ವಳಲಹಳ್ಳಿ ಗ್ರಾಮದ ನರ್ಸಿಂಗ್ ಅಧ್ಯಾಪಕ ರಘು ವಿ.ಎ. ಅವರಿಗೆ ಡಾಕ್ಟರೇಟ್ ಪದವಿ
ಸಕಲೇಶಪುರ : ತಾಲೂಕಿನ ವಳಲಹಳ್ಳಿ ಗ್ರಾಮದ ಹೆಮ್ಮೆಯ ಪುತ್ರ, ರಾಜಸ್ಥಾನದ ಜೋಧ್‌ಪುರದಲ್ಲಿರುವ ಅಖಿಲ ಭಾರತೀಯ ವೈದ್ಯಕೀಯ ವಿಜ್ಞಾನ ಸಂಸ್ಥೆ (AIIMS) ನರ್ಸಿಂಗ್ ವಿಭಾಗದ ಅಧ್ಯಾಪಕರಾದ ರಘು ವಿ.ಎ. ಅವರು ಡಾಕ್ಟರೇಟ್ ಪದವಿ ಪಡೆದು ಗ್ರಾಮಕ್ಕೆ ಕೀರ್ತಿ ತಂದಿದ್ದಾರೆ.
ಭಾರತೀಯ ನರ್ಸಿಂಗ್ ಪರಿಷತ್ (Indian Nursing Council) ಹಾಗೂ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯ (RGUHS), ಬೆಂಗಳೂರು ಇವರ ಸಹಯೋಗದಲ್ಲಿ ನಡೆದ ಪಿಎಚ್.ಡಿ. ಕಾರ್ಯಕ್ರಮದಡಿ ರಘು ವಿ.ಎ. ಅವರಿಗೆ ಡಾಕ್ಟರೇಟ್ ಪದವಿ ಲಭಿಸಿದೆ.
2026ರ ಜೂನ್ 16ರಂದು ನಡೆದ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ 28ನೇ ವಾರ್ಷಿಕ ಘಟಿಕೋತ್ಸವದಲ್ಲಿ ಅವರಿಗೆ ಪದವಿ ಪ್ರದಾನ ಮಾಡಲಾಯಿತು.
ರಘು ಅವರು ಅವಧಿಗೆ ಮುನ್ನ ಜನಿಸಿದ ಶಿಶುಗಳ ನರ-ವಿಕಾಸಾತ್ಮಕ ಬೆಳವಣಿಗೆಯಲ್ಲಿ ನರ್ಸ್‌ಗಳ ನೇತೃತ್ವದ ಆರೈಕೆ ಕಾರ್ಯಕ್ರಮದ ಪರಿಣಾಮ ವಿಷಯ ಕುರಿತು ಸಂಶೋಧನೆ ನಡೆಸಿ ಡಾಕ್ಟರೇಟ್ ಪಡೆದಿದ್ದಾರೆ. ಈ ಸಂಶೋಧನೆ ವೈದ್ಯಕೀಯ ಕ್ಷೇತ್ರದಲ್ಲಿ ಮಹತ್ವ ಪಡೆದಿದೆ.
ಕೆರೆಮನೆ ವಳಲಹಳ್ಳಿ ಗ್ರಾಮದ ಶ್ರೀ ಅಪ್ಪಾಸ್ವಾಮಿ ಗೌಡ ಹಾಗೂ ಶ್ರೀಮತಿ ಲೋಲಾಕ್ಷಿ ಅವರ ಪುತ್ರರಾಗಿರುವ ರಘು ವಿ.ಎ. ಅವರು ತಮ್ಮ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣವನ್ನು ವಳಲಹಳ್ಳಿ ಸರ್ಕಾರಿ ಶಾಲೆಯಲ್ಲಿ ಪೂರ್ಣಗೊಳಿಸಿದರು. ನಂತರ ಆದಿಚುಂಚನಗಿರಿ ಮಠ ಹಾಗೂ ಸಿದ್ಧಗಂಗಾ ಮಠದ ಶಿಕ್ಷಣ ಸಂಸ್ಥೆಗಳಲ್ಲಿ ಪದವಿಪೂರ್ವ ಶಿಕ್ಷಣ ಪಡೆದರು.
ತುಮಕೂರಿನ ಸಿದ್ಧಗಂಗಾ ನರ್ಸಿಂಗ್ ಕಾಲೇಜಿನಲ್ಲಿ ಬಿಎಸ್ಸಿ ನರ್ಸಿಂಗ್, ಮಂಗಳೂರಿನ ಲಕ್ಷ್ಮೀ ಮೆಮೋರಿಯಲ್ ಕಾಲೇಜಿನಲ್ಲಿ ಎಂಎಸ್ಸಿ ನರ್ಸಿಂಗ್ ಪದವಿ ಪಡೆದ ಅವರು, ಪಂಜಾಬ್ ರಾಜ್ಯದಲ್ಲಿ ನರ್ಸಿಂಗ್ ಉಪನ್ಯಾಸಕರಾಗಿ ಸೇವೆ ಸಲ್ಲಿಸಿದರು. ಬಳಿಕ ಎಐಐಎಂಎಸ್ ನವದೆಹಲಿಯಲ್ಲಿ ನರ್ಸಿಂಗ್ officer ಆಗಿ ಕಾರ್ಯನಿರ್ವಹಿಸಿ, 2016ರಿಂದ ಎಐಐಎಂಎಸ್ (AIIMS) ಜೋಧ್‌ಪುರದಲ್ಲಿ ನರ್ಸಿಂಗ್ ಅಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ತಮ್ಮ ಸಾಧನೆಯ ಕುರಿತು ಮಾತನಾಡಿದ ರಘು ವಿ.ಎ. ಅವರು, “ಈ ಯಶಸ್ಸು ತಂದೆ-ತಾಯಿಯ ತ್ಯಾಗ, ಕುಟುಂಬದ ಬೆಂಬಲ, ಗುರುಗಳ ಮಾರ್ಗದರ್ಶನ ಹಾಗೂ ನಿರಂತರ ಪರಿಶ್ರಮದ ಫಲವಾಗಿದೆ” ಎಂದು ತಿಳಿಸಿದ್ದಾರೆ.
ಯುವಕರಿಗೆ ಸಂದೇಶ ನೀಡಿದ ಅವರು, ನರ್ಸಿಂಗ್ ವೃತ್ತಿ ಕೇವಲ ಸೇವೆಯ ಕ್ಷೇತ್ರವಲ್ಲ, ಅದು ವೈಜ್ಞಾನಿಕ ಜ್ಞಾನ, ಸಂಶೋಧನೆ ಹಾಗೂ ಸಾಕ್ಷ್ಯಾಧಾರಿತ ಚಿಕಿತ್ಸಾ ಪದ್ಧತಿಗಳ ಮೇಲೆ ನಿಂತಿರುವ ಗೌರವಾನ್ವಿತ ವೃತ್ತಿಯಾಗಿದೆ. ನರ್ಸಿಂಗ್ ಕ್ಷೇತ್ರದಲ್ಲಿ ದೇಶ-ವಿದೇಶಗಳಲ್ಲಿ ಉತ್ತಮ ಅವಕಾಶಗಳಿವೆ ಎಂದು ಹೇಳಿದರು.
ರಘು ವಿ.ಎ. ಅವರ ಸಾಧನೆಗೆ ಕುಟುಂಬಸ್ಥರು, ಬಂಧುಗಳು, ಸ್ನೇಹಿತರು, ಗ್ರಾಮಸ್ಥರು ಹಾಗೂ ನರ್ಸಿಂಗ್ ಕ್ಷೇತ್ರದ ಗಣ್ಯರು ಅಭಿನಂದನೆ ಸಲ್ಲಿಸಿದ್ದಾರೆ.
previous post
