ನಾಲ್ಕು ತಿಂಗಳು ಮುಂಚಿತವಾಗಿ ಆಡಳಿತ ಮೊಟಕುಗೊಳಿಸುವುದು ಸರಿಯಲ್ಲ: ಬಿ. ಗಿರೀಶ್”
ವರದಿ ಅರುಣ್ ರಾಜಪುತ್
ಬೇಲೂರು: ನಿಯಮದ ಪ್ರಕಾರ ಬೇಲೂರು ಪುರಸಭೆಯ ಆಡಳಿತಾವಧಿ ಐದು ವರ್ಷವಾಗಿದ್ದು, ಇನ್ನೂ ನಾಲ್ಕು ತಿಂಗಳ ಆಡಳಿತಾವಧಿ ಬಾಕಿ ಇರುವಾಗಲೇ ಆಡಳಿತವನ್ನು ಮೊಟಕುಗೊಳಿಸುವ ಸಾಧ್ಯತೆ ಕುರಿತು ಚರ್ಚೆ ನಡೆಸಲು ಪುರಸಭೆಯಲ್ಲಿ ತುರ್ತು ಸಭೆ ನಡೆಯಿತು. ಅಧ್ಯಕ್ಷ ಅಕ್ರಮ್ ಶರೀಫ್ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ, ಆಡಳಿತಾವಧಿಯನ್ನು ಪೂರ್ಣಗೊಳಿಸಲು ಅಗತ್ಯ ಕ್ರಮ ಕೈಗೊಳ್ಳುವ ಕುರಿತು ಸರ್ವಾನುಮತದ ನಿರ್ಣಯ ಕೈಗೊಳ್ಳಲಾಯಿತು.
ಸಭೆಯಲ್ಲಿ ಅಧಿಕಾರಿಗಳು, 2026ರ ಅಕ್ಟೋಬರ್ 3ರಂದು ಪುರಸಭೆಯ ಆಡಳಿತಾವಧಿ ಪೂರ್ಣಗೊಳ್ಳಲಿದೆ ಎಂಬ ಮಾಹಿತಿಯನ್ನು ಸದಸ್ಯರ ಗಮನಕ್ಕೆ ತಂದರು. ಈ ಹಿನ್ನೆಲೆಯಲ್ಲಿ ಆಡಳಿತಾವಧಿ ಪೂರ್ಣಗೊಳ್ಳುವ ಮುನ್ನವೇ ಮೊಟಕುಗೊಳಿಸುವ ಸಾಧ್ಯತೆ ಇದ್ದರೆ, ಸರ್ಕಾರದ ಹಂತದಲ್ಲಿ ಮನವಿ ಸಲ್ಲಿಸುವುದು ಹಾಗೂ ಅಗತ್ಯವಿದ್ದಲ್ಲಿ ನ್ಯಾಯಾಲಯದ ಮೊರೆ ಹೋಗುವ ಕುರಿತು ಸದಸ್ಯರು ಚರ್ಚಿಸಿದರು.
ಸದಸ್ಯ ಜಗದೀಶ್ ಮಾತನಾಡಿ, ಅಧ್ಯಕ್ಷರು ವಿಷಯದ ಬಗ್ಗೆ ಯಾವುದೇ ಮಾಹಿತಿ ಹೊಂದಿಲ್ಲ ಎಂದು ಕೆಲವರು ಟೀಕಿಸುತ್ತಿದ್ದರು. ಆದರೆ ಇದೀಗ ಆಡಳಿತಾವಧಿಯಲ್ಲಿ ಇನ್ನೂ ನಾಲ್ಕು ತಿಂಗಳು ಉಳಿದಿರುವ ಸಂದರ್ಭದಲ್ಲಿ, ತಮ್ಮ ಅಧಿಕಾರಾವಧಿಯನ್ನು ಕಾನೂನುಬದ್ಧವಾಗಿ ಉಳಿಸಿಕೊಳ್ಳಲು ಯಾವ ಕ್ರಮ ಕೈಗೊಳ್ಳಬೇಕು ಎಂಬುದರ ಕುರಿತು ಚರ್ಚಿಸಲು ತುರ್ತು ಸಭೆ ಕರೆದಿರುವುದು ಗಮನಾರ್ಹ. ಸರ್ಕಾರಿ ನೌಕರರಿಗೆ ಒಂದು ದಿನದ ಸೇವೆಯೂ ಲೆಕ್ಕಕ್ಕೆ ಬರುವುದಾದರೆ, ಜನಪ್ರತಿನಿಧಿಗಳ ಅಧಿಕಾರಾವಧಿಗೂ ನ್ಯಾಯಯುತವಾಗಿ ಅವಕಾಶ ಸಿಗಬೇಕು. ಈ ನಿಟ್ಟಿನಲ್ಲಿ ಕೈಗೊಳ್ಳುವ ಕ್ರಮಗಳಿಗೆ ನಮ್ಮ ಸಂಪೂರ್ಣ ಸಹಕಾರವಿದೆ ಎಂದರು.
ಸದಸ್ಯ ಬಿ. ಗಿರೀಶ್ ಮಾತನಾಡಿ, ನಿಯಮದ ಪ್ರಕಾರ ಪುರಸಭೆಯ ಆಡಳಿತಾವಧಿ 60 ತಿಂಗಳು. ಮೊದಲ 30 ತಿಂಗಳ ಅವಧಿಯಲ್ಲಿ ಪರಿಶಿಷ್ಟ ಜಾತಿ ಮೀಸಲಾತಿಯಡಿ ಅಧ್ಯಕ್ಷ ಸ್ಥಾನವನ್ನು ಅಲಂಕರಿಸಿದ್ದವರು ತಮ್ಮ ಅವಧಿಯನ್ನು ಪೂರ್ಣಗೊಳಿಸಿದ್ದಾರೆ. ನಂತರದ 30 ತಿಂಗಳ ಅವಧಿಯಲ್ಲೂ ಇನ್ನೂ ನಾಲ್ಕು ತಿಂಗಳು ಬಾಕಿ ಇರುವಾಗ ಆಡಳಿತವನ್ನು ಮೊಟಕುಗೊಳಿಸುವುದು ಸರಿಯಲ್ಲ. ಈ ಕುರಿತು ಮೇಲಾಧಿಕಾರಿಗಳಿಗೆ ಪತ್ರ ಬರೆಯುವುದರ ಜೊತೆಗೆ, ಅಗತ್ಯವಿದ್ದರೆ ನ್ಯಾಯಾಲಯದ ಮೂಲಕ ನ್ಯಾಯ ಪಡೆದುಕೊಳ್ಳಬೇಕು ಎಂದು ಅಭಿಪ್ರಾಯಪಟ್ಟರು.
ಸದಸ್ಯೆ ತೀರ್ಥಕುಮಾರಿ ಹಾಗೂ ಸದಸ್ಯ ಜಮಾಲುದ್ದೀನ್ ಮಾತನಾಡಿ, ನಮಗೆ ನ್ಯಾಯಯುತವಾಗಿ ಸಿಗಬೇಕಾದ ಅಧಿಕಾರಾವಧಿ ಪೂರ್ಣಗೊಳ್ಳಬೇಕು. ಪುರಸಭೆಯ ಆಡಳಿತಾವಧಿ ಐದು ವರ್ಷ ಎಂದು ನಿಯಮದಲ್ಲಿ ಉಲ್ಲೇಖವಾಗಿರುವಾಗ, ಅವಧಿ ಪೂರ್ಣಗೊಳ್ಳುವ ಮುನ್ನವೇ ಮೊಟಕುಗೊಳಿಸುವುದರಲ್ಲಿ ಅರ್ಥವಿಲ್ಲ. ಸರ್ಕಾರದ ಅಧಿಕಾರಿಗಳಿಗೆ ಮನವಿ ಸಲ್ಲಿಸುವುದೇ ಅಥವಾ ನ್ಯಾಯಾಲಯದ ಮೊರೆ ಹೋಗುವುದೇ ಎಂಬುದರ ಕುರಿತು ಕಾನೂನು ಸಲಹೆ ಪಡೆದು ಮುಂದುವರಿಯುವುದು ಸೂಕ್ತ ಎಂದು ಹೇಳಿದರು.
ಸಭೆಯ ಮಧ್ಯೆ ಪುರಸಭೆಯ ಮುಖ್ಯಾಧಿಕಾರಿ ಬಸವರಾಜ್ ಶಿಗ್ಗಾವಿ ಮಾಹಿತಿ ನೀಡಿ, ಪುರಸಭೆಯ ಆಡಳಿತಾವಧಿ ಐದು ವರ್ಷವಾಗಿದ್ದರೂ, ಕೆಲವು ತಾಂತ್ರಿಕ ಕಾರಣಗಳಿಂದ 2026ರ ಅಕ್ಟೋಬರ್ 3ರಂದು ಆಡಳಿತಾವಧಿ ಪೂರ್ಣಗೊಳ್ಳಲಿದೆ ಎಂಬ ಮಾಹಿತಿಯನ್ನು ಅಧ್ಯಕ್ಷರು ಹಾಗೂ ಸದಸ್ಯರ ಗಮನಕ್ಕೆ ತರಲಾಗಿದೆ ಎಂದು ಸ್ಪಷ್ಟಪಡಿಸಿದರು.
ಅಧ್ಯಕ್ಷ ಅಕ್ರಮ್ ಶರೀಫ್ ಮಾತನಾಡಿ, ಪುರಸಭೆ ಚುನಾವಣೆ 2021ರಲ್ಲಿ ನಡೆದಿದ್ದು, ಅಧ್ಯಕ್ಷರ ಚುನಾವಣೆ ನಂತರ ನಡೆದಿರುವ ಹಿನ್ನೆಲೆಯಲ್ಲಿ ಅಧ್ಯಕ್ಷರ ಅಧಿಕಾರಾವಧಿ ಯಾವ ದಿನಾಂಕದಿಂದ ಪರಿಗಣಿಸಬೇಕು ಎಂಬುದರ ಕುರಿತು ನಿಯಮಾನುಸಾರ ಪರಿಶೀಲನೆ ಅಗತ್ಯವಿದೆ. ನಿಯಮದ ಪ್ರಕಾರ ಅಧ್ಯಕ್ಷರ ಚುನಾವಣೆ ನಡೆದ ದಿನಾಂಕದಿಂದ ಆಡಳಿತ ಆರಂಭವಾಗಿದೆ ಎಂದು ಪರಿಗಣಿಸಿದರೆ ಇನ್ನೂ ನಾಲ್ಕು ತಿಂಗಳ ಅವಧಿ ಉಳಿಯುತ್ತದೆ. ಈ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಗಳಿಗೆ ವರದಿ ಸಲ್ಲಿಸಿ, ಕಾನೂನುಬದ್ಧವಾಗಿ ಆಡಳಿತಾವಧಿ ಪೂರ್ಣಗೊಳಿಸಲು ಅವಕಾಶ ನೀಡುವಂತೆ ಮನವಿ ಮಾಡಲಾಗುವುದು ಎಂದರು.
ಸಭೆಯಲ್ಲಿ ಈ ಕುರಿತು ಒಮ್ಮತದ ನಿರ್ಣಯ ಕೈಗೊಂಡು ಜಿಲ್ಲಾಧಿಕಾರಿಗಳಿಗೆ ವರದಿ ಕಳುಹಿಸಲು ತೀರ್ಮಾನಿಸಲಾಯಿತು. ಜಿಲ್ಲಾಧಿಕಾರಿಗಳಿಂದ ಸೂಕ್ತ ಪ್ರತಿಕ್ರಿಯೆ ದೊರೆಯದಿದ್ದಲ್ಲಿ, ಅಗತ್ಯವಿದ್ದರೆ ನ್ಯಾಯಾಲಯದ ಮೊರೆ ಹೋಗುವ ಬಗ್ಗೆಯೂ ಸಭೆಯಲ್ಲಿ ಒಪ್ಪಿಗೆ ಸೂಚಿಸಲಾಯಿತು. ಸಭೆಯಲ್ಲಿ ಉಪಾಧ್ಯಕ್ಷೆ ಉಷಾ ಸತೀಶ್ ಸೇರಿದಂತೆ ಪುರಸಭೆ ಸದಸ್ಯರು ಹಾಗೂ ಅಧಿಕಾರಿಗಳು ಉಪಸ್ಥಿತರಿದ್ದರು.
previous post
