Blog

ಅಕ್ರಮ ಮದ್ಯ ಮಾರಾಟಕ್ಕೆ ಕಡಿವಾಣ ಹಾಕಿ

ಅಕ್ರಮ ಮದ್ಯ ಮಾರಾಟಕ್ಕೆ ಕಡಿವಾಣ ಹಾಕುವಂತೆ ಗ್ರಾಮಸ್ಥರಿಂದ ಹಾಗೂ
ಅಬಕಾರಿ ಅಧಿಕಾರಿಗಳ ಸಭೆ.

ಬೇಲೂರು:
ತಾಲ್ಲೂಕಿನ ಕುಶಾವರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳಲ್ಲಿನ ಹಲವು ಅಂಗಡಿಗಳಲ್ಲಿ ಮದ್ಯವನ್ನು ಅಕ್ರಮವಾಗಿ ಮಾರಾಟ ಮಾಡುತ್ತಿರುವುದನ್ನು ತಡೆಯುವಂತೆ ಅಬಕಾರಿ ಅಧಿಕಾರಿಗಳಿಗೆ ಮನವರಿಕೆ ಮಾಡಿಕೊಡುವ ಸಲುವಾಗಿ ಗ್ರಾಮದ ಪ್ರಮುಖರು ಅಬಕಾರಿ ಅಧಿಕಾರಿಗಳು ಹಾಗೂ ಗ್ರಾಮಸ್ಥರು ಸಭೆ ನಡೆಸಿದರು.
ಸಭೆಯಲ್ಲಿ ಮಾತನಾಡಿದ ಗ್ರಾಮದ ಮುಖಂಡರು ಪಂಚಾಯಿತಿ ವ್ಯಾಪ್ತಿಯ ಹಲವು ಗ್ರಾಮಗಳಲ್ಲಿ ರಾಜಾರೋಷವಾಗಿ ಮದ್ಯವನ್ನು ಮಾರಾಟ ಮಾಡಲಾಗುತ್ತಿದೆ. ಕೇಳಿದರೆ  ಅಧಿಕಾರಿಗಳಿಗೆ ಮಾಮೂಲಿ ಕೊಟ್ಟು ಮಾರಾಟ ಮಾಡುತ್ತಿದ್ದೇವೆ ಎನ್ನುತ್ತಾರೆ. ಮಾರುತಿ ವ್ಯಾನ್ ಒಂದರಲ್ಲಿ ಮದ್ಯವನ್ನು ಭರ್ತಿ ತುಂಬಿಕೊಂಡು ಬಂದು ಮನೆಗಳಿಗೆ ಅಂಗಡಿ ಬಳಿ ಇಳಿಸಿ ಹೋಗುತ್ತಾರೆ. ಅಬಕಾರಿ ಅಧಿಕಾರಿಗಳು ತಿಂಗಳಿಗೆ ಒಮ್ಮೆ ಜೀಪಿನಲ್ಲಿ ಬಂದು ಗ್ರಾಮದೊಳಕ್ಕೆ ಬಾರದೆ ಹೊರಭಾಗದಲ್ಲಿ ಇದ್ದುಕೊಂಡು ಬೀಟ್ ಪುಸ್ತಕಕ್ಕೆ ಸಹಿ ಹಾಕಿ ಹೋಗುತ್ತಾರೆ, ವಿಶೇಷ ಎಂದರೆ ಯಾರು ಮದ್ಯ ಅಕ್ರಮವಾಗಿ ಮಾರಾಟ ಮಾಡುತ್ತಾರೋ ಅಂತಹವರ ಬಳಿಯೇ ಬೀಟ್ ಪುಸ್ತಕ ಕೊಟ್ಟಿದ್ದಾರೆ. ಬೇಲೂರಿನ ಮದ್ಯದಂಗಡಿಯಿಂದಲೇ ವಾಹನದಲ್ಲಿ ತಂದು ಮಾರಾಟ ಮಾಡುತ್ತಿದ್ದಾರೆ. ಇಲ್ಲಿ ಹೆಚ್ಚಿನ ಬೆಲೆಗೆ ಮಾರುತ್ತಾರೆ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು.
ಮದ್ಯ ಅತಿಯಾಗಿ ಕುಡಿದು ಮನೆಯಲ್ಲಿ ಗಲಾಟೆ ಮಾಡುವುದು, ಕೆಟ್ಟ ಪದ ಉಪಯೋಗಿಸಿ ಬೈಯ್ಯುತ್ತಾರೆ ಈ ರೀತಿಯಾದರೆ ಅವರ ಭವಿಷ್ಯ ಏನಾಗುತ್ತದೆ. ಹೊಡೆಯುವುದು, ಮಕ್ಕಳು ಓದಲು ಅವಕಾಶ ಇಲ್ಲದಂತೆ ಕೂಗಾಡುವುದು ಮಾಡಲಾಗುತ್ತಿದೆ, ಮದ್ಯ ಕುಡಿದು ಸತ್ತರೆ ಪರಿಹಾರ ಕೊಡುತ್ತೀರಾ..ಎಂದು ಮಹಿಳೆಯರೊಬ್ಬರು ಅಬಕಾರಿ ಮಹಿಳಾ ಅಧಿಕಾರಿ ಪ್ರಮಿಳಾ ಅವರನ್ನು ಪ್ರಶ್ನಿಸಿದರು. ಮದ್ಯ ಕುಡಿದು ಕಳೆದ 6 ತಿಂಗಳಲ್ಲಿ 3 ಜನ ಯುವಕರು ಸಾವನ್ನಪ್ಪಿದ್ದಾರೆ. ಮುಂದೆ ಯಾರಾದರು ಸತ್ತರೆ ಅಬಕಾರಿ ಕಚೇರಿ ಮುಂದೆ ಶವ ಇಟ್ಟುಕೊಂಡು ಪ್ರತಿಭಟನೆ ಮಾಡುತ್ತೇವೆ. ಮನೆಯಲ್ಲಿ ಮಹಿಳೆಯರು ಮಹಿಳಾ ಸಂಘದಿಂದ ಸಾಲವಾಗಿ ತಂದಂತ ಹಣ ವಾಪಸ್ ಕಟ್ಟಲಾಗದ ಸ್ಥಿತಿಗೆ ಬಂದಿದ್ದಾರೆ. ಮಹಿಳೆಯರು ದುಡಿದು ತರುವ ಹಣವನ್ನು ಗಂಡಸರಿಗೆ ಕುಡಿಯಲು ಕೊಡಬೇಕಿದ್ದು ಹಣ ಕೊಡದಿದ್ದರೆ ಹಲ್ಲೆ ನಡೆಸುವುದು ಮಾಮೂಲಾಗಿದೆ ಎಂದು ಕೆಲವರು ದೂರಿದರು.
ಯಾರಾರ ಅಂಗಡಿಯಲ್ಲಿ ಮದ್ಯ ಮಾರಾಟ ಮಾಡಲಾಗುತ್ತಿದೆ ಎಂಬುದು ಅಧಿಕಾರಿ, ನೌಕರರಿಗೆ ತಿಳಿದಿರುತ್ತದೆ, ನಮ್ಮಿಂದ ಹೇಳಿಸಿ ನಿಷ್ಟೂರ ಮಾಡುವ ಅಗತ್ಯವಿಲ್ಲ. ಸರಕಾರಕ್ಕೆ ಆದಾಯ ಬರಬೇಕೆಂದು ಬಲವಂತದಿಂದ ಮದ್ಯ ಕುಡಿಸುವುದು ಎಂದರೆ ಏನರ್ಥ, ಮದ್ಯವನ್ನು ವಾಹನದಲ್ಲಿ ವಾರಕ್ಕೆ ೪ ಸಾರಿ ರಾಜಾರೋಷವಾಗಿ ತರುತ್ತಾರೆಂದರೆ ಏಕೆ ಹಿಡಿಯುತ್ತಿಲ್ಲ ಎಂದು ಪ್ರಶ್ನಿಸಿದರು. ಬೆಳಿಗ್ಗೆ 5 ಗಂಟೆಯಿಂದಲೇ ಮದ್ಯ ಸೇವನೆ ಆರಂಭವಾಗುತ್ತದೆ, ಮದ್ಯ ಕುಡಿಯಲಿಕ್ಕೆ ಕೊಟ್ಟು ಕೆಲಸ ಮಾಡಿಸಿಕೊಳ್ಳುವುದು ನಡೆಯುತ್ತಿದೆ. ಸರಿಯಾದ ಕೇಸು ಹಾಕಲಾಗುತ್ತಿಲ್ಲ. ಚೌಡನಹಳ್ಳಿ ಗ್ರಾಮದ 10 ಮನೆಯಲ್ಲಿ ಮದ್ಯ ಮಾರಾಟ ಮಾಡುತ್ತಿದ್ದಾರೆಂದು ಮಾಹಿತಿ ನೀಡಿದರು.


ಅಬಕಾರಿ ಅಧೀಕ್ಷಕ ಪರಮೇಶ್ವರಪ್ಪ ಮಾತನಾಡಿ, ನೀವು ಹೇಳುತ್ತಿರುವುದು ರಾಜ್ಯದ ಸಮಸ್ಯೆ. ಸೂಕ್ಷ್ಮವಾಗಿ ನಮಗೆ ಬಂದು ಮಾಹಿತಿ ನೀಡಿ. ನೀವು ಮದ್ಯದ ವಾಹನ ಬಂದಿರುವ, ಅಂಗಡಿಯಲ್ಲಿ ಮಾರಾಟ ಮಾಡುವ ಬಗ್ಗೆ ವಿಚಾರವನ್ನು ಗೌಪ್ಯವಾಗಿ ಇಡಲಾಗುವುದು. ಬೇಲೂರಿನ ನಮ್ಮ ಕಚೇರಿಗೆ ಹೋಗಿ ಅಲ್ಲಿ ವಿಷಯ ತಿಳಿಸಿಬನ್ನಿ ಖಂಡಿತ ಸ್ಪಂಧಿಸುತ್ತೇವೆ ಎಂದರು. ಅಬಕಾರಿ ಸಹಾಯಕ ಅಧೀಕ್ಷಕ ರಘು ಮಾತನಾಡಿ, ಗ್ರಾಮದ ಬಗ್ಗೆ ಕಾಳಜಿ ಇಟ್ಟು ದೂರು ಹೇಳುತ್ತಿರುವುದು ಸಂತೋಷದ ವಿಷಯ, ನಿಮ್ಮ ಧೈರ್ಯಕ್ಕೆ ಮೆಚ್ಚುಬೇಕು. ನಮ್ಮ ಯಾವುದೇ ಸಿಬ್ಬಂದಿಯಾಗಲಿ ನಿಮ್ಮ ಮನವಿ ವಿರುದ್ಧ ಮಾತನಾಡಿದರೆ ತಿಳಿಸಿ. ಕರಗಡ ಸಮೀಪದ ಮದ್ಯದಂಗಡಿಯೊಂದರಲ್ಲಿ ಕೆಲ ಯುವಕರನ್ನು ಮದ್ಯ ಕುಡಿಯುತ್ತಿರುವ ಬಗ್ಗೆ ಪ್ರಶ್ನಿಸಿದಾಗ ಸರ್, ನಮಗೆ ಹೆಣ್ಣು ಕೊಡುತ್ತಿಲ್ಲ ನೀವು ಮದುವೆ ಮಾಡುಸ್ತೀರಾ ಎಂದು ನಮ್ಮನ್ನೇ ಪ್ರಶ್ನಿಸಿದರು ಎಂದರೆ ಏನು ಮಾಡುವುದು ಎಂದು ಹೇಳಿದರು.
ಸಿ ಎಲ್ 2 ನಲ್ಲಿ ಪಾರ್ಸಲ್ ಮಾತ್ರ ಕೊಡಬೇಕು, ಕೆಲವರ ಮೇಲೆ ಕೇಸು ಹಾಕಿದ್ದೇವೆ. ವಿದ್ಯಾರ್ಥಿನಿಯೊಬ್ಬರು ಅಪ್ಪ ಕುಡಿದು ಬಂದು ಹೊಡೆಯುತ್ತಾರೆ, ಬೈಯ್ಯುತ್ತಾರೆ ಎಂದು ನೋವು ವ್ಯಕ್ತಪಡಿಸಿದಳು. ದೂರು ಬಂದರೆ ಕ್ರಮ ಕೈಗೊಳ್ಳುತ್ತೇವೆ. ನಮಗೂ ರಾಜ್ಯದಲ್ಲಿ 55ಸಾವಿರ ಕೋಟಿ ರೂ.ಗಳ ಮಾರಾಟದ ಟಾರ್ಗೇಟ್ ಕೊಟ್ಟಿರುತ್ತಾರೆ ಹಾಗಾಗಿ ಸ್ವಲ್ಪ ತೊಂದರೆಯಾಗಿದೆ. ಇಲ್ಲಿ ಸಿಬ್ಬಂದಿ ನೇಮಕ ಮಾಡ್ತೇವೆ ಎಂದು ಹೇಳಿದರು. ಪಿಎಸ್‌ಐ ಎಸ್‌ಜಿ ಪಾಟೀಲ್ 3 ವರ್ಷದಲ್ಲಿ ಕೇಸು ದಾಖಲಿಸಿರುವ ಮಾಹಿತಿ ನೀಡಿದರು.


ಗ್ರಾಮಸ್ಥರಾದ ಕೆ.ಸಿ.ಮಂಜುನಾಥ್ ಪಿಡಿಒ ರಿಯಾನ್‌ಪಾಷ, ಕೌಶಿಕ್, ಬಿಜೆಪಿ ತಾ.ಅಧ್ಯಕ್ಷ ಕೌರಿ ಸಂಜಯ್, ಕೆಆರ್‌ಎಸ್ ಪಕ್ಷದ ಅಧ್ಯಕ್ಷ ಆದೇಶ್, ಕಾವ್ಯ, ಪುಟ್ಟರಾಜು, ಲೋಕೇಶ್, ಹರ್ಷವರ್ಧನ್, ರೇಣುಕುಮಾರ್, ಅಭಿಷೇಕ್ ಇತರರು ಇದ್ದರು.

Related posts

ಬೆಟ್ಟದ ಭೈರವೇಶ್ವರ ದೇವಸ್ಥಾನದಲ್ಲಿ ಶಿಸ್ತಿನ ಕ್ರಮ : ಜಿಲ್ಲಾಧಿಕಾರಿ

Bimba Prakashana

ಆಲೂರುನಲ್ಲಿ ಕನ್ನಡ ರಾಜ್ಯೋತ್ಸವ

Bimba Prakashana

ಸಕಲೇಶಪುರದ ಹಳ್ಳಿಯ ಯುವಕನ ಚಲನಚಿತ್ರ ” ವಲವಾರ

Bimba Prakashana

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More