Blog

ಅರುಣ್ ಗೌಡ ಕರಡಿಗಾಲರಿಗೆ ರಾಜ್ಯ ಪ್ರಶಸ್ತಿ

ಗ್ರಾಮೀಣ ಜನರ ಧ್ವನಿಯಾದ ಅರುಣ್ ಗೌಡ ಕರಡಿಗಾಲಗೆ ರಾಜ್ಯ ಹೊಯ್ಸಳ ಸಾಂಸ್ಕೃತಿಕ ಪ್ರಶಸ್ತಿ.

(ಸಾಹಿತ್ಯ, ಪತ್ರಿಕೋದ್ಯಮ, ಸಿನಿಮಾ ಮತ್ತು ಸಮಾಜಸೇವೆಯ ಸಾಧನೆಗೆ ಮಾಣಿಕ್ಯ ಪ್ರಕಾಶನದಿಂದ ಗೌರವ.)

ಸಕಲೇಶಪುರ: ಸಾಹಿತ್ಯ, ಪತ್ರಿಕೋದ್ಯಮ, ಸಿನಿಮಾ ಹಾಗೂ ಸಮಾಜಸೇವಾ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡಿರುವ ಸಕಲೇಶಪುರ ತಾಲ್ಲೂಕಿನ ಹೆತ್ತೂರು ಹೋಬಳಿಯ ವಳಲಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕರಡಿಗಾಲ ಗ್ರಾಮದ ಅರುಣ್ ಗೌಡ ಕರಡಿಗಾಲ ಅವರಿಗೆ ಕರ್ನಾಟಕ ರಾಜ್ಯ ಹೊಯ್ಸಳ ಸಾಂಸ್ಕೃತಿಕ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.

ಮಾಣಿಕ್ಯ ಪ್ರಕಾಶನದ 11ನೇ ವಾರ್ಷಿಕ ಮಹೋತ್ಸವದ ಅಂಗವಾಗಿ ಹಾಸನದ ಸಂಸ್ಕೃತಿ ಭವನದಲ್ಲಿ ಭಾನುವಾರ ಆಯೋಜಿಸಿದ್ದ ‘ಮಾಣಿಕ್ಯ ಸಂಭ್ರಮ’ ಹಾಗೂ ರಾಜ್ಯಮಟ್ಟದ ಕವಿಗೋಷ್ಠಿ ಕಾರ್ಯಕ್ರಮದಲ್ಲಿ ಈ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಕಳೆದ ಹತ್ತು ವರ್ಷಗಳಿಂದ ಸಿನಿಮಾ ಕ್ಷೇತ್ರದಲ್ಲಿ ತೊಡಗಿಸಿಕೊಂಡಿರುವ ಅರುಣ್ ಗೌಡ, ‘ಪುಟ್ಟಗೂಡಿನ ಪಟ್ಟದರಸಿ’ ಮಕ್ಕಳ ಚಲನಚಿತ್ರವನ್ನು ನಿರ್ದೇಶಿಸಿದ್ದಾರೆ. ಸಿನಿಮಾ ಕ್ಷೇತ್ರದ ಜೊತೆಗೆ ಪತ್ರಿಕೋದ್ಯಮದಲ್ಲಿಯೂ ಸಕ್ರಿಯರಾಗಿರುವ ಅವರು, ಸಕಲೇಶಪುರ ತಾಲ್ಲೂಕಿನ ಮೂಲಸೌಕರ್ಯಗಳಿಂದ ವಂಚಿತವಾದ ಗ್ರಾಮಗಳ ಸಮಸ್ಯೆಗಳು, ರೈತರು ಮತ್ತು ಕಾಫಿ ಬೆಳೆಗಾರರ ಸಂಕಷ್ಟಗಳು ಹಾಗೂ ಗ್ರಾಮೀಣ ಜನರ ಸಮಸ್ಯೆಗಳನ್ನು ವರದಿಗಳ ಮೂಲಕ ಸರ್ಕಾರ ಮತ್ತು ಅಧಿಕಾರಿಗಳ ಗಮನಕ್ಕೆ ತರುವಲ್ಲಿ ಪ್ರಾಮಾಣಿಕ ಪ್ರಯತ್ನ ನಡೆಸುತ್ತಿದ್ದಾರೆ.

ಬರವಣಿಗೆಯಲ್ಲಿಯೂ ಆಸಕ್ತಿ ಹೊಂದಿರುವ ಅವರು, ಗ್ರಾಮೀಣ ಭಾಗದ ಜನರ ಸಮಸ್ಯೆಗಳಿಗೆ ಧ್ವನಿಯಾಗುವುದರೊಂದಿಗೆ ಸಾಮಾಜಿಕ ಕಳಕಳಿಯ ಕಾರ್ಯಗಳಲ್ಲೂ ತೊಡಗಿಸಿಕೊಂಡಿದ್ದಾರೆ. ಸರ್ಕಾರಿ ಶಾಲೆಗಳ ಮಕ್ಕಳಿಗೆ ಪ್ರತಿವರ್ಷ ಉಚಿತವಾಗಿ ಕಲಿಕಾ ಸಾಮಗ್ರಿಗಳನ್ನು ವಿತರಿಸುವುದು, ಆರೋಗ್ಯ ಶಿಬಿರಗಳನ್ನು ಆಯೋಜಿಸುವುದು ಸೇರಿದಂತೆ ವಿವಿಧ ಸಮಾಜಮುಖಿ ಚಟುವಟಿಕೆಗಳ ಮೂಲಕ ಸಮಾಜಕ್ಕೆ ಕೊಡುಗೆ ನೀಡುತ್ತಿದ್ದಾರೆ. ಸಾಹಿತ್ಯ, ಮಾಧ್ಯಮ ಮತ್ತು ಸಿನಿಮಾ ಕ್ಷೇತ್ರಗಳಲ್ಲಿನ ಆಸಕ್ತಿ ಹಾಗೂ ಸಾಮಾಜಿಕ ಸೇವೆಯನ್ನು ಪರಿಗಣಿಸಿ ಅವರನ್ನು ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.

ಕಾರ್ಯಕ್ರಮದಲ್ಲಿ ರಾಯಚೂರು ವಿಶ್ವವಿದ್ಯಾಲಯದ ಕುಲಪತಿ ಡಾ. ಶಿವಾನಂದ ಕೆಳಗಿಮನಿ, ಸಮ್ಮೇಳನದ ಅಧ್ಯಕ್ಷೆ ಡಾ. ಎಚ್.ಕೆ. ಹಸೀನಾ, ಮಾಣಿಕ್ಯ ಸಾಹಿತ್ಯ ವೇದಿಕೆಯ ಸಂಸ್ಥಾಪಕ ಕೊಟ್ರೇಶ್ ಉಪ್ಪಾರ್,ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಮಾಜಿ ಗೌರವಾಧ್ಯಕ್ಷ ರವಿ ನಾಕಾಲಗೊಡು, ಮೈಸೂರಿನ ಸಾಹಿತಿ ಟಿ. ಸತೀಶ್ ಜವರೇಗೌಡ, ಪತ್ರಕರ್ತ ನಾಗರಾಜ್ ಹೆತ್ತೂರು, ಸಮಾಜಸೇವಕ ಗಣೇಶ್ ತಮಲ್ಲಾಪುರ , ನಾಗರಾಜ್ ದೊಡ್ಮನಿ, ಮಾಣಿಕ್ಯ ಪ್ರಕಾಶನದ ದೀಪ ಉಪ್ಪಾರ್ ಹಾಗೂ ಸಾಂಸ್ಕೃತಿಕ ಸಂಘಟಕ ಜಾವಗಲ್  ಪ್ರಸನ್ನ ಉಪಸ್ಥಿತರಿದ್ದರು.

Related posts

ಇಂದು ವಳಲ ಹಳ್ಳಿಯಲ್ಲಿ ನೂತನ ಮಳಿಗೆ ಆರಂಭ

Bimba Prakashana

ಬೇಲೂರುನಲ್ಲಿ ಪ್ರತಿಭಟನೆ

Bimba Prakashana

ಶಿರ್ಲಾಲು ಜೈನ್ ಮಿಲನ್ ಕಾರ್ಯಕ್ರಮ

Bimba Prakashana

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More