ಆಲೂರು.ಕ್ಷೇತ್ರದ ಸಮಗ್ರ ಅಭಿವೃದ್ಧಿಯೇ ನನ್ನ ಏಕೈಕ ಧೈಯ. ತಾಲೂಕಿನ ರಸ್ತೆ ಅಭಿವೃದ್ಧಿಗೆ ಪ್ರಥಮ ಆದ್ಯತೆ ನೀಡಲಾಗಿದೆ ಎಂದು ಶಾಸಕ ಸಿಮೆಂಟ್ ಮಂಜುನಾಥ್ ಹೇಳಿದರು.
ತಾಲೂಕಿನ ದೊಡ್ಡಕಣಗಾಲು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಉಮಾದೇವರಹಳ್ಳಿ ಗ್ರಾಮದ ಮುಖ್ಯ ರಸ್ತೆ ಹಾಗೂ ಐತಿಹಾಸಿಕ ಶ್ರೀ ಚೆನ್ನಕೇಶವ ದೇವಾಲಯದ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು.
ತಾಲೂಕಿನ ಹಲವೆಡೆ ಹತ್ತಾರು ವರ್ಷಗಳಿಂದ ಡಾಂಬರು ಕಾಣದ ಗುಂಡಿ ರಸ್ತೆಗಳೇ ಉಳಿದಿವೆ ಎಂದು ವಿಷಾದ ವ್ಯಕ್ತಪಡಿಸಿದ ಶಾಸಕ ಮಂಜುನಾಥ್, ಎಲ್ಲಾ ರಸ್ತೆಗಳ ಅಭಿವೃದ್ಧಿ ಹಾಗೂ ಶಿಥಿಲಗೊಂಡ ದೇವಾಲಯಗಳ ಮರುನಿರ್ಮಾಣಕ್ಕೆ ಕನಿಷ್ಠ 500 ಕೋಟಿ ರೂ. ಅಗತ್ಯವಿದೆ. ಆದರೆ ನನ್ನ ಮನವಿಗೆ ಸರ್ಕಾರ ಸಮರ್ಪಕವಾಗಿ ಸ್ಪಂದಿಸುತ್ತಿಲ್ಲ. ಆದರೂ ಸಂಬಂಧಪಟ್ಟ ಸಚಿವರು ಹಾಗೂ ಇಲಾಖೆಯ ಅಧಿಕಾರಿಗಳೊಂದಿಗೆ ನಿರಂತರವಾಗಿ ಚರ್ಚಿಸಿ
ಅನುದಾನ ಬಿಡುಗಡೆ ಮಾಡಿಸಿಕೊಂಡು ಪ್ರಮುಖ ಸಂಪರ್ಕ ರಸ್ತೆಗಳ ಅಭಿವೃದ್ಧಿಗೆ ಆದ್ಯತೆ ನೀಡಲಾಗುತ್ತಿದೆ ಎಂದರು.
ಶಾಸಕರ ಪ್ರದೇಶಾಭಿವೃದ್ಧಿ ನಿಧಿಯಿಂದ ಪ್ರತಿಯೊಂದು ಗ್ರಾಮಕ್ಕೂ ತಲಾ 10 ಲಕ್ಷ ರೂ. ಹಂಚಿಕೆ ಮಾಡಲಾಗುತ್ತಿದೆ. ಗ್ರಾಮಗಳಲ್ಲಿ ತೀವ್ರ ಹದಗೆಟ್ಟಿರುವ ರಸ್ತೆಗಳ ದುರಸ್ತಿ ಹಾಗೂ ಬಸ್ ನಿಲ್ದಾಣ ನಿರ್ಮಾಣಕ್ಕೆ ಹೆಚ್ಚಿನ ಒತ್ತು ನೀಡಲಾಗಿದೆ ಎಂದು ತಿಳಿಸಿದರು.
ಚುನಾವಣೆಗೆ ಮುನ್ನ ಗ್ರಾಮಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಅಭಿವೃದ್ಧಿಯ ಭರವಸೆ ನೀಡಿದ್ದೆ.
ಅದರಂತೆ ಈಗ ಕಾಮಗಾರಿಗಳಿಗೆ ಚಾಲನೆ ನೀಡಲಾಗಿದೆ ಎಂದು ಹೇಳಿದರು.
ಈ ಬಾರಿ ಶಾಸಕನಾಗಿ ನಿರೀಕ್ಷಿತ ಮಟ್ಟದ ಸಾಧನೆ ಮಾಡಲು ಸಾಧ್ಯವಾಗಿಲ್ಲ. ಆದರೆ 2028ರಲ್ಲಿ ಬಿಜೆಪಿ ಮೈತ್ರಿ ಸರ್ಕಾರ ಅಧಿಕಾರಕ್ಕೆ ಬರುವುದು ನಿಶ್ಚಿತ. ತಾಲೂಕಿನ ಜನರು ಮತ್ತೊಮ್ಮೆ ಆಶೀರ್ವದಿಸಿದರೆ ಸರ್ವಾಂಗೀಣ ಅಭಿವೃದ್ಧಿಗೆ ಮತ್ತಷ್ಟು ಶ್ರಮಿಸುತ್ತೇನೆ ಎಂದು ಭರವಸೆ ನೀಡಿದರು.
ಕಾರ್ಯಕ್ರಮದಲ್ಲಿ ಬಿಜೆಪಿ ಪ್ರಧಾನ ಕಾರ್ಯದರ್ಶಿ ಅಬ್ಬನ ಕೃಷ್ಣಮೂರ್ತಿ, ಧ್ರುವ ಕಣಗಾಲ್, ಬಿಜೆಪಿ ವಕ್ತಾರ ಮಾವನೂರು ಮೋಹನ್, ಕಾರ್ಯದರ್ಶಿ ನಟರಾಜ್, ಬಿಜೆಪಿ ಮುಖಂಡರಾದ ಹೊಳೆಬೆಳ್ಳೂರು ಕಿರಣ್, ಕೇಶವ, ಗ್ರಾಮ ಪಂಚಾಯಿತಿ ಪಿಡಿಒ ಸಹಾಯಕ ಕುಮಾರ್, ಶಂಭುಲಿಂಗ, ಇಂಜಿನಿಯರ್ ಅರುಣ್ ಬಿಜೆಪಿ ಕಾರ್ಯಕರ್ತರಾದ ಜಯರಾಮ್, ಕೇಶವಮೂರ್ತಿ, ಜಿಲ್ಲಾ ಅರಸು ಸಂಘದ ಅಧ್ಯಕ್ಷ ಯೋಗರಾಜ್ ಅರಸು ಸೇರಿದಂತೆ ಹಲವರು ಉಪಸ್ಥಿತರಿದ್ದರು.
previous post
next post
