ಆಲೂರು: ಪಟ್ಟಣ ಪಂಚಾಯಿತಿ ವತಿಯಿಂದ ಕಸಬಾ ಸೊಪ್ಪಿನಹಳ್ಳಿ ಗ್ರಾಮದ ರಿ.ಸರ್ವೆ ನಂ. 44 ರಲ್ಲಿ ಬೀದಿ ನಾಯಿಗಳ ಸಂತಾನಹರಣ ಕೇಂದ್ರ ಮಾಡಲು ಉದ್ದೇಶಿಸಿರುವುದನ್ನು ಕೈ ಬಿಡಬೇಕೆಂದು ಸೊಪ್ಪಿನ ಹಳ್ಳಿ ಹಾಗೂ ಬಾಚನಹಳ್ಳಿ ಗ್ರಾಮಸ್ಥರು ಆಗ್ರಹಿಸಿದ್ದಾರೆ.
ಸುದ್ದಿಗೋಷ್ಠಿ ಉದ್ದೇಶಿಸಿ ಬೈರಾಪುರ ಗ್ರಾಮಸ್ಥ ನವೀನ್ ಮಾತನಾಡಿ, ಆಲೂರು ಪಟ್ಟಣ ಪಂಚಾಯತಿ ವತಿಯಿಂದ ಬೀದಿ ನಾಯಿಗಳ ಸಂತಾನಹರಣ ಕೇಂದ್ರ ಮಾಡಲು ತಾಲ್ಲೂಕು ಭೂಮಾಪಕರು ಸ್ಥಳ ಪರಿಶೀಲಿಸಲು ನಮ್ಮ ಗ್ರಾಮಕ್ಕೆ ಬಂದಿರುತ್ತಾರೆ.
ಈ ಜಮೀನಿನಲ್ಲಿ ಈಗಾಗಲೇ ಘನ ತ್ಯಾಜ್ಯ ವಿಲೇವಾರಿ ಘಟಕವನ್ನು ಸ್ಥಾಪಿಸಿರುವುದರಿಂದ, ನಮ್ಮ ಗ್ರಾಮದ ಜಮೀನಿನ ಬಳಿ ರೈತಾಪಿ ವರ್ಗದವರು ಕೆಲಸ ಮಾಡಲು ದುರ್ವಾಸನೆ ಬರುತ್ತಿರುವುದರಿಂದ, ಸಾಂಕ್ರಮಿಕ ರೋಗ ಹರಡುವ ಬೀತಿಯಿಂದ ಬದುಕುತ್ತಿದ್ದೇವೆ. ಪಕ್ಕದ ಬಾಚನಹಳ್ಳಿ ಗ್ರಾಮದೊಳಗೆ ಬೀದಿ ನಾಯಿಗಳು ಹೆಚ್ಚಾಗಿವೆ. ಘನ ತ್ಯಾಜ್ಯ ವಿಲೇವಾರಿ ವಾಹನವು ಪ್ರತಿ ದಿನ ಬಾಚನಹಳ್ಳಿ ಮುಖ್ಯ ರಸ್ತೆಯಿಂದಲೆ ಹಾದುಹೋಗುತ್ತಿರುವುದರಿಂದ ಗ್ರಾಮದಲ್ಲಿ ದುರ್ವಾಸನೆ ಕೂಡಿರುತ್ತದೆ. ಪರ್ಯಾಯ ರಸ್ತೆ ಮಾಡಿ ಸಾಗುವಂತೆ ಕೋರಿದರೂ ಪ್ರಯೋಜನವಾಗಿಲ್ಲ. ಬೀದಿ ನಾಯಿಗಳ ಸಂಗ್ರಹ ಕೇಂದ್ರವನ್ನು ಮಾಡಬಾರದು ಎಂದು ಮನವಿ ಮಾಡಿದರು.
ಗ್ರಾಮಸ್ಥ ಸಂಪತ್ ಮಾತನಾಡಿ, ಘನ ತ್ಯಾಜ್ಯ ವಿಲೇವಾರಿ ಘಟಕಕ್ಕೆ ಸ್ಯಾನಿಟರಿ ತ್ಯಾಜ್ಯವನ್ನು ಸಹ ವಿಲೇವಾರಿ ಮಾಡುತ್ತಿರುತ್ತಾರೆ. ಬಾಚನಹಳ್ಳಿ ಗ್ರಾಮ ತ್ಯಾಜ್ಯ ವಿಲೇವಾರಿ ಘಟಕಕ್ಕಿಂತ ತಗ್ಗು ಪ್ರದೇಶದಲ್ಲಿ ಇದೆ. ಮಳೆ ನೀರಿನ ಹರಿವಿನಿಂದ ಮತ್ತು ಎತ್ತರದ ಪ್ರದೇಶದಿಂದ ತಗ್ಗು ಪ್ರದೇಶಕ್ಕೆ ಗಾಳಿ ಬೀಸುವುದರಿಂದ ಸಾಂಕ್ರಮಿಕ ರೋಗ ಹರಡುವ ಬೀತಿ ಎದುರಾಗಿದೆ. ಇಂತಹ ಸನ್ನಿವೇಷದಲ್ಲಿ ಬೀದಿ ನಾಯಿಗಳ ಸಂತಾನಹರಣ ಕೇಂದ್ರವನ್ನು ಸ್ಥಾಪಿಸುವ ಉದ್ದೇಶ ಹೊಂದಿರುವುದನ್ನು ಕೈ ಬಿಡಬೇಕು, ಈಗಾಗಲೇ ತಹಸೀಲ್ದಾರ್ ಮತ್ತು ಪಟ್ಟಣ ಪಂಚಾಯಿತಿಗೆ ಮನವಿ ಸಲ್ಲಿಸಲಾಗಿದೆ. ಘಟಕ ತೆರೆಯಲು ಮುಂದುವರಿಸಿದರೆ ಜಿಲ್ಲಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ನಡೆಸುವುದಾಗಿ ಎಚ್ಚರಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಬೈರಾಪುರ ಗ್ರಾಮಸ್ಥರಾದ ಮನು, ಶರತ್, ಲಿಖಿತ್ ಭಾಗವಹಿಸಿದ್ದರು. ಆಗ್ರಹ
