ಹಾನ್ ಬಾಳ್ ಚಿಕ್ಕಿ ವತಿಯಿಂದ ಮೇ 1ರಿಂದ 17ರವರೆಗೆ ಆಯೋಜಿಸಲಾಗುತ್ತಿರುವ “ಲಿಟ್ಲ್ ಆರ್ಟಿಸ್ಟ್ ” ಕಾರ್ಯಕ್ರಮಕ್ಕೆ ತೀರ್ಪುಗಾರರಾಗಿ ಖ್ಯಾತ ಚಿತ್ರಕಲಾವಿದರಾದ ಶ್ರೀ ಡಿ. ಎಸ್. ಶ್ರೀಪತಿ ರಾವ್ ಅವರನ್ನು ಆತ್ಮೀಯವಾಗಿ ಸ್ವಾಗತಿಸುತ್ತೇವೆ.
ಶ್ರೀ ಡಿ. ಎಸ್. ಶ್ರೀಪತಿ ರಾವ್ ಅವರು ಮಂಗಳೂರು ತಾಲೂಕಿನ ಕೊಳಂಬೆ ಗ್ರಾಮದದಲ್ಲಿ ಡಿ. ಸುಬ್ಬರಾವ್ ಮತ್ತು ಜಲಜಮ್ಮ ದಂಪತಿಯ ಪುತ್ರರಾಗಿ 17-04-1950ರಂದು ಜನಿಸಿದರು. ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣವನ್ನು ಬಜ್ಪೆಯಲ್ಲಿ ಪೂರ್ಣಗೊಳಿಸಿ, ಪದವಿ ಹಾಗೂ ಚಿತ್ರಕಲಾ ಪದವಿಯನ್ನು ಬೆಂಗಳೂರಿನಲ್ಲಿ ಪಡೆದವರು.
1977ರಲ್ಲಿ ಸರಕಾರಿ ಪ್ರೌಢಶಾಲೆಯಲ್ಲಿ ಚಿತ್ರಕಲಾ ಶಿಕ್ಷಕರಾಗಿ ಸೇವೆಯನ್ನು ಪ್ರಾರಂಭಿಸಿದ ಅವರು, ರಾಜ್ಯದ ವಿವಿಧ ಭಾಗಗಳಲ್ಲಿ ಸೇವೆ ಸಲ್ಲಿಸಿ, 2006ರಲ್ಲಿ ಭಡ್ತಿ ಹೊಂದಿ ಮಂಗಳೂರಿನ ಸರಕಾರಿ ಶಿಕ್ಷಕ-ಶಿಕ್ಷಣ ಮಹಾವಿದ್ಯಾಲಯದಲ್ಲಿ ಚಿತ್ರಕಲಾ ಉಪನ್ಯಾಸಕರಾಗಿ ನೇಮಕಗೊಂಡರು.
ಒಟ್ಟು 37 ವರ್ಷಗಳ ಸೇವೆಯ ನಂತರ 2008ರಲ್ಲಿ ನಿವೃತ್ತರಾದರು.
ಚೆನ್ನಪಟ್ಟಣ ಮತ್ತು ಪುಂಜಾಲಕಟ್ಟೆಗಳಲ್ಲಿ ಚಿತ್ರಕಲಾ ಗ್ರೇಡ್ ಪರೀಕ್ಷಾ ಕೇಂದ್ರಗಳನ್ನು ಸ್ಥಾಪಿಸಿ, ಸುಮಾರು 30 ವರ್ಷಗಳ ಕಾಲ ವಿದ್ಯಾರ್ಥಿಗಳಿಗೆ ತರಬೇತಿ ನೀಡುತ್ತಾ ಪರೀಕ್ಷೆಗಳನ್ನು ನಡೆಸಿರುವುದು ವಿಶೇಷ.
ನವದೆಹಲಿಯ ನ್ಯಾಷನಲ್ ಮ್ಯೂಸಿಯಮ್ ವತಿಯಿಂದ “Propagation of Culture in Fine Arts” ವಿಷಯದಲ್ಲಿ ಎರಡು ಬಾರಿ ತರಬೇತಿ ಪಡೆದಿದ್ದಾರೆ.
“ಛಾಯಾ ಆರ್ಟಿಸ್ಟ್ ಇನ್ಸ್ಟಿಟ್ಯೂಟ್”ನಲ್ಲಿ ನಾಟಕ ಹಾಗೂ ರಂಗಪ್ರಸಾದನದಲ್ಲಿ ಒಂದು ವರ್ಷದ ತರಬೇತಿ ಪಡೆದು, ಅದರ ಜ್ಞಾನವನ್ನು ವಿದ್ಯಾರ್ಥಿಗಳಿಗೆ ಹಂಚಿಕೊಂಡಿದ್ದಾರೆ. 1971ರಿಂದ 1985ರವರೆಗೆ ಬೆಂಗಳೂರಿನ ವಿವಿಧ ಸ್ಥಳಗಳಲ್ಲಿ ಹಾಗೂ ದೆಹಲಿಯಲ್ಲಿ ಚಿತ್ರಕಲಾ ಶಿಬಿರಗಳು ಮತ್ತು ಪ್ರದರ್ಶನಗಳನ್ನು ಆಯೋಜಿಸಿ ಕಲಾಪೋಷಣೆಗೆ ಕೊಡುಗೆ ನೀಡಿದ್ದಾರೆ.
2009ರಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಚಿತ್ರಕಲಾ ಸಂಘದಿಂದ ಸನ್ಮಾನಿತರಾದ ಅವರು, ಯಕ್ಷಗಾನ ಕೂಟಗಳಲ್ಲಿ ಹಿಮ್ಮೇಳ ಕಲಾವಿದರಾಗಿ ಪ್ರಸಿದ್ಧರಾಗಿದ್ದಾರೆ.
ನಿವೃತ್ತಿಯ ನಂತರವೂ ಯಾವುದೇ ಫಲಾಪೇಕ್ಷೆಯಿಲ್ಲದೆ ಚಿತ್ರಕಲೆ, ಯೋಗ ಮುಂತಾದ ತರಬೇತಿಗಳನ್ನು ನೀಡುತ್ತಾ ಸಮಾಜಕ್ಕೆ ಸೇವೆ ಸಲ್ಲಿಸುತ್ತಿರುವುದು ಶ್ಲಾಘನೀಯ.
ಇಂತಹ ಗಣ್ಯ ವ್ಯಕ್ತಿತ್ವವು ನಮ್ಮ “ಲಿಟ್ಲ್ ಆರ್ಟಿಸ್ಟ್ ” ಕಾರ್ಯಕ್ರಮಕ್ಕೆ ತೀರ್ಪುಗಾರರಾಗಿ ಆಗಮಿಸುತ್ತಿರುವುದು ನಮಗೆ ಗೌರವದ ವಿಷಯವಾಗಿದೆ.
