Blog

ಸರಕಾರಿ ಶಾಲೆಗಳು ಹಳ್ಳಿಯ ಆತ್ಮವಾಗಿ ಕಾರ್ಯ ನಿರ್ವಹಿಸುತ್ತಿದೆ – ಅರುಣ್ ಗೌಡ



ಆಲೂರು: ಸರಕಾರಿ ಶಾಲೆಗಳು ಜಾತಿ, ಧರ್ಮ, ಬಡವ-ಬಲ್ಲಿದ ಎಂಬ ಭೇದವಿಲ್ಲದೆ ಎಲ್ಲರಿಗೂ ಸಮಾನ ಶಿಕ್ಷಣ ನೀಡುವ ಮೂಲಕ ಪ್ರತಿಯೊಂದು ಹಳ್ಳಿಯ ಆತ್ಮವಾಗಿ ಕಾರ್ಯನಿರ್ವಹಿಸುತ್ತಿವೆ ಎಂದು ಚಲನಚಿತ್ರ ನಿರ್ದೇಶಕ ,ಪತ್ರಕರ್ತ ಅರುಣ್ ಗೌಡ ಕರಡಿಗಾಲ ಹೇಳಿದರು.

ತಾಳೂರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ‘ಪುಟ್ಟಗೂಡಿನ ಪಟ್ಟದರಸಿ’ ಚಿತ್ರತಂಡದ ವತಿಯಿಂದ ವಿದ್ಯಾರ್ಥಿಗಳಿಗೆ ಉಚಿತ ನೋಟ್‌ಬುಕ್ ವಿತರಿಸಿ ಅವರು ಮಾತನಾಡಿದರು.

‘ಪುಟ್ಟಗೂಡಿನ ಪಟ್ಟದರಸಿ’ ಚಿತ್ರದ ಚಿತ್ರೀಕರಣದ ಸಂದರ್ಭದಲ್ಲಿ ಶಾಲೆಯ ಶಿಕ್ಷಕರು, ವಿದ್ಯಾರ್ಥಿಗಳು ಹಾಗೂ ಗ್ರಾಮಸ್ಥರು ನೀಡಿದ ಸಹಕಾರವನ್ನು ಮರೆಯಲಾಗದು. ಈ ಹಿನ್ನೆಲೆಯಲ್ಲಿ ಶಾಲೆಯ ಮಕ್ಕಳ ಕಲಿಕೆಗೆ ನೆರವಾಗುವ ಉದ್ದೇಶದಿಂದ ಪ್ರತಿವರ್ಷ ನೋಟ್‌ಬುಕ್ ಸೇರಿದಂತೆ ಅಗತ್ಯ ಶೈಕ್ಷಣಿಕ ಸಾಮಗ್ರಿಗಳನ್ನು ನೀಡಲು ಚಿತ್ರತಂಡ ನಿರ್ಧರಿಸಿದೆ ಎಂದು ತಿಳಿಸಿದರು.

ಸರಕಾರಿ ಶಾಲೆಗಳು ಅಭಿವೃದ್ಧಿಯಾದರೆ ಮಾತ್ರ ದೇಶದ ಶೈಕ್ಷಣಿಕ ಪ್ರಗತಿ ಸಾಧ್ಯ. ಸರ್ಕಾರದ ಸೌಲಭ್ಯಗಳ ಜತೆಗೆ ಸಾರ್ವಜನಿಕರು ನೀಡುವ ನೆರವನ್ನು ಸದುಪಯೋಗಪಡಿಸಿಕೊಂಡು ವಿದ್ಯಾರ್ಥಿಗಳು ಉತ್ತಮ ಭವಿಷ್ಯ ರೂಪಿಸಿಕೊಳ್ಳಬೇಕು ಎಂದರು.

ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘದ ಆಲೂರು ತಾಲ್ಲೂಕು ಅಧ್ಯಕ್ಷ ಡಿ.ಎಂ. ವರದರಾಜು ಮಾತನಾಡಿ, ಸರಕಾರಿ ಶಾಲೆಗಳ ಅಭಿವೃದ್ಧಿಗೆ ಚಿತ್ರತಂಡ ನೀಡುತ್ತಿರುವ ಕೊಡುಗೆ ಶ್ಲಾಘನೀಯ. ಇಂತಹ ನಿಸ್ವಾರ್ಥ ಸೇವೆ ಸಮಾಜಕ್ಕೆ ಮಾದರಿಯಾಗಿದೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಾಲೆಯ ಮುಖ್ಯ ಶಿಕ್ಷಕ ಹಾಗೂ ಸಾಹಿತಿ ಕೊಟ್ರೇಶ್ ಎಸ್. ಉಪ್ಪಾರ್ ಮಾತನಾಡಿ, ಅರುಣ್ ಗೌಡ ಅವರು ಚಲನಚಿತ್ರ ನಿರ್ದೇಶಕರಾಗಿ ಮಾತ್ರವಲ್ಲದೆ ಪತ್ರಕರ್ತ ಹಾಗೂ ಸಂಘಟಕರಾಗಿಯೂ ಸಾಮಾಜಿಕ ಕಾಳಜಿಯಿಂದ ಕಾರ್ಯನಿರ್ವಹಿಸುತ್ತಿದ್ದಾರೆ. ಕಳೆದ ನಾಲ್ಕೈದು ವರ್ಷಗಳಿಂದ ಸಕಲೇಶಪುರ–ಹೆತ್ತೂರು ಭಾಗದ ಸರಕಾರಿ ಶಾಲಾ ಮಕ್ಕಳಿಗೆ ಪ್ರತಿವರ್ಷ ₹30ಸಾವಿರದಿಂದ ₹40ಸಾವಿರ  ಹಣವನ್ನು ನೋಟ್‌ಬುಕ್‌ಗಳನ್ನು, ಪ್ರತಿಭಾ ಪುರಸ್ಕಾರ ಕಾರ್ಯಕ್ರಮಕ್ಕೆ ವಿನಿಯೋಗಿಸುತ್ತಿದ್ದಾರೆ . ಕಳೆದ ವರ್ಷದಿಂದ ತಾಳೂರು ಶಾಲೆಗೂ ನೆರವು ನೀಡುತ್ತಿರುವುದು ಶ್ಲಾಘನೀಯ ಎಂದರು.

ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಯ ಮಾಜಿ ಅಧ್ಯಕ್ಷ ಟಿ.ಇ. ಧರ್ಮ, ಹಿರಿಯ ಶಿಕ್ಷಕಿ ವಿ. ರವಿತ, ಅತಿಥಿ ಶಿಕ್ಷಕಿ ಎ.ಎಸ್. ರೇಖಾ ಹಾಗೂ ವಿದ್ಯಾರ್ಥಿಗಳು ಇದ್ದರು.

Related posts

ನಿಧನ – ನಿಂಜೂರು ಸದಾಶಿವ ಆಚಾರ್ಯ

Bimba Prakashana

ಶನಿವಾರ ಸಂತೆ ಸಮೀಪ ನಿವೇಶನಗಳು

Bimba Prakashana

ಬೇಕಾಗಿದ್ದಾರೆ

Bimba Prakashana

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More