೆ. ಕೆ.ಹೊಸಕೋಟೆಯಲ್ಲಿ ಸುಸಜ್ಜಿತ ಆಸ್ಪತ್ರೆಯಿದೆ, ಪ್ರಯೋಗಾಲಯ ಇದೆಯಾದರೂ ಪರೀಕ್ಷಕರ ಕೊರತೆ ಇದೆ. ಒಳರೋಗಿಗಳನ್ನು ದಾಖಲಿಸಿಕೊಳ್ಳುವ ಅವಕಾಶವಿದ್ದರೂ ವ್ಯವಸ್ಥೆಯಿಲ್ಲ.
ಸುಸಜ್ಜಿತ ವೈದ್ಯರ ವಸತಿ ನಿಲಯವಿದೆ. ಹಲವು ತಿಂಗಳಿನಿಂದ ಹಗಲು ವೇಳೆಯಲ್ಲಿ ವೈದ್ಯರು ಆಸ್ಪತ್ರೆಗೆ ಬಂದು ಹೋಗುತ್ತಾರೆ. ರಾತ್ರಿ ವೇಳೆಯಲ್ಲಿ ವೈದ್ಯರು ಸಿಗದ ಕಾರಣದಿಂದ ಯಾವುದೇ ತುರ್ತು ಚಿಕಿತ್ಸೆ ದೊರಕದೆ ತೀವ್ರ ತೊಂದರೆಯಾಗಿದೆ. ನಿರಂತರವಾಗಿ ಕೇಂದ್ರದಲ್ಲಿ ವಾಸ್ತವ ಹೂಡಿ ಸೇವೆ ಮಾಡುವ ವೈದ್ಯರನ್ನು
ನೇಮಿಸಬೇಕೆಂದು ಹರಿಹಳ್ಳಿ ಸತ್ಯನಾರಾಯಾಣ ಮನವಿ ಮಾಡಿಕೊಂಡಿದ್ದಾರೆ.
ಶೀಘ್ರದಲ್ಲಿ ವೈದ್ಯರನ್ನು ನೇಮಿಸದಿದ್ದರೆ ತಾಲೂಕು ವೈದ್ಯಾಧಿಕಾರಿಗಳು ಮತ್ತು ಜಿಲ್ಲಾ ಆರೋಗ್ಯ ಅಧಿಕಾರಿಗಳನ್ನು ಗ್ರಾಮಸ್ಥ ರೊಂದಿಗೆ ಭೇಟಿ ಮಾಡಿ ಮನವಿ ಮಾಡಲಾಗುವುದು ಎಂದಿದ್ದಾರೆ.
ವೈದ್ಯರ ಕೊರತೆ ಇದೆ. ಸುತ್ತಮುತ್ತಲಿನ ಪ್ರಾಥಮಿಕ ಆರೋಗ್ಯ ಕೇಂದ್ರದ ಮೂವರು ವೈದ್ಯರು ವಾರದಲ್ಲಿ ತಲಾ ಎರಡು ದಿನ ಕೆ. ಹೊಸಕೋಟೆ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಸೇವೆ ಮಾಡುತ್ತಿದ್ದಾರೆ. ಆ ವೈದ್ಯರೂ ಸಹ ಡಬಲ್ ಡ್ಯೂಟಿ ಮಾಡುತ್ತಿದ್ದಾರೆ. ಸದ್ಯದಲ್ಲೇ ಸರ್ಕಾರ ವೈದ್ಯರ ಕೊರತೆ ನೀಗಿಸುವ ವಿಶ್ವಾಸವಿದೆ ಎಂದು ತಾಲೂಕು ಆರೋಗ್ಯಾಧಿಕಾರಿ ಡಾ. ನಿಸಾರ್ ಫಾತಿಮಾ ಪ್ರತಿಕ್ರಿಯಿಸಿದ್ದಾರೆ.
previous post
