Blog

ಬೇಲೂರುನಲ್ಲಿ ಪ್ರತಿಭಟನೆ

“7 ಸಾವಿರ ಮತಗಳ ಗೆಲುವು ಮರೆಯಬೇಡಿ; ರೈತರ ಪರ ನಿಲ್ಲಿ” – ಶಾಸಕ ಎಚ್.ಕೆ. ಸುರೇಶ್‌ಗೆ ಬಳ್ಳೂರು ಸ್ವಾಮಿಗೌಡ ಎಚ್ಚರಿಕೆ

ಬೇಲೂರು: ರೈತ ವಿರೋಧಿ ನೀತಿಗಳನ್ನು ಸರ್ಕಾರ ಅನುಸರಿಸುತ್ತಿದೆ ಎಂದು ಆರೋಪಿಸಿ, ರೈತರ ವಿವಿಧ ಬೇಡಿಕೆಗಳನ್ನು ತಕ್ಷಣ ಈಡೇರಿಸುವಂತೆ ಒತ್ತಾಯಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ತಾಲ್ಲೂಕು ಘಟಕದ ವತಿಯಿಂದ ಸೋಮವಾರ ಭಾರೀ ಟ್ರ್ಯಾಕ್ಟರ್ ಜಾಥಾ ನಡೆಸಲಾಯಿತು. ಬಳಿಕ ತಾಲ್ಲೂಕು ಕಚೇರಿ ಎದುರು ಅನಿರ್ದಿಷ್ಟಾವಧಿ ಧರಣಿ ಆರಂಭಿಸಿ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಲಾಯಿತು.

ಪ್ರವಾಸಿ ಮಂದಿರದಿಂದ ಆರಂಭವಾದ ಜಾಥಾದಲ್ಲಿ ನೂರಾರು ರೈತರು ಟ್ರ್ಯಾಕ್ಟರ್‌ಗಳೊಂದಿಗೆ ಭಾಗವಹಿಸಿ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು. ಬೇಲೂರು ತಾಲ್ಲೂಕನ್ನು ಬರಪೀಡಿತ ಪ್ರದೇಶವೆಂದು ಘೋಷಿಸುವುದು, ಬಗರ್‌ಹುಕುಂ ಸಾಗುವಳಿದಾರರ ಪಹಣಿ ಹಾಗೂ ಹಕ್ಕು ದಾಖಲೆಗಳನ್ನು ವಜಾಗೊಳಿಸುವ ಕ್ರಮವನ್ನು ಹಿಂಪಡೆಯುವುದು ಸೇರಿದಂತೆ ಹಲವು ಬೇಡಿಕೆಗಳನ್ನು ಸರ್ಕಾರದ ಮುಂದಿಟ್ಟರು.

ರೈತ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಳ್ಳೂರು ಸ್ವಾಮಿಗೌಡ ಮಾತನಾಡಿ, ಎತ್ತಿನಹೊಳೆ ಯೋಜನೆಗೆ ಭೂಮಿ ನೀಡಿದ ರೈತರಿಗೆ ಸಮರ್ಪಕ ಪರಿಹಾರ ದೊರೆತಿಲ್ಲ ಎಂದು ಆರೋಪಿಸಿದರು. ಸೀಪೇಜ್ ನೀರನ್ನು ಬಳಸಿ ಕೃಷಿ ಮಾಡುತ್ತಿರುವ ರೈತರಿಗೆ ಕೃಷಿ ಮುಂದುವರಿಸಲು ಅವಕಾಶ ಕಲ್ಪಿಸಬೇಕು ಎಂದು ಆಗ್ರಹಿಸಿದರು. ಹಲವು ಬಾರಿ ಮನವಿ ಸಲ್ಲಿಸಿದರೂ ಸ್ಥಳೀಯ ಶಾಸಕರು ಹಾಗೂ ಸರ್ಕಾರ ರೈತರ ಸಮಸ್ಯೆಗಳಿಗೆ ಸ್ಪಂದಿಸುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

2024ರಲ್ಲಿ ನಡೆದ ಪ್ರತಿಭಟನೆ ವೇಳೆ ಬಗರ್‌ಹುಕುಂ ಸಮಸ್ಯೆ ಪರಿಹರಿಸುವ ಭರವಸೆ ನೀಡಲಾಗಿತ್ತು. ಆದರೆ ಇಂದಿಗೂ ಯಾವುದೇ ಸ್ಪಷ್ಟ ಕ್ರಮ ಕೈಗೊಳ್ಳದ ಕಾರಣ ರೈತರು ಸಂಕಷ್ಟದಲ್ಲೇ ಉಳಿದಿದ್ದಾರೆ ಎಂದು ಸ್ವಾಮಿಗೌಡ ಹೇಳಿದರು. ಜನರ ಸಮಸ್ಯೆಗಳಿಗಿಂತ ಅಕ್ರಮ ಚಟುವಟಿಕೆಗಳಿಗೆ ಬೆಂಬಲ ನೀಡುವ ರಾಜಕಾರಣ ಹೆಚ್ಚಾಗಿದೆ ಎಂದು ಅವರು ಟೀಕಿಸಿದರು.

ಕಾಫಿ ಬೆಳೆಗಾರರ ಸಂಘದ ತಾಲ್ಲೂಕು ಅಧ್ಯಕ್ಷ ವೈ.ಎಸ್. ಸಿದ್ದೇಗೌಡ ಮಾತನಾಡಿ, ಕಾಡಾನೆಗಳ ಉಪಟಳದಿಂದ ರೈತರು ಮತ್ತು ಕೃಷಿ ಕಾರ್ಮಿಕರು ಜೀವಭಯದಲ್ಲಿ ಕೆಲಸ ಮಾಡುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದರು. ಬೆಳೆ ನಷ್ಟಕ್ಕೆ ಪರಿಹಾರ ಪಡೆಯಲು ಅನಗತ್ಯ ದಾಖಲೆಗಳನ್ನು ಕೇಳುತ್ತಿರುವುದು ರೈತರ ಮೇಲಿನ ಹೆಚ್ಚುವರಿ ಹೊರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ರೈತ ಸಂಘದ ತಾಲ್ಲೂಕು ಅಧ್ಯಕ್ಷ ಭೋಗಮಲ್ಲೇಶ್ ಮಾತನಾಡಿ, ಬೇಲೂರು ತಾಲ್ಲೂಕನ್ನು ಬರಪೀಡಿತ ಪ್ರದೇಶವೆಂದು ಘೋಷಿಸಲು ಸರ್ಕಾರಕ್ಕೆ 15 ದಿನಗಳ ಗಡುವು ನೀಡಲಾಗಿದೆ. ಈ ಅವಧಿಯಲ್ಲೂ ಕ್ರಮ ಕೈಗೊಳ್ಳದಿದ್ದರೆ ಹೋರಾಟವನ್ನು ಮತ್ತಷ್ಟು ತೀವ್ರಗೊಳಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.

ಪ್ರತಿಭಟನೆ ಸ್ಥಳಕ್ಕೆ ಆಗಮಿಸಿದ ತಹಶೀಲ್ದಾರ್ ಶ್ರೀಧರ ಕಂಕನವಾಡಿ ರೈತರ ಮನವಿ ಸ್ವೀಕರಿಸಿ ಮಾತನಾಡಿ, ಬಗರ್‌ಹುಕುಂ ಪ್ರಕರಣಗಳ ಕುರಿತು ಸರ್ಕಾರ ರಚಿಸಿರುವ ಸಮಿತಿ ಪರಿಶೀಲನೆ ನಡೆಸುತ್ತಿದೆ. ನೈಜ ರೈತರಿಗೆ ಯಾವುದೇ ಅನ್ಯಾಯವಾಗದಂತೆ ಸರ್ಕಾರ ಸೂಕ್ತ ಕ್ರಮ ಕೈಗೊಳ್ಳಲಿದೆ ಎಂದು ಭರವಸೆ ನೀಡಿದರು.

ಈ ವೇಳೆ ಶಾಸಕ ಎಚ್.ಕೆ. ಸುರೇಶ್ ಅವರನ್ನು ಉದ್ದೇಶಿಸಿ ಮಾತನಾಡಿದ ಬಳ್ಳೂರು ಸ್ವಾಮಿಗೌಡ, “ಕೇವಲ 7 ಸಾವಿರ ಮತಗಳಿಂದ ಗೆದ್ದಿದ್ದೀರಿ. ಬಗರ್‌ಹುಕುಂ ರೈತರ ಕುಟುಂಬಗಳ ಸುಮಾರು 10 ಸಾವಿರ ಮತಗಳು ಮುಂದಿನ ದಿನಗಳಲ್ಲಿ ನಿಮ್ಮ ರಾಜಕೀಯ ಭವಿಷ್ಯವನ್ನು ನಿರ್ಧರಿಸಬಹುದು. ರೈತರ ಪರವಾಗಿ ನಿಲ್ಲಿ, ಜನಪರ ಕೆಲಸ ಮಾಡಿ” ಎಂದು ಎಚ್ಚರಿಕೆ ನೀಡಿದರು. “ಕಾರ್ಯಕ್ರಮಗಳಿಗೆ ಹೋಗಿ ಫೋಟೋ ತೆಗೆಸಿಕೊಳ್ಳುವುದಕ್ಕಿಂತ ರೈತರ ಹಾಗೂ ಜನರ ಸಮಸ್ಯೆಗಳನ್ನು ಆಲಿಸಿ ಪರಿಹರಿಸುವ ಕೆಲಸಕ್ಕೆ ಆದ್ಯತೆ ನೀಡಬೇಕು” ಎಂದು ಅವರು ಟೀಕಿಸಿದರು.

Related posts

4500 ಕ್ಕೂ ಮೇಲ್ಪಟ್ಟು ಪೊಲೀಸ್ ಹುದ್ದೆಗಳು

Bimba Prakashana

ಆಲೂರು ಗೆ ಚತುಷ್ಪತ ರಸ್ತೆ

Bimba Prakashana

ಟ್ಯಾಂಕ್ ಗೆ ಬಿದ್ದು ಬಾಲಕ ಮೃತ್ಯು

Bimba Prakashana

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More