🔴ಸಾರ್ವಜನಿಕ ಹಣ ದುರ್ಬಳಕೆ ಆರೋಪ: ಕ್ರಮ ವಿಳಂಬಕ್ಕೆ ಆಕ್ರೋಶ – ಬೆಳಗ್ಗಿನಿಂದಲೇ ಕರವೇ ಧರಣಿ ಕುಳಿತ ಕಾರ್ಯಕರ್ತರು
🔴ಬಾಗೆ ಪಿಡಿಓ ಅಮಾನತ್ತಿಗೆ ಆಗ್ರಹಿಸಿ ಕರವೇ ಅನಿರ್ದಿಷ್ಟಾವಧಿ ಮುಷ್ಕರ – ಬೆಳಗ್ಗಿನಿಂದಲೇ ತಾಲ್ಲೂಕು ಪಂಚಾಯಿತಿ ಮುಂದೆ ಧರಣಿ.
ಸಕಲೇಶಪುರ: ತಾಲ್ಲೂಕಿನ ಬಾಗೆ ಗ್ರಾಮ ಪಂಚಾಯಿತಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಪಂಚಾಯತ್ ಅಭಿವೃದ್ಧಿ ಅಧಿಕಾರಿ (ಪಿಡಿಓ) ಚಿನ್ನಸ್ವಾಮಿ ಅವರ ವಿರುದ್ಧ ಕೇಳಿಬಂದಿರುವ ಭ್ರಷ್ಟಾಚಾರದ ಗಂಭೀರ ಆರೋಪಗಳ ಹಿನ್ನೆಲೆಯಲ್ಲಿ ತಕ್ಷಣವೇ ಸೇವೆಯಿಂದ ಅಮಾನತ್ತು ಮಾಡಿ ಪಾರದರ್ಶಕ ಹಾಗೂ ನ್ಯಾಯಸಮ್ಮತ ತನಿಖೆ ನಡೆಸಬೇಕು ಎಂದು ಆಗ್ರಹಿಸಿ ಕರ್ನಾಟಕ ರಕ್ಷಣಾ ವೇದಿಕೆ ಸಕಲೇಶಪುರ ಘಟಕದ ಕಾರ್ಯಕರ್ತರು ಇಂದು ಬೆಳಗ್ಗಿನಿಂದಲೇ ತಾಲ್ಲೂಕು ಪಂಚಾಯಿತಿ ಕಚೇರಿ ಮುಂಭಾಗ ಅನಿರ್ದಿಷ್ಟಾವಧಿ ಪ್ರತಿಭಟನೆಗೆ ಚಾಲನೆ ನೀಡಿದ್ದಾರೆ.
ಕರ್ನಾಟಕ ರಕ್ಷಣಾ ವೇದಿಕೆ (ನಾರಾಯಣಗೌಡ ಬಣ) ನೇತೃತ್ವದಲ್ಲಿ ಆರಂಭವಾದ ಈ ಮುಷ್ಕರದಲ್ಲಿ ಸಾರ್ವಜನಿಕ ಹಣದ ದುರ್ಬಳಕೆ ಆರೋಪಗಳಿದ್ದರೂ ಸಂಬಂಧಿತ ಅಧಿಕಾರಿಗಳ ನಿರ್ಲಕ್ಷ್ಯ ಧೋರಣೆ ವಿರುದ್ಧ ಕಾರ್ಯಕರ್ತರು ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಬೆಳಗ್ಗಿನಿಂದಲೇ ಧರಣಿ ಕುಳಿತಿದ್ದರೂ ಇದುವರೆಗೂ ಯಾವುದೇ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪ್ರತಿಭಟನಾಕಾರರ ಸಮಸ್ಯೆ ಆಲಿಸದಿರುವುದು ಜನರಲ್ಲಿ ಅಸಮಾಧಾನ ಹೆಚ್ಚುವಂತೆ ಮಾಡಿದೆ ಎಂದು ವೇದಿಕೆ ಮುಖಂಡರು ಆರೋಪಿಸಿದರು.
ಈ ಕುರಿತು ಮಾತನಾಡಿದ ತಾಲೂಕು ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ಗಗನ್ ಹಾಡ್ಲಹಳ್ಳಿ, “ಸಾರ್ವಜನಿಕ ಹಣದ ದುರ್ಬಳಕೆಯಂತಹ ಗಂಭೀರ ಆರೋಪಗಳಿರುವ ಸಂದರ್ಭದಲ್ಲಿ ಸಂಬಂಧಿತ ಅಧಿಕಾರಿಯನ್ನು ತಕ್ಷಣವೇ ಅಮಾನತ್ತು ಮಾಡಿ ಪಾರದರ್ಶಕ ತನಿಖೆ ನಡೆಸಬೇಕು. ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಕೂಡಲೇ ಸ್ಥಳಕ್ಕೆ ಬಂದು ಸಮಸ್ಯೆಯನ್ನು ಆಲಿಸಬೇಕು. ಅದುವರೆಗೆ ನಮ್ಮ ಹೋರಾಟ ಮುಂದುವರಿಯಲಿದೆ. ಅಗತ್ಯವಿದ್ದರೆ ಹೋರಾಟವನ್ನು ಇನ್ನಷ್ಟು ತೀವ್ರಗೊಳಿಸುತ್ತೇವೆ” ಎಂದು ಎಚ್ಚರಿಸಿದರು.
ಪ್ರತಿಭಟನೆಯಲ್ಲಿ ಹಾಸನ ಜಿಲ್ಲಾ ಕರ್ನಾಟಕ ರಕ್ಷಣಾ ವೇದಿಕೆ ಪ್ರಧಾನ ಕಾರ್ಯದರ್ಶಿ ರಘು ಪಾಳ್ಯ, ಘಟಕದ ಉಪಾಧ್ಯಕ್ಷ ಸುನಿಲ್, ಪ್ರಧಾನ ಕಾರ್ಯದರ್ಶಿ ಜೈಕುಮಾರ್, ರೈತ ಘಟಕದ ಅಧ್ಯಕ್ಷ ವಸಂತ್ ಬೊಮ್ಮನಕೆರೆ, ಬೆಳಗೋಡು ಹೋಬಳಿ ಅಧ್ಯಕ್ಷ ಮಂಜುನಾಥ್ ಸೇರಿದಂತೆ ಹೆಚ್ಚಿನಸಂಖ್ಯೆಯಲ್ಲಿ ಕಾರ್ಯಕರ್ತರು ಭಾಗವಹಿಸಿದ್ದಾರೆ .

