Blog

ಬೇಲೂರು ನವರಾತ್ರಿ ಮಂಟಪಕ್ಕೆ ಕುಸಿತ ಭೀತಿ

ಬೇಲೂರು: ವಿಶ್ವವಿಖ್ಯಾತ ಶ್ರೀ ಚನ್ನಕೇಶವಸ್ವಾಮಿ ದೇವಾಲಯದ ಸಮೀಪದಲ್ಲಿರುವ ಐತಿಹಾಸಿಕ ನವರಾತ್ರಿ ಮಂಟಪ ಸಂಪೂರ್ಣ ಶಿಥಿಲಾವಸ್ಥೆಗೆ ತಲುಪಿದ್ದು, ಯಾವುದೇ ಕ್ಷಣದಲ್ಲಿ ಕುಸಿಯುವ ಭೀತಿ ಎದುರಾಗಿದೆ. ಮಳೆಗಾಲ ತೀವ್ರಗೊಳ್ಳುತ್ತಿರುವ ಹಿನ್ನೆಲೆ ಮಂಟಪದ ಸುರಕ್ಷತೆ ಕುರಿತು ಸಾರ್ವಜನಿಕರಲ್ಲಿ ಆತಂಕ ಹೆಚ್ಚಾಗಿದೆ.

ಮಂಟಪ ಅಪಾಯಕರ ಸ್ಥಿತಿಯಲ್ಲಿರುವುದರಿಂದ ಅದರ ಸಮೀಪ ಸಾರ್ವಜನಿಕರು ತೆರಳದಂತೆ ಎಚ್ಚರಿಕೆ ಫಲಕ ಅಳವಡಿಸಲಾಗಿದೆ. ಆದರೆ ಕೇವಲ ಫಲಕ ಅಳವಡಿಸುವುದರಿಂದ ಜವಾಬ್ದಾರಿ ಮುಗಿದಂತಾಗುವುದಿಲ್ಲ ಎಂಬುದು ಸ್ಥಳೀಯರ ಅಭಿಪ್ರಾಯವಾಗಿದೆ. ಐತಿಹಾಸಿಕ ಮಹತ್ವ ಹೊಂದಿರುವ ಈ ಮಂಟಪವನ್ನು ಮೂಲ ಸ್ವರೂಪಕ್ಕೆ ಧಕ್ಕೆಯಾಗದಂತೆ ಜೀರ್ಣೋದ್ಧಾರ ಮಾಡಲು ಹಲವು ಸಂಘಟನೆಗಳು ಹಾಗೂ ದಾನಿಗಳು ಮುಂದಾದರೂ, ಅಗತ್ಯ ಅನುಮತಿ ನೀಡುವಲ್ಲಿ ಪುರಾತತ್ವ ಇಲಾಖೆ ವಿಳಂಬ ಧೋರಣೆ ಅನುಸರಿಸುತ್ತಿದೆ ಎಂಬ ಆರೋಪ ಕೇಳಿಬರುತ್ತಿದೆ.

ಮಂಟಪದ ದುಸ್ಥಿತಿಯ ಕುರಿತು ಹಲವಾರು ಬಾರಿ ಪತ್ರಿಕೆಗಳಲ್ಲಿ ವರದಿಗಳು ಪ್ರಕಟವಾಗಿವೆ. ಜನಪ್ರತಿನಿಧಿಗಳು, ಜಿಲ್ಲಾಡಳಿತ ಹಾಗೂ ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೂ ವಿಷಯ ತರಲಾಗಿದೆ. ಆದಾಗ್ಯೂ ಇದುವರೆಗೆ ಯಾವುದೇ ಸ್ಪಷ್ಟ ಕ್ರಮ ಕೈಗೊಳ್ಳದಿರುವುದು ಸಾರ್ವಜನಿಕರ ಅಸಮಾಧಾನಕ್ಕೆ ಕಾರಣವಾಗಿದೆ.

ನವರಾತ್ರಿ ಮಂಟಪಕ್ಕೆ ಹೊಂದಿಕೊಂಡಿರುವ ಪ್ರದೇಶದಲ್ಲಿ ಪ್ರವಾಸಿಗರು ಹಾಗೂ ಭಕ್ತರು ವಿಶ್ರಾಂತಿ ಪಡೆಯುವುದು ಸಾಮಾನ್ಯ. ಇಂತಹ ಸಂದರ್ಭದಲ್ಲಿ ಮಂಟಪ ಕುಸಿದರೆ ದೊಡ್ಡ ಪ್ರಮಾಣದ ಜೀವಹಾನಿ ಸಂಭವಿಸುವ ಸಾಧ್ಯತೆಯನ್ನು ತಳ್ಳಿಹಾಕಲು ಸಾಧ್ಯವಿಲ್ಲ. ಅನಾಹುತ ಸಂಭವಿಸಿದ ಬಳಿಕ ಹೊಣೆಗಾರಿಕೆ ಕುರಿತು ಚರ್ಚೆ ನಡೆಸುವುದಕ್ಕಿಂತ, ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳುವುದು ಅಗತ್ಯವಾಗಿದೆ.

ಈ ಹಿಂದೆ ಬೇಲೂರಿನಲ್ಲೇ ಶಿಥಿಲಗೊಂಡ ಕಟ್ಟಡದ ಅವಶೇಷ ಕುಸಿದು ಅಮಾಯಕರು ಪ್ರಾಣ ಕಳೆದುಕೊಂಡ ಘಟನೆಗಳು ನಡೆದಿವೆ. ಅಂತಹ ದುರ್ಘಟನೆಗಳಿಂದ ಪಾಠ ಕಲಿಯಬೇಕಾದ ಅಧಿಕಾರಿಗಳು ಮತ್ತು ಆಡಳಿತ ವ್ಯವಸ್ಥೆ ಈಗಲಾದರೂ ಎಚ್ಚೆತ್ತುಕೊಳ್ಳಬೇಕಿದೆ. ಜೀವಹಾನಿಯಾದ ನಂತರ ಪರಿಹಾರ ಘೋಷಣೆ ಮಾಡುವುದಕ್ಕಿಂತ, ಅಪಾಯವನ್ನು ಮುಂಚಿತವಾಗಿಯೇ ನಿವಾರಿಸುವುದು ಮುಖ್ಯವಾಗಿದೆ.

ಮಂಟಪದ ಮೇಲ್ಭಾಗದಲ್ಲಿ ಗಿಡಗಳು ಬೆಳೆದು ಕಟ್ಟಡದ ಸ್ಥಿತಿ ಮತ್ತಷ್ಟು ಹದಗೆಟ್ಟಿದೆ. ನಿರಂತರ ಮಳೆಯಿಂದ ರಚನೆಗೆ ಹಾನಿಯಾಗುವ ಸಾಧ್ಯತೆ ಹೆಚ್ಚಾಗಿದೆ. ಹೀಗಾಗಿ ಪುರಾತತ್ವ ಇಲಾಖೆ ತಕ್ಷಣ ತಾಂತ್ರಿಕ ಪರಿಶೀಲನೆ ನಡೆಸಿ, ಜೀರ್ಣೋದ್ಧಾರ ಅಥವಾ ಪುನರ್‌ನಿರ್ಮಾಣದ ಕುರಿತು ಸ್ಪಷ್ಟ ನಿರ್ಧಾರ ಕೈಗೊಳ್ಳಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

ಅನಾಹುತ ಸಂಭವಿಸಿದ ನಂತರ ಕ್ರಮ ಕೈಗೊಳ್ಳುವುದಕ್ಕಿಂತ, ಈಗಲೇ ಸೂಕ್ತ ಕ್ರಮ ಜರುಗಿಸಿ ಐತಿಹಾಸಿಕ ಸ್ಮಾರಕವನ್ನು ಸಂರಕ್ಷಿಸುವ ಜೊತೆಗೆ ಸಾರ್ವಜನಿಕರ ಜೀವ ರಕ್ಷಣೆಗೂ ಆದ್ಯತೆ ನೀಡಬೇಕು ಎಂಬುದು ಸ್ಥಳೀಯರ ಆಗ್ರಹವಾಗಿದೆ.

Related posts

ಎಂ ಎಸ್ ಲಿಂಗಪ್ಪ ನಿಧನ

Bimba Prakashana

ಮದುವೆ ಆದರೂ, ಆಗದಿದ್ದರೂ……

Bimba Prakashana

ಅಭಿನಂದನೆಗಳು

Bimba Prakashana

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More