ವರದಿ.
ನಾಗೇಶ್ ಎಂ ಎಚ್ ಮಾಗೇರಿ.
🔴ತಂಬಲಗೇರಿ ಗ್ರಾಮದಲ್ಲಿ ಬಗೆಹರಿಯದ ಬಹಿಷ್ಕಾರ ಸಮಸ್ಯೆ: ಹಿರಿಯ ನಾಗರಿಕರ ಕುಟುಂಬಕ್ಕೆ ಪುನ: ಕಿರುಕುಳ ಆರೋಪ
ಸಕಲೇಶಪುರ: ಎರಡು ವರ್ಷದ ಹಿಂದೆ ಕ್ಷುಲಕ ಕಾರಣಕ್ಕೆ ಬಹಿಷ್ಕಾರ ಹಾಕಿದ್ದ ಗುಂಡೇಗೌಡ ಎಂಬುವರ ಮನೆಗೆ ಪುನ: ಕೆಲವರು ಬಹಿಷ್ಕಾರ ಹೇರಲು ಮುಂದಾಗಿದ್ದು ಇದರಿಂದ ಹಿರಿಯ ನಾಗರಿಕ ಗುಂಡೇಗೌಡರವರ ಕುಟುಂಬಕ್ಕೆ ಆತಂಕದ ಪರಿಸ್ಥಿತಿ ನಿರ್ಮಾಣವಾಗಿದೆ.
ಹೌದು ತಾಲೂಕಿನ ವನಗೂರು ಗ್ರಾ.ಪಂ ವ್ಯಾಪ್ತಿಯ ತಂಬಲಗೇರಿ ಗ್ರಾಮದ ಹಿರಿಯ ನಾಗರಿಕರಾದ ಗುಂಡೇಗೌಡ (73) ಹಾಗೂ ಅವರ ಪತ್ನಿ ರಾಧಮ್ಮ ( 67) ಕಳೆದ ಹಲವಾರು ವರ್ಷಗಳಿಂದ ಗ್ರಾಮದಲ್ಲಿ ನೆಲೆಸಿದ್ದು ಇವರ ಮಕ್ಕಳು ಬೆಂಗಳೂರಿನಲ್ಲಿ ಖಾಸಗಿ ಉದ್ಯೋಗದ ನಿಮಿತ್ತ ನೆಲೆಸಿದ್ದಾರೆ.
2023ರಲ್ಲಿ ನವೀನ್ ಎಂಬುವರು ಅಕಸ್ಮಿಕವಾಗಿ ಶೂಟ್ ಔಟ್ ನಲ್ಲಿ ಮೃತಪಟ್ಟಿದ್ದು ಇದರಲ್ಲಿ ಗ್ರಾಮದ ಇಬ್ಬರು ಭಾಗಿಯಾಗಿದ್ದಾರೆಂಬ ಆರೋಪದ ಹಿನ್ನೆಲೆಯಲ್ಲಿ ನ್ಯಾಯಾಂಗ ಬಂಧನಕ್ಕೆ ಒಳಗಾಗಿ ನಂತರ ಬಿಡೆಯಾಗಿದ್ದಾರೆ.
ಶೂಟ್ ಔಟ್ ಪ್ರಕರಣದ ಆರೋಪಿ ಅನಿಲ್ ಕುಮಾರ್ ಗುಂಡೇಗೌಡರ ಮನೆಯಲ್ಲಿ ಕೆಲಸ ಮಾಡುತ್ತಿದ್ದು ಅವನ ಬಿಡುಗಡೆಗೆ ಗುಂಡೇಗೌಡರು ಸಹಕರಿಸಿದ್ದಾರೆಂದು ಆರೋಪಿಸಿ ಗ್ರಾಮದ ಕೆಲವರು ಗುಂಡೇಗೌಡರ ಕುಟುಂಬಕ್ಕೆ 2024 ರಲ್ಲಿ ಬಹಿಷ್ಕಾರ ಹೇರಿದ್ದರು. ಇದರಿಂದ ವಯಸ್ಸಾದ ಗುಂಡೇಗೌಡ ಹಾಗೂ ಅವರ ಪತ್ನಿ ರಾಧಮ್ಮ ಗ್ರಾಮದಲ್ಲಿ ಯಾರ ಬಳಿ ಸಹ ಮಾತನಾಡುವಂತಿರಲಿಲ್ಲ. ಯಾರಾದರು ಮಾತನಾಡಿದರೆ ಅವರಿಗೆ ದಂಡ ವಿಧಿಸಲಾಗುತ್ತಿತ್ತು. ಬಂಧುಗಳು ಸಹ ಇವರ ಬಳಿ ಮಾತನಾಡುವಂತಿರಲಿಲ್ಲ. ಕೆಲಸಕ್ಕೆ ಸ್ಥಳೀಯ ಕೂಲಿ ಕಾರ್ಮಿಕರು ಬರುವಂತಿರಲಿಲ್ಲ.ಇದರಿಂದ ಹಿರಿಯ ನಾಗರಿಕ ಗುಂಡೇಗೌಡರ ಕುಟುಂಬದವರು ಕಣ್ಣೀರಿನಲ್ಲಿ ಕಾಲ ಕಳೆಯುವ ಪರಿಸ್ಥಿತಿ ನಿರ್ಮಾಣವಾಗಿತ್ತು. ನಂತರ ಈ ಪ್ರಕರಣ ಮಾಧ್ಯಮಗಳಲ್ಲಿ ಪ್ರಕಟವಾಗಿ ದೂರು ದಾಖಲಾಗಿದ್ದರಿಂದ ಪ್ರಕರಣಕ್ಕೆ ಬ್ರೇಕ್ ಬಿದ್ದಿತ್ತು.
ಇದೀಗ ಪುನ: ಬಹಿಷ್ಕಾರಕ್ಕೆ ಯತ್ನ: ಗುಂಡೇಗೌಡರ ಮೇಲೆ ಕಿಡಿಕಾರುತ್ತಿದ್ದ ಕೆಲವರು ಇದೀಗ ಎರಡು ವರ್ಷಗಳ ಪುನ: ಗುಂಡೇಗೌಡರ ಕುಟುಂಬಕ್ಕೆ ಬಹಿಷ್ಕಾರಕ್ಕೆ ಹೇರಲು ಮುಂದಾಗಿರುವ ಆಡಿಯೋವೊಂದು ವೈರಲ್ ಆಗಿದೆ. ಈ ಕುರಿತು ಕೆಲವರು ಕಳೆದ ಭಾನುವಾರ ಸಭೆ ಸಹ ನಡೆಸಿದ್ದಾರೆ ಎನ್ನಲಾಗಿದೆ. ಗುಂಡೇಗೌಡ ದಂಪತಿಗಳನ್ನು ಗ್ರಾಮದಿಂದ ಹೊರ ಹಾಕಲೇ ಬೇಕೆಂದು ಕೆಲವು ವ್ಯಕ್ತಿಗಳು ತೀರ್ಮಾನಿಸಿದ್ದು ಹೀಗಾಗಿ ವಿನಾಕಾರಣ ಕಿರುಕುಳ ನೀಡಲಾಗುತ್ತಿದೆ. ಗುಂಡೇಗೌಡರಿಗೆ ಕಿರುಕುಳ ನೀಡುತ್ತಿರುವವರಲ್ಲಿ ಕೆಲವರು ಅಪರಾಧ ಹಿನ್ನೆಲೆಯನ್ನು ಹೊಂದಿದ್ದು ಇದರಿಂದ ಗುಂಡೇಗೌಡರ ಪರ ಸಹಾನುಭುತಿ ಹೊಂದಿರುವವರು ಗುಂಡೇಗೌಡರ ಪರ ನೇರವಾಗಿ ನಿಲ್ಲಲು ಅಂಜುತ್ತಿದ್ದಾರೆ.
ಒಟ್ಟಾರೆಯಾಗಿ ಇಳಿ ವಯಸ್ಸಿನಲ್ಲಿ ಗ್ರಾಮದಲ್ಲಿ ನೆಮ್ಮದಿಯಾಗಿ ಇರಬೇಕಿದ್ದ ಗುಂಡೇಗೌಡ ಹಾಗೂ ರಾಧಮ್ಮ ದಂಪತಿಗಳು ಗ್ರಾಮದಲ್ಲಿ ಆತಂಕದಲ್ಲೆ ಇರಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಕೂಡಲೆ ತಾಲೂಕು ಆಡಳಿತದ ಅಧಿಕಾರಿಗಳು ಇತ್ತ ಗಮನವರಿಸಿ ಗ್ರಾಮದಲ್ಲಿ ಶಾಂತಿ ಸಭೆ ಮಾಡಿ ಗುಂಡೇಗೌಡರ ಕುಟುಂಬದವರಿಗೆ ನ್ಯಾಯ ಒದಗಿಸಲು ಕ್ರಮ ಕೈಗೊಳ್ಳಬೇಕಾಗಿದೆ.
