Blog

ಮತದಾರರ ಪಟ್ಟಿ ಪರಿಷ್ಕರಣೆಗೆ ಚಾಲನೆ ನೀಡಿದ ಮಾಜಿ ಸಚಿವರು

🔴ಮತದಾರರ ಪಟ್ಟಿ ಪರಿಷ್ಕರಣೆ ಪ್ರಜಾಪ್ರಭುತ್ವದ ಬಲವಾದ ಅಡಿಪಾಯ: ಹೆಚ್.ಕೆ. ಕುಮಾರಸ್ವಾಮಿ

🔴ಆಲೂರು ಕ್ಷೇತ್ರದಲ್ಲಿ SIR ಅಭಿಯಾನಕ್ಕೆ ಚಾಲನೆ; ಮನೆ-ಮನೆ ಸಮೀಕ್ಷೆಗೆ ಸಾರ್ವಜನಿಕರ ಸಹಕಾರಕ್ಕೆ ಮನವಿ

ಆಲೂರು :- ಪ್ರಜಾಪ್ರಭುತ್ವದ ಅತಿ ದೊಡ್ಡ ಹಬ್ಬವಾದ ಚುನಾವಣೆಗಳ ಸುಗಮ ನಿರ್ವಹಣೆಗೆ ಅಗತ್ಯವಾದ ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ (SIR) ಪ್ರಕ್ರಿಯೆ ಕ್ಷೇತ್ರಾದ್ಯಂತ ಆರಂಭಗೊಂಡಿದ್ದು, ಮಾಜಿ ಸಚಿವರಾದ ಶ್ರೀ ಹೆಚ್.ಕೆ. ಕುಮಾರಸ್ವಾಮಿ ಅವರು ಅಭಿಯಾನಕ್ಕೆ ಚಾಲನೆ ನೀಡಿ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಿದರು.

ಅಭಿಯಾನದ ಅಂಗವಾಗಿ ಆಲೂರು ತಾಲೂಕಿನ ಹೊಸಕೋಟೆ ಹೋಬಳಿಯ ಬೋಸವಳ್ಳಿ ಗ್ರಾಮದ ತಮ್ಮ ಸ್ವಗೃಹಕ್ಕೆ ಆಗಮಿಸಿದ ಚುನಾವಣಾ ಆಯೋಗದಿಂದ ನಿಯೋಜಿತಗೊಂಡಿರುವ ಅಧಿಕಾರಿಗಳು ಹಾಗೂ ಬೂತ್ ಮಟ್ಟದ ಅಧಿಕಾರಿಗಳಿಗೆ (BLO) ಅಗತ್ಯ ದಾಖಲೆಗಳನ್ನು ಸಲ್ಲಿಸುವ ಮೂಲಕ ಮಾಜಿ ಸಚಿವರು ಪ್ರಕ್ರಿಯೆಯಲ್ಲಿ ಭಾಗವಹಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಹೆಚ್.ಕೆ. ಕುಮಾರಸ್ವಾಮಿ ಅವರು, “ಮತದಾನ ಮಾಡುವುದು ಪ್ರತಿಯೊಬ್ಬ ನಾಗರಿಕನ ಪವಿತ್ರ ಹಕ್ಕು. ಆದರೆ ಆ ಹಕ್ಕನ್ನು ಚಲಾಯಿಸಲು ಮತದಾರರ ಪಟ್ಟಿಯಲ್ಲಿ ಹೆಸರು ಇರುವುದು ಅತ್ಯಗತ್ಯ. ಪ್ರತಿಯೊಬ್ಬರೂ ತಮ್ಮ ಹೆಸರು, ವಿಳಾಸ ಹಾಗೂ ಇತರೆ ವಿವರಗಳು ಸರಿಯಾಗಿವೆಯೇ ಎಂಬುದನ್ನು ಪರಿಶೀಲಿಸಿಕೊಳ್ಳಬೇಕು” ಎಂದು ಹೇಳಿದರು.

ರಾಜ್ಯ ಚುನಾವಣಾ ಆಯೋಗದ ನಿರ್ದೇಶನದಂತೆ ಜುಲೈ 29ರವರೆಗೆ ಮನೆ-ಮನೆ ಸಮೀಕ್ಷೆ ಕಾರ್ಯ ನಡೆಯಲಿದ್ದು, ಬಿಎಲ್‌ಒ ಅಧಿಕಾರಿಗಳು ಪ್ರತಿ ಮನೆಗೂ ಭೇಟಿ ನೀಡಿ ಮತದಾರರ ಮಾಹಿತಿ ಸಂಗ್ರಹಿಸಲಿದ್ದಾರೆ. ಸಾರ್ವಜನಿಕರು ಅಧಿಕಾರಿಗಳಿಗೆ ಅಗತ್ಯ ದಾಖಲೆಗಳನ್ನು ನೀಡಿ ಸಂಪೂರ್ಣ ಸಹಕಾರ ನೀಡಬೇಕು ಎಂದು ಅವರು ಮನವಿ ಮಾಡಿದರು.

ಹೊಸದಾಗಿ ಮತದಾನದ ಹಕ್ಕು ಪಡೆದ ಯುವಕರು ಹಾಗೂ ಈಗಾಗಲೇ ಮತದಾರರಾಗಿರುವವರು ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರು ಪರಿಶೀಲಿಸಿಕೊಳ್ಳಬೇಕು. ಹೆಸರು, ವಿಳಾಸ ಅಥವಾ ಇತರೆ ಮಾಹಿತಿಗಳಲ್ಲಿ ತಪ್ಪುಗಳಿದ್ದರೆ ಪರಿಷ್ಕರಣೆ ಅವಧಿಯಲ್ಲಿ ಸರಿಪಡಿಸಿಕೊಳ್ಳಲು ಅವಕಾಶವಿದೆ ಎಂದರು.

“ನಮ್ಮ ಪ್ರಜಾಪ್ರಭುತ್ವದ ಸುಭದ್ರ ಅಡಿಪಾಯ ಮತದಾನವಾಗಿದೆ. ಮತದಾರರ ಪಟ್ಟಿಯೇ ಅದರ ಮೊದಲ ಹೆಜ್ಜೆ. ಆದ್ದರಿಂದ ಪ್ರತಿಯೊಬ್ಬ ನಾಗರಿಕರೂ ಈ ಪರಿಷ್ಕರಣೆ ಕಾರ್ಯದಲ್ಲಿ ಸಕ್ರಿಯವಾಗಿ ಪಾಲ್ಗೊಂಡು ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಮತ್ತಷ್ಟು ಬಲಪಡಿಸಬೇಕು” ಎಂದು ಹೆಚ್.ಕೆ. ಕುಮಾರಸ್ವಾಮಿ ತಿಳಿಸಿದರು.

ಈ ವೇಳೆ ಚುನಾವಣಾ ಅಧಿಕಾರಿಗಳು, ತಾಲೂಕು ಆಡಳಿತದ ಸಿಬ್ಬಂದಿ ಹಾಗೂ ಬೂತ್ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

Related posts

ಕರಾವಳಿ ಜಿಲ್ಲೆಯನ್ನು ನಿರ್ಲಕ್ಷ್ಯ ಮಾಡಿದ ಕೇಂದ್ರ ಬಜೆಟ್

Bimba Prakashana

ಸಕಲೇಶಪುರ ನಗರ ಠಾಣೆಯಲ್ಲಿ ಸಮಸ್ಯೆಗಳ ಬಗ್ಗೆ ಸಭೆ

Bimba Prakashana

ಸ್ವಯಂ ಟೈಮ್ಸ್ ವಾರ್ತಾ ವಾಹಿನಿಯನ್ನು ಹ್ಯಾಕ್ ಮಾಡಿದ ಸೈಬರ್ ಕಳ್ಳ

Bimba Prakashana

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More