. 🔴ನಿವೇಶನ ಒತ್ತುವರಿ ಆರೋಪ: ಪುರಸಭೆ ಎದುರು ಕುಟುಂಬಸ್ಥರ ಪ್ರತಿಭಟನೆ
🔴ಆಶ್ರಯ ನಿವೇಶನ ವಿವಾದ ತಾರಕಕ್ಕೆ: ಪುರಸಭೆ ಮುಂದೆ ಕೆಆರ್‌ಎಸ್ ನೇತೃತ್ವದಲ್ಲಿ ಧರಣ
ಬೇಲೂರು: ಆಶ್ರಯ ಯೋಜನೆಯಡಿ ಪುರಸಭೆಯಿಂದ ನೀಡಲಾದ ನಿವೇಶನವನ್ನು ಅಕ್ರಮವಾಗಿ ಒತ್ತುವರಿ ಮಾಡಿಕೊಂಡು ನಿರ್ಮಿಸಿರುವ ಸ್ಟೇರ್‌ಕೇಸ್ ಹಾಗೂ ನಿವೇಶನದಲ್ಲೇ ಇರಿಸಿರುವ ನೀರಿನ ಟ್ಯಾಂಕ್ ತೆರವುಗೊಳಿಸುವಂತೆ ಒತ್ತಾಯಿಸಿ ನಿವೇಶನ ಮಾಲೀಕರು ಹಾಗೂ ಕುಟುಂಬಸ್ಥರು ಕೆಆರ್‌ಎಸ್ ಪಕ್ಷದ ನೇತೃತ್ವದಲ್ಲಿ ಪುರಸಭೆ ಕಚೇರಿ ಮುಂದೆ ಧರಣಿ ನಡೆಸಿದರು.
ನಿವೇಶನದ ಮಾಲಕಿ ಪದ್ಮ ಅವರ ಪುತ್ರಿ ಮಧು ಮಾತನಾಡಿ, “ನಮ್ಮ ತಾಯಿಗೆ ಪುರಸಭೆಯಿಂದ 20×20 ಅಳತೆಯ ಆಶ್ರಯ ನಿವೇಶನ ನೀಡಲಾಗಿದೆ. ನಾವು ಮನೆ ನಿರ್ಮಾಣಕ್ಕಾಗಿ ಪೌಂಡೇಶನ್ ಹಾಕಿದ್ದೇವೆ. ಆದರೆ ಪಕ್ಕದ ಮನೆಯವರು ನಮ್ಮ ಜಾಗದ ಮೇಲೆಯೇ ನೀರಿನ ಟ್ಯಾಂಕ್ ಇಟ್ಟು ಮನೆ ಕಟ್ಟಲು ತೊಂದರೆ ಮಾಡುತ್ತಿದ್ದಾರೆ” ಎಂದು ಆರೋಪಿಸಿದರು.
“ನೀರಿನ ಟ್ಯಾಂಕ್ ತೆರವುಗೊಳಿಸುವಂತೆ ಹಲವು ಬಾರಿ ಕೇಳಿದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲ. ಜೊತೆಗೆ ನಮ್ಮ ನಿವೇಶನವನ್ನು ಒತ್ತುವರಿ ಮಾಡಿಕೊಂಡು ಸ್ಟೇರ್‌ಕೇಸ್ ಕೂಡ ನಿರ್ಮಿಸಲಾಗಿದೆ. ಈ ಕುರಿತು ಒಂದು ವರ್ಷದಿಂದ ಪುರಸಭೆಗೆ ಮನವಿ ಸಲ್ಲಿಸಿದ್ದರೂ ಸಮಸ್ಯೆ ಬಗೆಹರಿದಿಲ್ಲ” ಎಂದು ದೂರಿದರು.
“ಇತ್ತೀಚೆಗೆ ಪೊಲೀಸರು ಬಂದು ನಮ್ಮಿಂದ ಖಾಲಿ ಕಾಗದದ ಮೇಲೆ ಸಹಿ ಪಡೆದು ತೆರಳಿದ್ದಾರೆ. ಆದರೆ ಇದುವರೆಗೂ ಸಮಸ್ಯೆಗೆ ಶಾಶ್ವತ ಪರಿಹಾರ ದೊರೆತಿಲ್ಲ” ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಕೆಆರ್‌ಎಸ್ ಪಕ್ಷದ ಅಧ್ಯಕ್ಷ ಆದೇಶ್ ಮಾತನಾಡಿ, “ಪುರಸಭೆಯ ನಿರ್ಲಕ್ಷ್ಯದಿಂದಲೇ ಪ್ರಕರಣ ಇಷ್ಟು ದೊಡ್ಡ ಮಟ್ಟಕ್ಕೆ ಬಂದಿದೆ. ಒಂದು ವರ್ಷದ ಹಿಂದೆಯೇ ಅಧಿಕಾರಿಗಳು ಕ್ರಮ ಕೈಗೊಂಡಿದ್ದರೆ ಇಂದು ಧರಣಿ ಮಾಡುವ ಪರಿಸ್ಥಿತಿ ಬರುತ್ತಿರಲಿಲ್ಲ” ಎಂದು ಟೀಕಿಸಿದರು.
ಪುರಸಭೆ ಅಧ್ಯಕ್ಷ ಅಕ್ರಂಶರೀಫ್ ಪ್ರತಿಕ್ರಿಯಿಸಿ, “ಸೋಮವಾರವೇ ಸಂಬಂಧಪಟ್ಟವರಿಂದ ಮಾಹಿತಿ ಪಡೆದಿದ್ದೆವು. ನೀರಿನ ಟ್ಯಾಂಕ್ ತೆರವುಗೊಳಿಸುವಂತೆ ಸಿಬ್ಬಂದಿಗೆ ಸೂಚನೆ ನೀಡಲಾಗಿತ್ತು. ಆದರೆ ಕ್ರಮ ವಿಳಂಬವಾದ ಕಾರಣ ಇಂದು ಧರಣಿ ನಡೆದಿದೆ. ಸಂಜೆಯೊಳಗೆ ಟ್ಯಾಂಕ್ ತೆರವುಗೊಳಿಸಲಾಗುವುದು” ಎಂದು ಭರವಸೆ ನೀಡಿದರು.
“ಮತ್ತೊಬ್ಬರ ನಿವೇಶನದಲ್ಲಿ ನೀರಿನ ಟ್ಯಾಂಕ್ ಇಡುವುದು ತಪ್ಪು. ತಕ್ಷಣ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ” ಎಂದು ಹೇಳಿದರು.
ಧರಣಿಯಲ್ಲಿ ಮಹಿಳಾ ಘಟಕದ ಅಧ್ಯಕ್ಷೆ ರಂಜಿತಾ, ಸದಸ್ಯರಾದ ಆಸೀಫ್, ಉಷಾ ಸೇರಿದಂತೆ ಹಲವರು ಭಾಗವಹಿಸಿದ್ದರು.

