Blog

ಗ್ರಾಮಭಿವೃದ್ಧಿ ಯೋಜನೆ ಬಡವರ ಬದುಕಿಗೆ ದಾರಿದೀಪ – ಶಾಸಕ ಸಿಮೆಂಟ್ ಮಂಜುನಾಥ್

ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಡವರ ಬದುಕಿಗೆ ದಾರಿದೀಪ: ಶಾಸಕ ಸಿಮೆಂಟ್ ಮಂಜು.

ಆಲೂರು: ಸರ್ಕಾರ ಹಾಗೂ ಜನಪ್ರತಿನಿಧಿಗಳು ಮಾಡಬೇಕಾದ ಜನಪರ ಕಾರ್ಯಗಳನ್ನು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಸಮಾಜಮುಖಿ ಸೇವೆಗಳ ಮೂಲಕ ಯಶಸ್ವಿಯಾಗಿ ನಿರ್ವಹಿಸುತ್ತಿದೆ. ಬಡವರು, ಮಹಿಳೆಯರು ಹಾಗೂ ಯುವಕರ ಬದುಕಿಗೆ ಆಸರೆಯಾಗಿರುವ ಯೋಜನೆಯ ಸೇವೆ ಶ್ಲಾಘನೀಯ ಎಂದು ಶಾಸಕ ಸಿಮೆಂಟ್ ಮಂಜು ಹೇಳಿದರು.

ಆಲೂರು ತಾಲೂಕಿನ ಕೆ. ಹೊಸಕೋಟೆ ಹೋಬಳಿಯ ಮಲ್ಲಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಾಡ್ಲರು ಕೂಡಿಗೆಯ ಈರಮ್ಮ ಅವರಿಗೆ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವತಿಯಿಂದ 1010.ನೇ ವಾಸ್ತಲ್ಯ ಮನೆಯ ಹಸ್ತಾಂತರ ಕಾರ್ಯಕ್ರಮದಲ್ಲಿ ಮಾತನಾಡಿದರು.

ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯು ಅನ್ನದಾಸೋಹದಿಂದ ಹಿಡಿದು ಮಹಿಳೆಯರ ಸ್ವಸಹಾಯ ಸಂಘಗಳಿಗೆ ಆರ್ಥಿಕ ನೆರವು ನೀಡುವುದು, ಯುವಕರಿಗೆ ಸ್ವಯಂ ಉದ್ಯೋಗ ಕಲ್ಪಿಸುವುದು, ಕೆರೆಗಳ ಅಭಿವೃದ್ಧಿ, ಸ್ಮಶಾನಗಳ ಸುಧಾರಣೆ, ದೇವಾಲಯಗಳ ಅಭಿವೃದ್ಧಿ ಹಾಗೂ ಮನೆ ನಿರ್ಮಿಸಿಕೊಡುವಂತಹ ಅನೇಕ ಪುಣ್ಯಕಾರ್ಯಗಳನ್ನು ನಿರಂತರವಾಗಿ ನಡೆಸಿಕೊಂಡು ಬರುತ್ತಿದೆ. ಈ ಯೋಜನೆಯಿಂದ ಸಾವಿರಾರು ಮಹಿಳೆಯರು ಸ್ವಾವಲಂಬಿ ಬದುಕು ಕಟ್ಟಿಕೊಂಡಿದ್ದು, ಅನೇಕ ಯುವಕರು ಸ್ವಯಂ ಉದ್ಯೋಗದ ಮೂಲಕ ಜೀವನ ರೂಪಿಸಿಕೊಳ್ಳುತ್ತಿದ್ದಾರೆ ಎಂದರು.

ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕಾರ್ಯಕ್ರಮಗಳಿಗೆ ಆಹ್ವಾನ ಬಂದಾಗ, ಎಷ್ಟೇ ಕಾರ್ಯದ ಒತ್ತಡವಿದ್ದರೂ ಭಾಗವಹಿಸಬೇಕು ಎಂಬ ಭಾವನೆ ನನ್ನದು. ಇಂದು ಅನೇಕ ಕಾರ್ಯಕ್ರಮಗಳ ನಡುವೆಯೂ ಇಲ್ಲಿಗೆ ಆಗಮಿಸಿದ್ದೇನೆ. ಧರ್ಮಸ್ಥಳದ ಸೇವಾಕಾರ್ಯಗಳ ಬಗ್ಗೆ ನನಗೆ ಅಪಾರ ಗೌರವವಿದೆ ಎಂದು ಹೇಳಿದರು.

ಈರಮ್ಮ ಅವರ ಸ್ಥಿತಿಯನ್ನು ಗಮನಿಸಿದಾಗ, ಅವರಿಗೆ ಒಂದು ಸುಂದರ ಮನೆಯ ಆಸರೆ ಕಲ್ಪಿಸಿರುವುದು ನಿಜಕ್ಕೂ ಸಂತಸದ ವಿಚಾರ. ಬಡವರ ಕಷ್ಟಕ್ಕೆ ಸ್ಪಂದಿಸಿ, ಅವರ ಬದುಕಿನಲ್ಲಿ ಭರವಸೆಯ ಬೆಳಕು ಮೂಡಿಸುವ ಇಂತಹ ಕಾರ್ಯಗಳು ಸಮಾಜಕ್ಕೆ ಮಾದರಿಯಾಗಿವೆ. ನನ್ನ ಕ್ಷೇತ್ರದಲ್ಲಿ ಈಗಾಗಲೇ ಸುಮಾರು ಆರುರಿಂದ ಎಂಟು ಮನೆಗಳನ್ನು ಹಸ್ತಾಂತರಿಸುವ ಮೂಲಕ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಡವರ ನೆರವಿಗೆ ನಿಂತಿದೆ ಎಂದರು.

ಸನ್ಮಾನ್ಯ ವೀರೇಂದ್ರ ಹೆಗ್ಗಡೆ ಹಾಗೂ ಹೇಮಾವತಿ ಹೆಗ್ಗಡೆ ಅವರ ಮಾರ್ಗದರ್ಶನದಲ್ಲಿ ನಡೆಯುತ್ತಿರುವ ಈ ಯೋಜನೆಯ ಸೇವೆಗಳು ರಾಜ್ಯದ ಅನೇಕ ಕುಟುಂಬಗಳಿಗೆ ಆಸರೆಯಾಗಿವೆ. ಇಂತಹ ಸಂಸ್ಥೆಗಳು ಇಲ್ಲದಿದ್ದರೆ ಮಹಿಳೆಯರು, ಯುವಕರು ಹಾಗೂ ಬಡವರು ಎದುರಿಸಬೇಕಾಗುವ ಸಂಕಷ್ಟಗಳನ್ನು ಊಹಿಸುವುದೂ ಕಷ್ಟ. ಸರ್ಕಾರ ಹಾಗೂ ಜನಪ್ರತಿನಿಧಿಗಳು ಕೈಗೊಳ್ಳಬೇಕಾದ ಅನೇಕ ಜನಪರ ಕಾರ್ಯಗಳನ್ನು ಈ ಸಂಸ್ಥೆ ತನ್ನ ಯೋಜನೆಗಳ ಮೂಲಕ ಮಾಡುತ್ತಿರುವುದು ಹೆಮ್ಮೆಯ ಸಂಗತಿ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಮುಂದಿನ ದಿನಗಳಲ್ಲಿಯೂ ಇನ್ನಷ್ಟು ಜನಪರ ಕಾರ್ಯಕ್ರಮಗಳು ನಡೆಯಲಿ. ಬಡವರು ಹಾಗೂ ನಿರ್ಗತಿಕರ ಬದುಕಿಗೆ ಹೆಚ್ಚಿನ ನೆರವು ದೊರೆಯಲಿ. ಈರಮ್ಮ ಅವರಿಗೆ ಮನೆ ಹಸ್ತಾಂತರಿಸುವ ಪುಣ್ಯಕಾರ್ಯದಲ್ಲಿ ಭಾಗವಹಿಸಲು ಅವಕಾಶ ದೊರೆತಿರುವುದು ಸಂತಸದ ಸಂಗತಿ ಎಂದು ಶಾಸಕ ಸಿಮೆಂಟ್ ಮಂಜು ತಿಳಿಸಿದರು.

ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜ್ಞಾನ ವಿಕಾಸ ನಿರ್ದೇಶಕ ದಿನೇಶ್ ಪೂಜಾರಿ ಮಾತನಾಡಿ,ಸಮಾಜದ ಅಸಹಾಯಕರು, ವಯೋವೃದ್ಧರು ಹಾಗೂ ಆರ್ಥಿಕವಾಗಿ ಹಿಂದುಳಿದವರಿಗೆ ನೆರವು ನೀಡುವ ಮೂಲಕ ಗೌರವಯುತ ಬದುಕು ಕಲ್ಪಿಸುವುದು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮುಖ್ಯ ಉದ್ದೇಶವಾಗಿದೆ.

ಈರಮ್ಮ ಅವರ ಮನೆ ನಿರ್ಮಾಣ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯು ಕಳೆದ 44 ವರ್ಷಗಳಿಂದ ರಾಜ್ಯಾದ್ಯಂತ ಗ್ರಾಮೀಣ ಅಭಿವೃದ್ಧಿ, ಮಹಿಳಾ ಸಬಲೀಕರಣ ಹಾಗೂ ಸ್ವಸಹಾಯ ಸಂಘಗಳ ಮೂಲಕ ಜನರ ಆರ್ಥಿಕ ಪ್ರಗತಿಗೆ ಶ್ರಮಿಸುತ್ತಿದೆ ಎಂದರು.

ಜ್ಞಾನವಿಕಾಸ ಕಾರ್ಯಕ್ರಮದ ಮೂಲಕ ಮಹಿಳೆಯರಲ್ಲಿ ಆತ್ಮವಿಶ್ವಾಸ, ಸ್ವಾವಲಂಬನೆ ಹಾಗೂ ಆರೋಗ್ಯ, ಶಿಕ್ಷಣ ಮತ್ತು ಉಳಿತಾಯದ ಕುರಿತು ಅರಿವು ಮೂಡಿಸಲಾಗುತ್ತಿದೆ. ವಾತ್ಸಲ್ಯ ಕಾರ್ಯಕ್ರಮದಡಿ ಅಸಹಾಯಕರಿಗೆ ಮಾಸಿಕ ಆರ್ಥಿಕ ನೆರವು, ಆಹಾರ, ವಸತಿ ಹಾಗೂ ಅವರ ಮಕ್ಕಳ ಶಿಕ್ಷಣಕ್ಕೆ ಸಹಾಯ ನೀಡಲಾಗುತ್ತಿದೆ ಎಂದು ತಿಳಿಸಿದರು.

ಈಗಾಗಲೇ ಒಂದು ಸಾವಿರಕ್ಕೂ ಹೆಚ್ಚು ಮನೆಗಳನ್ನು ನಿರ್ಮಿಸಿಕೊಡಲಾಗಿದ್ದು, ಈ ವರ್ಷವೂ 250ಕ್ಕೂ ಹೆಚ್ಚು ಮನೆಗಳನ್ನು ನಿರ್ಮಿಸುವ ಗುರಿ ಹೊಂದಲಾಗಿದೆ. ಏಕಾಂಗಿಯಾಗಿ ಬದುಕುತ್ತಿರುವ ಈರಮ್ಮ ಅವರಿಗೆ ಮನೆ ನಿರ್ಮಿಸಿಕೊಡುವ ಮೂಲಕ ಗೌರವಯುತ ಜೀವನಕ್ಕೆ ನೆರವು ನೀಡಲಾಗಿದೆ ಎಂದರು.

ಧರ್ಮ ಯಾವುದೇ ಇರಲಿ, ಮಾನವೀಯತೆ ಮತ್ತು ಪರಸ್ಪರ ಸಹಕಾರವೇ ನಿಜವಾದ ಧರ್ಮ. ಅಸಹಾಯಕರ ಕಣ್ಣೀರು ಒರೆಸಿ, ಅವರ ಬದುಕಿನಲ್ಲಿ ಭರವಸೆ ಮೂಡಿಸುವುದೇ ನಿಜವಾದ ಸೇವೆ ಎಂದು ದ ಹೇಳಿದರು.

ಈ ಸಂಧರ್ಭದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜ್ಞಾನ ವಿಕಾಸ ನಿರ್ದೇಶಕ ದಿನೇಶ್ ಪೂಜಾರಿ, ಯೋಜನಾಧಿಕಾರಿ ಮಲ್ಲಿಕಾ, ಮೂಕಾಂಬಿಕಾ, ರಾಜೇಶ್ ಎಂ, ಜ್ಞಾನವಿಕಾಸ ಸಮನ್ವಯಾಧಿಕಾರಿ ಮಂಜುಳಾ,ಜಿಲ್ಲಾ ಜನಜಾಗೃತಿ ವೇದಿಕೆ ಹಾಸನ ನಿಕಟಪೂರ್ವ ಅಧ್ಯಕ್ಷರಾದ ಡಾ ನವೀನ್ ಚಂದ್ರ ಶೆಟ್ಟಿ, ಸದಸ್ಯರಾದ ಗಿರೀಶ್ ಮಂಜುನಾಥ್, ಉಮಾನಾಥ ಸುವರ್ಣ ಸೇರಿದಂತೆ ಗ್ರಾಮಸ್ಥರು ಉಪಸ್ಥಿತರಿದ್ದರು.

Related posts

ಆಧುನಿಕ ಕಾಲದಲ್ಲಿ ಕೂಡಾ ಬಹಿಷ್ಕಾರ ಪದ್ಧತಿ ಜೀವಂತ

Bimba Prakashana

ರಸ್ತೆ ಗುಂಡಿ ಮುಚ್ಚಿದ ಸ್ಥಳೀಯ ಗ್ರಾಮಸ್ಥರು

Bimba Prakashana

ಬೇಲೂರುನಲ್ಲಿ ಗೋವುಗಳನ್ನ ರಕ್ಷಣೆ ಮಾಡಿದ ವಿ ಹಿಂ ಪ ಭಜರಂಗ ದಳ

Bimba Prakashana

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More