ಹೈನುಗಾರಿಕೆಯಿಂದ ಮಹಿಳೆಯರಿಗೆ ಸ್ವಾವಲಂಬನೆಯ ಬದುಕು – ಶಾಸಕ ಸಿಮೆಂಟ್ ಮಂಜುನಾಥ್.
ಸಕಲೇಶಪುರ:- ಹೈನುಗಾರಿಕೆ ಗ್ರಾಮೀಣ ಮಹಿಳೆಯರ ಸ್ವಾವಲಂಬನೆಯ ಬದುಕು ಕಟ್ಟಿಕೊಡುವುದಲ್ಲದೆ ಆರ್ಥಿಕ ಮನ್ನುಡಿಗೆ ಸಹಕಾರಿಯಾಗಲಿದೆ.ರೈತ ಎಂದು ಕೂಡ ಮೋಸ ಮಾಡುವುದಿಲ್ಲ ಆದರೆ ರೈತನಿಗೆ ಮೋಸ ಮಾಡಲೆಂದೆ ಕೆಲವು ನಕಲಿ ಕಂಪನಿಗಳು ಹುಟ್ಟಿಕೊಂಡಿವೆ. ಇದರ ಬಗ್ಗೆ ರೈತರು ಎಚ್ಚರದಲ್ಲಿರಬೇಕು ಎಂದು ಶಾಸಕ ಸಿಮೆಂಟ್ ಮಂಜುನಾಥ್ ಹೇಳಿದರು.
ತಾಲ್ಲೂಕಿನ ಹೆತ್ತೂರು ಹೋಬಳಿಯ ವಳಲಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕರಡಿಗಾಲ ಗ್ರಾಮದ ಆಟದ ಮೈದಾನದಲ್ಲಿ ಪಶುಪಾಲನಾ ಮತ್ತು ಪಶು ವೈದ್ಯಕಿಯ ಸೇವಾ ಇಲಾಖೆ ವತಿಯಿಂದ ಏರ್ಪಡಿಸಿದ್ದ ಪಶುಗಳ ಚರ್ಮರೋಗ,ಗಂಟು ರೋಗ ಹಾಗೂ ಹಾಲು ಕರೆಯುವ ಸ್ಪರ್ಧೆ ಕಾರ್ಯಕ್ರಮ ಏರ್ಪಡಿಸಲಾಗಿತ್ತು.
ಕಾರ್ಯಕ್ರಮವನ್ನು ಶಾಸಕರಾದ ಸಿಮೆಂಟ್ ಮಂಜುನಾಥ್ ಅವರು ಗೋ ಪೂಜೆ ಮಾಡುವುದರ ಮೂಲಕ ಕಾರ್ಯಕ್ರಮವನ್ನು ಉದ್ಘಾಟನೆ ಮಾಡಿ ಮಾತನಡಿದರು ” ಬೆಳಗ್ಗೆ ಎದ್ದು ದೇವರ ಪೂಜೆ ಮಾಡುವುದರೊಂದಿಗೆ ಗೋವುಗಳಿಗೂ ನಮಸ್ಕಾರ ಮಾಡಿ ನಮ್ಮ ದೈನಂದಿನ ಕೆಲಸಗಳನ್ನು ಶುರು ಮಾಡುತ್ತೇವೆ. ಅಷ್ಟರಮಟ್ಟಿಗೆ ನಾವು ಗೋವುಗಳಿಗೆ ಪೂಜನೆಯ ಸ್ಥಾನವನ್ನು ಕೊಟ್ಟಿದ್ದೇವೆ. ಈ ದೇಶದ ಬೆನ್ನೆಲುಬು ರೈತ ಎನ್ನುವುದು ಎಷ್ಟು ಸತ್ಯವೋ ಹಸುಗಳು ಸಹ ರೈತನ ಜೀವನಾಡಿ ಎಂಬುಂದನ್ನು ಮರೆಯುವಂತಿಲ್ಲ. ಪಶುಗಳು ಇಲ್ಲವಾದರೆ ಕೃಷಿಕರ ಶಕ್ತಿಯೇ ಅಡಗಿ ಹೋಗುತ್ತದೆ. ಹಾಗಾಗಿ ಪಶುಗಳ ಆರೋಗ್ಯದತ್ತ ನಿರ್ಲಕ್ಷ್ಯ ವಹಿಸಿದೇ ತಪಾಸಣೆ ಮಾಡಿಸಿಕೊಂಡು ರೋಗಗಳು ತಟ್ಟದಂತೆ ಜಾಗೃತಿ ವಹಿಸಬೇಕು. ಇದರಿಂದ ಹೈನೋದ್ಯಮ ಬೆಳೆವಣಿಗೆ ಕಾಣುವುದಲ್ಲದೇ ರೈತರು ಆರ್ಥಿಕವಾಗಿ ಉನ್ನತಿ ಹೊಂದಲು ಸಾಧ್ಯವಾಗುತ್ತದೆ ಎಂದರು.
ಕೇವಲ ಹಸುಗಳನ್ನು ಹಾಲು ಕರೆಯುವುದಕ್ಕೆ ಮಾತ್ರ ಬಳಸಿಕೊಂಡು ಅವುಗಳನ್ನು ರಾತ್ರಿಯ ಸಮಯದಲ್ಲಿ ಬಿಟ್ಟು ಓಡಿಸಬಾರದು ಇದರಿಂದ ಅನಾಹುತಗಳಾಗಿ ಪಶುಗಳು ಸಾವನ್ನಪ್ಪಿರುತ್ತವೆ. ಅಲ್ಲದೆ ಕೆಲವು ದಲ್ಲಾಳಿಗಳು ಉತ್ತಮ ಸ್ಥಳೀಯ ಹಸುಗಳು ಎಂದು ನಂಬಿಸಿ ಅಧಿಕ ಹಣಕ್ಕೆ ಸರಿಯಾದ ಹಸುಗಳನ್ನು ಕೊಡದೆ ರೈತರಿಗೆ ಮೋಸ ಮಾಡುತ್ತಿದ್ದಾರೆ ಇದರಿಂದ ರೈತರು ಜಾಗೃತರಾಗಬೇಕು.ಹಾಗೂ ಪಶುಗಳ ಆರೋಗ್ಯದ ಕಡೆಗೆ ವೈದ್ಯರಲ್ಲದೇ ರೈತರೂ ಸಹ ಹೆಚ್ಚಿನ ಗಮನ ಹರಿಸುವುದು ಒಳಿತು ಎಂದು ಸಲಹೆ ನೀಡಿದರು.
ತಾಲ್ಲೂಕು ಪಶುವೈದ್ಯಕೀಯ ಸೇವಾ ಇಲಾಖೆ ಸಹಾಯಕ ಅಧಿಕಾರಿಗಳಾದ ವೆಂಕಟೇಶ್ ಮಾತನಾಡಿ ಜಾನುವಾರುಗಳಿಗೆ ಕಾಲಕಾಲಕ್ಕೆ ತಕ್ಕಂತೆ ಲಸಿಕೆಗಳನ್ನು ಕೊಡಿಸಬೇಕು. ರಾಸುಗಳು ಅಕಾಲಿಕ ಮೃತಪಟ್ಟರೆ ಸರ್ಕಾರದಿಂದ ಸಿಗುವ ಪರಿಹಾರವನ್ನು ರೈತರು ಪಡೆದುಕೊಳ್ಳಬೇಕು ಎಂದು ರೈತರಿಗೆ ಇಲಾಖೆಯಿಂದ ದೊರಕುವ ಸೌಲಭ್ಯ ಗಳ ಕುರಿತು ಮಾಹಿತಿ ನೀಡಿದರು.
ತಾಲೂಕು ಪಂಚಾಯಿತಿ ಮಾಜಿ ಉಪಾಧ್ಯಕ್ಷರಾದ ಕೆ.ಪಿ. ಕೃಷ್ಣೇಗೌಡ ಮಾತನಾಡಿ ಮಲೆನಾಡು ಭಾಗದಲ್ಲಿ ಹೈನುಗಾರಿಕೆ ಮಾಡುವುದು ತುಂಬಾ ಕಷ್ಟದ ಕೆಲಸ. ಆದರೆ ಇಲಾಖೆಯಿಂದ ಸಿಗುವ ಸೌಲಭ್ಯಗಳನ್ನು ರೈತರಿಗೆ ನೇರವಾಗಿ ಮುಟ್ಟಿಸುವ ಕೆಲಸವನ್ನು ಸಹಾಯಕ ನಿರ್ದೇಶಕರಾದ ವೆಂಕಟೇಶ್ ಅವರು ಪ್ರಾಮಾಣಿಕವಾಗಿ ಮಾಡುತ್ತಾ ಗ್ರಾಮದಲ್ಲಿ ಕೆ.ಎಸ್. ಶಿವಣ್ಣನವರ ಮಾರ್ಗದರ್ಶನದಲ್ಲಿ ರೈತರು ಹೈನುಗಾರಿಕೆಗೆ ಒತ್ತುಕೊಟ್ಟು ಆರ್ಥಿಕ ಸ್ವಾವಲಂಬನೆ ಜೀವನ ನಡೆಸುವಂತಾಗಿದೆ.
ಕಡಿಗಾಲ ಗ್ರಾಮದ ಸದಸ್ಯರಾದ ಆನಂದ್ ಮಾತನಾಡಿ ಈ ತರಹದ ಕಾರ್ಯಕ್ರಮಗಳನ್ನು ಮಾಡುವ ಮೂಲಕ ಹೈನುಗಾರಿಕೆಗೆ ಇನ್ನೂ ಹೆಚ್ಚು ಒತ್ತು ಸಿಕ್ಕಂತಾಗುತ್ತದೆ. ಪ್ರತಿಯೊಬ್ಬರ ಮನೆಯಲ್ಲೂ ಎರಡು ಹಸುಗಳನ್ನು ಸಾಕುವುದರೊಂದಿಗೆ ತಮ್ಮ ಮನೆಯಲ್ಲೇ ಹಾಲು ಉಪಯೋಗಿಸಿ ಹಾಗೂ ಡೈರಿಗೆ ಹಾಲನ್ನು ಹಾಕುವುದರ ಜೊತೆಗೆ ಡೈರಿಯನ್ನು ಉಳಿಸಿಕೊಳ್ಳಬಹುದು ಎಂದು ಕರೆನೀಡಿದರು.ಇದೇ ಸಂದರ್ಭದಲ್ಲಿ ಅತಿ ಹೆಚ್ಚು ಹಾಲು ಕರೆದವರಿಗೆ ಹಾಲಿನ ಕ್ಯಾನ್ ಗಳನ್ನು ವಿತರಿಸಿದರು.
ಈ ಸಂಧರ್ಭದಲ್ಲಿ ವೇದಿಕೆಯಲ್ಲಿ ಕರಡಿಗಾಲ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷೆ ಭಾಗ್ಯಲಕ್ಷ್ಮಿ, ಸಂಘದ ಕಾರ್ಯದರ್ಶಿ ಶಿವಣ್ಣ, ಗ್ರಾ.ಪಂ. ಸದಸ್ಯರಾದ ಸುದರ್ಶನ್, ಸೇರಿದಂತೆ ಪಶು ಇಲಾಖೆ ವೈದ್ಯರು ಗ್ರಾಮಸ್ಥರು ಉಪಸ್ಥಿತರಿದ್ದರು.


