🔴ಹಳೇಬೀಡು ಆಸ್ಪತ್ರೆಯ ಹಿರಿಯ ಆರೋಗ್ಯ ಸುರಕ್ಷಾಧಿಕಾರಿ ರಾಕ್ಷಸಿ ನಡುವಳಿಕೆ ವಿರುದ್ಧ ದೂರು; ಕೆಲಸದಿಂದ ವಜಾ ಮಾಡುವ ಬೆದರಿಕೆ ಆರೋಪ
ಆಸ್ಪತ್ರೆಯಲ್ಲಿ ಕೂಗಾಟ, ಗಲಾಟೆಯಿಂದ ರೋಗಿಗಳಿಗೆ ತೊಂದರೆ ಆರೋಪ — ಆಡಳಿತಾಧಿಕಾರಿಗಳ ಮೌನಕ್ಕೆ ಸಾರ್ವಜನಿಕರ ಪ್ರಶ್ನೆ
ಹಳೇಬೀಡು ಬೇಲೂರು : ಇಲ್ಲಿನ ಸರ್ಕಾರಿ ಆಸ್ಪತ್ರೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಆಶಾ ಕಾರ್ಯಕರ್ತೆಯೊಬ್ಬರಿಗೆ ಹಿರಿಯ ಆರೋಗ್ಯ ಸುರಕ್ಷಾಧಿಕಾರಿ ಶೈ ಒಬ್ಬರು ಕಳೆದ ಎರಡು ತಿಂಗಳಿಂದ ನಿರಂತರವಾಗಿ ಮಾನಸಿಕ ಕಿರುಕುಳ ನೀಡುತ್ತಿದ್ದಾರೆ ಹಾಗೂ ಕೆಲಸದಿಂದ ವಜಾ ಮಾಡುವುದಾಗಿ ಬೆದರಿಕೆ ಹಾಕುತ್ತಿದ್ದಾರೆ ಎಂಬ ಗಂಭೀರ ಆರೋಪ ಕೇಳಿಬಂದಿದೆ.
ಸುಮಾರು ಒಂದು ತಿಂಗಳ ಹಿಂದೆ ಆಸ್ಪತ್ರೆಯ ವಾಟ್ಸ್‌ಆ್ಯಪ್ ಗ್ರೂಪ್‌ಗೆ ಆಶಾ ಕಾರ್ಯಕರ್ತೆಯೊಬ್ಬರು ಆಡಿಯೋ ಸಂದೇಶವನ್ನು ಕಳುಹಿಸಿದ್ದರು ಎನ್ನಲಾಗಿದೆ. ಆ ಆಡಿಯೋದಲ್ಲಿ ಯಾವುದೇ ವ್ಯಕ್ತಿಯನ್ನು ಗುರಿಯಾಗಿಸಿ ಕೆಟ್ಟ ಪದಗಳನ್ನು ಬಳಸಿಲ್ಲ ಎಂದು ಆಶಾ ಕಾರ್ಯಕರ್ತೆ ಹೇಳಿದ್ದು, ಆಡಿಯೋ ತಪ್ಪಾಗಿ ಗ್ರೂಪ್‌ಗೆ ಕಳುಹಿಸಲಾಗಿದೆ ಎಂದು ತಿಳಿಸಿ ಕ್ಷಮೆಯನ್ನೂ ಕೇಳಿದ್ದರು ಎನ್ನಲಾಗಿದೆ.
ಆದರೂ ಆ ಘಟನೆಯನ್ನೇ ಮುಂದಿಟ್ಟುಕೊಂಡು ಕಳೆದ ಎರಡು ತಿಂಗಳಿಂದ ತಮ್ಮ ಮೇಲೆ ನಿರಂತರವಾಗಿ ಮಾನಸಿಕ ಒತ್ತಡ ಹಾಗೂ ಕಿರುಕುಳ ನೀಡಲಾಗುತ್ತಿದೆ ಎಂದು ಆಶಾ ಕಾರ್ಯಕರ್ತೆ ಆರೋಪಿಸಿದ್ದಾರೆ. ವಯಸ್ಸು ಮತ್ತು ಹುದ್ದೆಯ ಗೌರವವನ್ನೂ ಪರಿಗಣಿಸದೆ ಪ್ರತಿನಿತ್ಯ ತೊಂದರೆ ನೀಡಲಾಗುತ್ತಿದೆ ಎಂಬ ಆರೋಪವೂ ಕೇಳಿಬಂದಿದೆ.
ಈ ಬೆಳವಣಿಗೆಯಿಂದ ಆಶಾ ಕಾರ್ಯಕರ್ತೆ ಮಾನಸಿಕವಾಗಿ ನೊಂದಿದ್ದು, ಕರ್ತವ್ಯ ನಿರ್ವಹಿಸುವುದೇ ಕಷ್ಟಕರ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಹೇಳಲಾಗಿದೆ. ಸಮಸ್ಯೆಗೆ ಪರಿಹಾರ ದೊರೆಯದೆ ಕಣ್ಣೀರಿನಲ್ಲೇ ದಿನ ಕಳೆಯುವಂತಾಗಿದೆ ಎಂದು ಆಕೆಯ ಪರವಾಗಿ ಮಾತನಾಡಿರುವವರು ತಿಳಿಸಿದ್ದಾರೆ.
ಇದೇ ವೇಳೆ ಹಳೇಬೀಡು ಮಾತ್ರವಲ್ಲದೆ ಬೇಲೂರು ಆಸ್ಪತ್ರೆಯಲ್ಲಿಯೂ ಆರೋಗ್ಯ ಸುರಕ್ಷಾಧಿಕಾರಿ ಶೈ ಅವರ ವರ್ತನೆ ಕುರಿತು ಸಾರ್ವಜನಿಕರಿಂದ ಆಕ್ಷೇಪ ವ್ಯಕ್ತವಾಗಿದೆ. ಆಸ್ಪತ್ರೆಯ ಆವರಣದಲ್ಲಿ ಜೋರಾಗಿ ಕೂಗಾಟ ಹಾಗೂ ಗಲಾಟೆ ನಡೆಯುತ್ತಿರುವುದರಿಂದ ರೋಗಿಗಳು ಮತ್ತು ಅವರ ಸಂಬಂಧಿಕರಿಗೆ ತೊಂದರೆಯಾಗುತ್ತಿದೆ ಎಂಬ ಆರೋಪ ಕೇಳಿಬಂದಿದೆ.
ಆಸ್ಪತ್ರೆಯಲ್ಲಿ ಗದ್ದಲದ ಬಗ್ಗೆ ವಿಚಾರಿಸಲು ಸಾರ್ವಜನಿಕರು ಮುಂದಾದಾಗ, “ನಿಮಗೇಕೆ, ನೀವು ಯಾರು ಪ್ರಶ್ನೆ ಕೇಳಲು?” ಎಂಬ ರೀತಿಯಲ್ಲಿ ಉತ್ತರಿಸಿ ಸಾರ್ವಜನಿಕರ ಮೇಲೆಯೇ ದರ್ಪ ತೋರಿದರು ಎಂದು ಆರೋಪಿಸಲಾಗಿದೆ. ಈ ಘಟನೆಯಿಂದ ಆಸ್ಪತ್ರೆಯಲ್ಲಿನ ಅಧಿಕಾರಿಗಳ ವರ್ತನೆ ಕುರಿತು ಸಾರ್ವಜನಿಕರಲ್ಲಿ ಅಸಮಾಧಾನ ವ್ಯಕ್ತವಾಗಿದೆ.
ರೋಗಿಗಳ ಚಿಕಿತ್ಸೆ ಹಾಗೂ ಆರೋಗ್ಯ ಸೇವೆಗೆ ಸಂಬಂಧಿಸಿದ ಸ್ಥಳದಲ್ಲಿ ಶಾಂತಿಯುತ ವಾತಾವರಣ ಇರಬೇಕಾದ ಅಗತ್ಯವಿದೆ. ಆದರೆ ಆಸ್ಪತ್ರೆಯಲ್ಲೇ ಕೂಗಾಟ, ಗಲಾಟೆ ನಡೆಯುತ್ತಿದ್ದರೆ ಅದರ ಪರಿಣಾಮ ರೋಗಿಗಳ ಮೇಲೆ ಬೀರುವ ಸಾಧ್ಯತೆ ಇದೆ. ಈ ಬಗ್ಗೆ ಆಸ್ಪತ್ರೆಯ ಆಡಳಿತಾಧಿಕಾರಿಗಳು ಹಾಗೂ ಸಂಬಂಧಪಟ್ಟ ಮೇಲಧಿಕಾರಿಗಳು ಗಮನಹರಿಸಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.
ಆಶಾ ಕಾರ್ಯಕರ್ತೆಯೊಬ್ಬರು ಎರಡು ತಿಂಗಳಿಂದ ಮಾನಸಿಕ ಕಿರುಕುಳ ಅನುಭವಿಸುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿದ್ದರೂ, ಸ್ಥಳೀಯ ಆಡಳಿತಾಧಿಕಾರಿಗಳು ಹಾಗೂ ಆರೋಗ್ಯ ಇಲಾಖೆಯ ಮೇಲಧಿಕಾರಿಗಳು ಈ ಬಗ್ಗೆ ಏಕೆ ಕ್ರಮ ಕೈಗೊಂಡಿಲ್ಲ ಎಂಬ ಪ್ರಶ್ನೆ ಸಾರ್ವಜನಿಕರಲ್ಲಿ ಮೂಡಿದೆ. ಆರೋಪಗಳ ಕುರಿತು ನಿಷ್ಪಕ್ಷಪಾತವಾಗಿ ಪರಿಶೀಲನೆ ನಡೆಸಿ ಸತ್ಯಾಸತ್ಯತೆಯನ್ನು ಬಹಿರಂಗಪಡಿಸಬೇಕೆಂಬ ಆಗ್ರಹ ಕೇಳಿಬಂದಿದೆ.
ಆಶಾ ಕಾರ್ಯಕರ್ತೆಯರ ಕೆಲಸವೇ ಗ್ರಾಮೀಣ ಪ್ರದೇಶದಲ್ಲಿ ಆರೋಗ್ಯ ಸೇವೆಯನ್ನು ಜನರಿಗೆ ತಲುಪಿಸುವುದಾಗಿದೆ. ಇಂತಹ ಸಿಬ್ಬಂದಿಗೆ ಕೆಲಸದ ಸ್ಥಳದಲ್ಲಿ ಮಾನಸಿಕ ಒತ್ತಡ ಅಥವಾ ಬೆದರಿಕೆ ಎದುರಾಗುತ್ತಿದೆ ಎಂಬ ದೂರು ಬಂದರೆ ಸಂಬಂಧಪಟ್ಟ ಅಧಿಕಾರಿಗಳು ನಿರ್ಲಕ್ಷ್ಯ ಮಾಡದೆ ವಿಚಾರಣೆ ನಡೆಸಿ, ತಪ್ಪಿತಸ್ಥರು ಯಾರೇ ಆಗಿದ್ದರೂ ನಿಯಮಾನುಸಾರ ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
ಈ ಎಲ್ಲ ಆರೋಪಗಳ ಕುರಿತು ಆರೋಗ್ಯ ಇಲಾಖೆಯ ಮೇಲಧಿಕಾರಿಗಳು, ಹಳೇಬೀಡು ಹಾಗೂ ಬೇಲೂರು ಆಸ್ಪತ್ರೆಯ ಆಡಳಿತಾಧಿಕಾರಿಗಳು ಸಮಗ್ರ ತನಿಖೆ ನಡೆಸಿ ವಾಸ್ತವಾಂಶವನ್ನು ಬಹಿರಂಗಪಡಿಸುತ್ತಾರೆಯೇ? ಕಿರುಕುಳ ಅನುಭವಿಸುತ್ತಿದ್ದಾರೆ ಎನ್ನಲಾಗುತ್ತಿರುವ ಆಶಾ ಕಾರ್ಯಕರ್ತೆಗೆ ನ್ಯಾಯ ಒದಗಿಸುತ್ತಾರೆಯೇ? ಆಸ್ಪತ್ರೆಯಲ್ಲಿ ರೋಗಿಗಳಿಗೆ ತೊಂದರೆಯಾಗದಂತೆ ಶಿಸ್ತು ಕಾಪಾಡಲು ಕ್ರಮ ಕೈಗೊಳ್ಳುತ್ತಾರೆಯೇ? ಎಂಬುದು ಇದೀಗ ಸಾರ್ವಜನಿಕರ ಪ್ರಶ್ನೆಯಾಗಿದೆ. ಅಧಿಕಾರಿಗಳ ಮುಂದಿನ ಕ್ರಮವನ್ನು ಕಾದುನೋಡಬೇಕಿದೆ.
previous post
