Blog

ಅರಣ್ಯ ಸ್ಥಳದಲ್ಲಿ ಅಕ್ರಮ ಗುಡಿಸಲು – ಅರ್ಜುನ ಸ್ಮಾರಕ ಉದ್ಘಾಟನೆ ಸ್ಥಳದಲ್ಲಿ ಕರವೇ ಪ್ರತಿಭಟನೆಗೆ ಕರೆ

ಅರಣ್ಯ ಜಾಗದಲ್ಲಿ ಅಕ್ರಮ ಗುಡಿಸಲು: ಅರ್ಜುನ ಸ್ಮಾರಕ ಉದ್ಘಾಟನಾ ಸ್ಥಳದಲ್ಲಿ ಕರವೇ ಪ್ರತಿಭಟನೆಗೆ ಕರೆ.


ಸಕಲೇಶಪುರ, ಮೇ 5: ದೇವಾಲಕೆರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹೊಡಚಹಳ್ಳಿ (ಹಕ್ಕೆರಿ) ಪ್ರದೇಶದ ಅರಣ್ಯ ಸರ್ವೇ ನಂ. 28ರಲ್ಲಿ ಅನಧಿಕೃತವಾಗಿ ಗುಡಿಸಲುಗಳು ನಿರ್ಮಾಣವಾಗಿರುವ ಪ್ರಕರಣ ಬೆಳಕಿಗೆ ಬಂದಿದೆ. ಹೊರರಾಜ್ಯದವರ ಅಕ್ರಮ ವಾಸದ ಶಂಕೆ ವ್ಯಕ್ತವಾಗಿದ್ದು, ಪ್ರಕರಣದ ಕುರಿತು ಸಂಪೂರ್ಣ ತನಿಖೆ ನಡೆಸುವಂತೆ ಕರ್ನಾಟಕ ರಕ್ಷಣಾ ವೇದಿಕೆ (ನಾರಾಯಣಗೌಡ ಬಣ) ತಾಲೂಕು ಅಧ್ಯಕ್ಷ ಗಗನ್ ಹಾಡ್ಲಾಹಳ್ಳಿ ಆಗ್ರಹಿಸಿದ್ದಾರೆ.

ಈ ಸಂಬಂಧ ಅರಣ್ಯ ಅಧಿಕಾರಿಗಳಿಗೆ ಮನವಿ ಸಲ್ಲಿಸಿ ಸುದ್ದಿಗೋಷ್ಠಿ ನಡೆಸಿ, ಆರ್‌ಎಫ್ಓ ಹೇಮಂತ್ ಕುಮಾರ್ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಲಾಗಿತ್ತು. ಸ್ಥಳೀಯ ರೈತರಿಗೆ ಅರಣ್ಯ ಕಾಯ್ದೆಯಡಿ ನೋಟಿಸ್ ನೀಡಲಾಗುತ್ತಿದೆಯಾದರೂ, ಅಕ್ರಮ ವಾಸಸ್ಥಳಗಳಿಗೆ ನೀರು ಹಾಗೂ ವಿದ್ಯುತ್ ಸೌಲಭ್ಯ ಒದಗಿಸಿರುವುದು ಆಡಳಿತದ ದ್ವಂದ್ವ ನೀತಿಯನ್ನು ಬಯಲಿಗೆಳೆಯುತ್ತದೆ ಎಂದು ಅವರು ಆರೋಪಿಸಿದ್ದಾರೆ.

ಪ್ರಕರಣದಲ್ಲಿ ಕೆಲ ಅಧಿಕಾರಿಗಳು ಹಾಗೂ ಪ್ರಭಾವಿಗಳ ಕೈವಾಡವಿರುವ ಶಂಕೆ ವ್ಯಕ್ತವಾಗಿದ್ದು, ಸಮಗ್ರ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಮನವಿ ಸಲ್ಲಿಸಿದರೂ ಇದುವರೆಗೆ ಯಾವುದೇ ಕ್ರಮ ಕೈಗೊಳ್ಳದಿರುವುದಕ್ಕೆ ಕರವೇ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ.

ಈ ಹಿನ್ನೆಲೆಯಲ್ಲಿ, ನಾಳೆ ಅರಣ್ಯ ಸಚಿವರಾದ ಈಶ್ವರ್ ಖಂಡ್ರೆ ಅವರು ಭಾಗವಹಿಸಲಿರುವ ಅರ್ಜುನ ಆನೆ ಸ್ಮಾರಕ ಉದ್ಘಾಟನಾ ಕಾರ್ಯಕ್ರಮದ ವೇಳೆ, ಸಂಬಂಧಪಟ್ಟವರ ವಿರುದ್ಧ ಕ್ರಮ ಕೈಗೊಳ್ಳುವವರೆಗೆ ಉದ್ಘಾಟನೆಗೆ ಅವಕಾಶ ನೀಡದೆ ಪ್ರತಿಭಟನೆ ನಡೆಸುವುದಾಗಿ ಕರವೇ ತಾಲೂಕು ಘಟಕ ಕರೆ ನೀಡಿದೆ.
“ಆರ್‌ಎಫ್ ಓ ಹೇಮಂತ್ ಕುಮಾರ್ ವಿರುದ್ಧ ಕ್ರಮ ಕೈಗೊಳ್ಳುವವರೆಗೆ ಉದ್ಘಾಟನೆ ನಡೆಯಲು ಬಿಡುವುದಿಲ್ಲ. ತಾಲೂಕಿನ ಕರವೇ ಕಾರ್ಯಕರ್ತರು ಬೃಹತ್ ಪ್ರಮಾಣದಲ್ಲಿ ಪ್ರತಿಭಟನೆ ನಡೆಸಲಿದ್ದಾರೆ,” ಎಂದು ಕರವೇ ತಾಲೂಕು ಅಧ್ಯಕ್ಷ ಗಗನ್ ಹಾಡ್ಲಾಹಳ್ಳಿ ತಿಳಿಸಿದ್ದಾರೆ.

ನಾಳೆ ನಡೆಯಲಿರುವ ಪ್ರತಿಭಟನೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಕರವೇ ಕಾರ್ಯಕರ್ತರು ಹಾಗೂ ಸಾರ್ವಜನಿಕರಿಗೆ ಕರೆ ನೀಡಲಾಗಿದೆ.

Related posts

ಗೌರಿ ಗಣೇಶ ಹಬ್ಬದ ಶುಭಾಶಯಗಳು

Bimba Prakashana

ಹೆತ್ತೂರು ಶ್ರೀ ಕುಮಾರ ಲಿಂಗೇಶ್ವರ ಸ್ವಾಮಿ ಜಾತ್ರೆ

Bimba Prakashana

ಮಾರನ ಹಳ್ಳಿ ಗ್ರಾಮದಲ್ಲಿ ನಿಷ್ಕ್ರಿಯ ಆಗಿರುವ ಶುದ್ಧ ಕುಡಿಯುವ ನೀರಿನ ಘಟಕ

Bimba Prakashana

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More