Blog

ಕರ್ತವ್ಯದ ಒತ್ತಡಕ್ಕೆ ಕುಸಿದ ಮುಖ್ಯ ಶಿಕ್ಷಕಿ

🔴ಕರ್ತವ್ಯದ ಒತ್ತಡಕ್ಕೆ ಕುಸಿದ ಮುಖ್ಯಶಿಕ್ಷಕಿ; ಬಿಎಲ್‌ಒ ನೇಮಕಾತಿ ನಿಯಮದ ಬಗ್ಗೆ ಪ್ರಶ್ನೆ

ವರದಿ :
ಅರುಣ್ ಸಿಂಗ್ ರಾಜಪೂತ್


ಬೇಲೂರು, ಜುಲೈ 6: ಬೇಲೂರಿನಲ್ಲಿ ಮತದಾರರ ಪಟ್ಟಿ ಪರಿಷ್ಕರಣೆ ಕಾರ್ಯದ ವೇಳೆ ಕರ್ತವ್ಯ ನಿರ್ವಹಿಸುತ್ತಿದ್ದ ಮುಖ್ಯಶಿಕ್ಷಕಿಯೊಬ್ಬರು ಅಸ್ವಸ್ಥಗೊಂಡು ಕುಸಿದು ಬಿದ್ದ ಘಟನೆ ನಡೆದಿದೆ.

ಪಟ್ಟಣದ ದೇಗುಲ ರಸ್ತೆಯ ಸರ್ಕಾರಿ ಬಾಲಕರ ಮಾಧ್ಯಮಿಕ ಶಾಲೆಯ ಮುಖ್ಯಶಿಕ್ಷಕಿ ಪಾರ್ವತಿ ಅವರು ಬಿಎಲ್‌ಒ (Booth Level Officer) ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ವೇಳೆ ತಲೆಸುತ್ತು ಬಂದು ಕುಸಿದು ಬಿದ್ದಿದ್ದಾರೆ. ಅವರನ್ನು ತಕ್ಷಣವೇ ಬೇಲೂರು ಸಾರ್ವಜನಿಕ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ತುರ್ತು ಚಿಕಿತ್ಸಾ ವಿಭಾಗದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಮಧ್ಯಾಹ್ನ 20ನೇ ವಾರ್ಡಿನ ಚನ್ನೇಗೌಡರ ಬೀದಿಯಲ್ಲಿ ಮನೆ ಮನೆಗೆ ತೆರಳಿ ಮತದಾರರ ಪಟ್ಟಿ ವಿತರಿಸುತ್ತಿದ್ದ ಸಂದರ್ಭದಲ್ಲಿ ಅವರು ಅಸ್ವಸ್ಥಗೊಂಡು ರಸ್ತೆಯಲ್ಲೇ ಕುಸಿದು ಬಿದ್ದಿದ್ದಾರೆ. ಸ್ಥಳೀಯ ನಿವಾಸಿಗಳು ಕೂಡಲೇ ಅವರಿಗೆ ನೀರು ನೀಡಿ ಪ್ರಾಥಮಿಕ ನೆರವು ನೀಡಿದ ಬಳಿಕ ಮನೆಗೆ ಕರೆದುಕೊಂಡು ಹೋಗಿದ್ದಾರೆ. ಬಳಿಕ ವಿಷಯ ತಿಳಿದ ಅವರ ಪತಿ ಆಸ್ಪತ್ರೆಗೆ ದಾಖಲಿಸಿದ್ದಾರೆ.

ಈ ಕುರಿತು ಮಾಧ್ಯಮದೊಂದಿಗೆ ಮಾತನಾಡಿದ ಮುಖ್ಯಶಿಕ್ಷಕಿ ಪಾರ್ವತಿ, “ನನಗೆ 60 ವರ್ಷ ವಯಸ್ಸಾಗಿದ್ದು, ಇನ್ನೇನು ಕೆಲವೇ ತಿಂಗಳಲ್ಲಿ ನಿವೃತ್ತಿಯಾಗಲಿದ್ದೇನೆ. ಆರೋಗ್ಯ ಸಮಸ್ಯೆ ಇರುವುದರಿಂದ ಬಿಎಲ್‌ಒ ಕರ್ತವ್ಯದಿಂದ ನನ್ನನ್ನು ಬಿಡುಗಡೆ ಮಾಡುವಂತೆ ಮೇಲಾಧಿಕಾರಿಗಳಿಗೆ ಮನವಿ ಮಾಡಿದ್ದೆ. ಆದರೂ ಯಾವುದೇ ಕ್ರಮ ಕೈಗೊಂಡಿಲ್ಲ. ನಿನ್ನೆ ನಡೆದ ತಹಸೀಲ್ದಾರ್ ಸಭೆಯಲ್ಲಿ ಭಾನುವಾರವೂ ಕರ್ತವ್ಯ ನಿರ್ವಹಿಸುವಂತೆ ಸೂಚಿಸಲಾಗಿತ್ತು. ಇಂದು ಕೆಲಸದ ವೇಳೆ ತಲೆಸುತ್ತು ಬಂದು ಕುಸಿದು ಬಿದ್ದಿದ್ದೇನೆ. ವೈದ್ಯರು ಒಂದು ವಾರ ಸಂಪೂರ್ಣ ವಿಶ್ರಾಂತಿ ಪಡೆಯುವಂತೆ ಸಲಹೆ ನೀಡಿದ್ದಾರೆ” ಎಂದು ತಿಳಿಸಿದ್ದಾರೆ.

ಇದೇ ವೇಳೆ, 55 ವರ್ಷ ಮೇಲ್ಪಟ್ಟ ಸಿಬ್ಬಂದಿಯನ್ನು ಬಿಎಲ್‌ಒ ಆಗಿ ನೇಮಕ ಮಾಡಬಾರದು ಎಂಬ ನಿಯಮವಿದೆ ಎನ್ನುವ ಮಾಹಿತಿ ಕೇಳಿಬಂದಿದೆ. ಈ ಹಿನ್ನೆಲೆಯಲ್ಲಿ ಸಂಬಂಧಪಟ್ಟ ಅಧಿಕಾರಿಗಳು ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ಪಷ್ಟನೆ ನೀಡಬೇಕೆಂಬ ಆಗ್ರಹ ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿದೆ.

Related posts

ಬೆಟ್ಟದ ಭೈರವೇಶ್ವರ ದೇವಾಲಯದ ರಕ್ಷಣೆಗೆ ಕ್ರಮ ಕೈ ಗೊಳ್ಳಿ

Bimba Prakashana

ಬಿಜೆಪಿ ಪದಾಧಿಕಾರಿಗಳು

Bimba Prakashana

ಬೇಲೂರು ಬಿಜೆಪಿ ಎಸ್ ಸಿ ಮೋರ್ಚಾ ಅಧ್ಯಕ್ಷರಾಗಿ ರಘು

Bimba Prakashana

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More