Blog

ಬೇಲೂರು ಚನ್ನಕೇಶವ ದೇವಾಲಯದ ಬಳಿ ತಳ್ಳು ಗಾಡಿ ಕಾಟ

🔴ಚನ್ನಕೇಶವ ದೇಗುಲದ ಸುತ್ತ ತಳ್ಳುಗಾಡಿಗಳ ಕಾಟ
ಅಸ್ವಚ್ಛತೆ ವಿರುದ್ಧ ಸಾರ್ವಜನಿಕರ ಆಕ್ರೋಶ | ತೆರವಿಗೆ ಜಿಲ್ಲಾಡಳಿತ ಸೂಚನೆ, ಕ್ರಮಕ್ಕೆ ಮಾತ್ರ ವಿಳಂಬ

ವರದಿ ಅರುಣ್ ಸಿಂಗ್ ರಾಜಪುತ್

ಬೇಲೂರು: ಬೇಲೂರಿನ ವಿಶ್ವವಿಖ್ಯಾತ ಚನ್ನಕೇಶವ ಸ್ವಾಮಿ ದೇಗುಲದ ಸುತ್ತಮುತ್ತ ತಳ್ಳುಗಾಡಿ ವ್ಯಾಪಾರ ಹೆಚ್ಚಾಗಿದ್ದು, ಇದರಿಂದ ದೇವಾಲಯದ ಸುತ್ತಲಿನ ವಾತಾವರಣದ ಮೇಲೆ ಪರಿಣಾಮ ಬೀರುತ್ತಿದೆ ಎಂಬ ದೂರುಗಳು ಕೇಳಿಬರುತ್ತಿವೆ. ಐತಿಹಾಸಿಕ ಸ್ಮಾರಕದ ಮುಂಭಾಗದಲ್ಲೇ ವ್ಯಾಪಾರ ಚಟುವಟಿಕೆಗಳು ನಡೆಯುತ್ತಿರುವುದು ಪ್ರವಾಸಿಗರ ಗಮನ ಸೆಳೆಯುತ್ತಿದೆ.

ಪ್ರತಿದಿನ ನೂರಾರು ಪ್ರವಾಸಿಗರು ದೇಗುಲಕ್ಕೆ ಭೇಟಿ ನೀಡುತ್ತಿದ್ದು, ರಜಾ ದಿನಗಳು ಹಾಗೂ ವಿಶೇಷ ಸಂದರ್ಭಗಳಲ್ಲಿ ಪ್ರವಾಸಿಗರ ಸಂಖ್ಯೆ ಮತ್ತಷ್ಟು ಹೆಚ್ಚಾಗುತ್ತದೆ. ಇಂತಹ ಸಂದರ್ಭದಲ್ಲಿ ದೇಗುಲದ ಪ್ರವೇಶ ಭಾಗದ ಸಮೀಪ ತಳ್ಳುಗಾಡಿಗಳು ಸಾಲುಗಟ್ಟಿ ನಿಲ್ಲುವುದರಿಂದ ಓಡಾಟಕ್ಕೂ ಕೆಲವೊಮ್ಮೆ ತೊಂದರೆಯಾಗುತ್ತಿದೆ ಎನ್ನಲಾಗಿದೆ.

ದೇಗುಲಕ್ಕೆ ಬರುವವರು ತಿಂಡಿ-ತಿನಿಸುಗಳನ್ನು ಖರೀದಿಸುವುದು ಸಾಮಾನ್ಯವಾಗಿದ್ದು, ವ್ಯಾಪಾರದ ಬಳಿಕ ಉಳಿಯುವ ಪ್ಲಾಸ್ಟಿಕ್ ತಟ್ಟೆಗಳು, ಕವರ್‌ಗಳು, ಕಪ್‌ಗಳು ಹಾಗೂ ಆಹಾರದ ತ್ಯಾಜ್ಯವನ್ನು ಎಲ್ಲೆಂದರಲ್ಲಿ ಹಾಕುತ್ತಿರುವುದರಿಂದ ಪರಿಸರದ ಸ್ವಚ್ಛತೆ ಹದಗೆಡುತ್ತಿದೆ ಎಂಬ ಆರೋಪ ಸ್ಥಳೀಯರಿಂದ ವ್ಯಕ್ತವಾಗಿದೆ.

ವಿಶೇಷವಾಗಿ ದೇಗುಲದ ಮೆಟ್ಟಿಲುಗಳ ಆಸುಪಾಸಿನಲ್ಲಿ ಚರ್ಮುರಿ, ಪಾನಿಪುರಿ, ಸೌತೆಕಾಯಿ, ಗೋಬಿ ಸೇರಿದಂತೆ ಹಲವು ತಿಂಡಿ-ತಿನಿಸುಗಳ ಗಾಡಿಗಳು ಕಂಡುಬರುತ್ತಿವೆ. ಇದರಿಂದ ಪಾರಂಪರಿಕ ಸ್ಮಾರಕದ ವಾತಾವರಣಕ್ಕೆ ಹೊಂದಿಕೆಯಾಗದ ದೃಶ್ಯ ನಿರ್ಮಾಣವಾಗುತ್ತಿದೆ ಎಂದು ಪ್ರವಾಸಿಗರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಚನ್ನಕೇಶವ ದೇಗುಲದ ಶಿಲ್ಪಕಲೆ ಹಾಗೂ ವಾಸ್ತುಶಿಲ್ಪವನ್ನು ವೀಕ್ಷಿಸಲು ದೇಶದ ವಿವಿಧ ಭಾಗಗಳಿಂದ ಪ್ರವಾಸಿಗರು ಆಗಮಿಸುತ್ತಾರೆ. ದೇಗುಲದ ಪ್ರವೇಶ ಭಾಗದಲ್ಲೇ ವ್ಯಾಪಾರ ಮಳಿಗೆಗಳು ಕಂಡುಬರುವುದರಿಂದ ಐತಿಹಾಸಿಕ ಸ್ಮಾರಕದ ವೈಭವವನ್ನು ಆಸ್ವಾದಿಸಲು ಅಡಚಣೆಯಾಗುತ್ತಿದೆ ಎಂಬ ಅಭಿಪ್ರಾಯವೂ ಕೇಳಿಬಂದಿದೆ.

ವ್ಯಾಪಾರಿಗಳನ್ನು ಏಕಾಏಕಿ ತೆರವುಗೊಳಿಸುವ ಬದಲು, ಅವರ ಜೀವನೋಪಾಯಕ್ಕೆ ಪರ್ಯಾಯ ವ್ಯವಸ್ಥೆ ಕಲ್ಪಿಸಿ ಸೂಕ್ತ ಸ್ಥಳಕ್ಕೆ ಸ್ಥಳಾಂತರಿಸುವ ಅಗತ್ಯವಿದೆ ಎಂದು ಸಾರ್ವಜನಿಕರು ಹೇಳಿದ್ದಾರೆ. ದೇಗುಲದ ಸುತ್ತಲಿನ ಪ್ರದೇಶವನ್ನು ಪ್ರವಾಸಿಗರಿಗೆ ಮುಕ್ತ ಹಾಗೂ ಸ್ವಚ್ಛ ವಾತಾವರಣವಾಗಿಸುವುದು ಅಗತ್ಯವಾಗಿದೆ.

ಈ ಸಮಸ್ಯೆ ಕುರಿತು ಜಿಲ್ಲಾಡಳಿತದ ಮಟ್ಟದಲ್ಲಿಯೂ ಗಮನ ಹರಿಸಲಾಗಿದ್ದು, ದೇಗುಲದ ಮುಂಭಾಗದಲ್ಲಿ ತಳ್ಳುಗಾಡಿಗಳನ್ನು ನಿಯಂತ್ರಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ತಿಳಿದುಬಂದಿದೆ. ವ್ಯಾಪಾರಿಗಳಿಗೆ ಪರ್ಯಾಯ ಸ್ಥಳ ಗುರುತಿಸಿ ವ್ಯವಸ್ಥೆ ಕಲ್ಪಿಸುವ ಬಗ್ಗೆಯೂ ಅಧಿಕಾರಿಗಳ ಮಟ್ಟದಲ್ಲಿ ಚರ್ಚೆ ನಡೆದಿದೆ ಎನ್ನಲಾಗಿದೆ.

ಸಕಲೇಶಪುರ ಉಪವಿಭಾಗಾಧಿಕಾರಿ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ದೇಗುಲದ ಸುತ್ತಲಿನ ವ್ಯಾಪಾರ ವ್ಯವಸ್ಥೆ ಕುರಿತು ಚರ್ಚಿಸಿ, ಅಗತ್ಯ ಕ್ರಮ ಕೈಗೊಳ್ಳುವಂತೆ ಬೇಲೂರು ಪುರಸಭೆಯ ಅಧಿಕಾರಿಗಳಿಗೆ ಸೂಚನೆ ನೀಡಲಾಗಿತ್ತು ಎಂದು ತಿಳಿದುಬಂದಿದೆ. ಆದರೆ ಸಭೆ ನಡೆದು ಸಮಯ ಕಳೆದರೂ ಸ್ಥಳದಲ್ಲಿ ನಿರೀಕ್ಷಿತ ಬದಲಾವಣೆ ಕಂಡುಬಂದಿಲ್ಲ ಎಂಬುದು ಸಾರ್ವಜನಿಕರ ಅಸಮಾಧಾನಕ್ಕೆ ಕಾರಣವಾಗಿದೆ.

ಪುರಸಭೆ ಹಾಗೂ ಸಂಬಂಧಪಟ್ಟ ಇಲಾಖೆಗಳು ಪರಸ್ಪರ ಸಮನ್ವಯದಿಂದ ಕಾರ್ಯನಿರ್ವಹಿಸಿ, ದೇಗುಲದ ಪ್ರವೇಶ ಭಾಗವನ್ನು ಸ್ವಚ್ಛವಾಗಿಡುವ ಜತೆಗೆ ವ್ಯಾಪಾರಿಗಳಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸಬೇಕು. ಐತಿಹಾಸಿಕ ಸ್ಮಾರಕದ ಸಂರಕ್ಷಣೆ ಮತ್ತು ಸ್ಥಳೀಯ ವ್ಯಾಪಾರಿಗಳ ಹಿತ ಎರಡನ್ನೂ ಗಮನದಲ್ಲಿಟ್ಟುಕೊಂಡು ಶಾಶ್ವತ ಪರಿಹಾರ ಕಂಡುಕೊಳ್ಳಬೇಕಿದೆ.

ಚನ್ನಕೇಶವ ದೇಗುಲದ ಸೌಂದರ್ಯಕ್ಕೆ ಧಕ್ಕೆಯಾಗದಂತೆ ತಳ್ಳುಗಾಡಿಗಳನ್ನು ನಿಯಂತ್ರಿಸಿ, ಸ್ವಚ್ಛ ಹಾಗೂ ಪ್ರವಾಸಿಗಸ್ನೇಹಿ ವಾತಾವರಣ ನಿರ್ಮಿಸುವುದು ಯಾವಾಗ? ಎಂಬ ಪ್ರಶ್ನೆ ಇದೀಗ ಸಾರ್ವಜನಿಕರಲ್ಲಿ ಮೂಡಿದೆ. ಜಿಲ್ಲಾಡಳಿತ ನೀಡಿರುವ ಸೂಚನೆಗಳು ಕೇವಲ ಸಭೆ ಮತ್ತು ಕಡತಗಳಿಗೆ ಸೀಮಿತವಾಗದೆ, ಸ್ಥಳದಲ್ಲಿ ಪರಿಣಾಮಕಾರಿ ಕ್ರಮವಾಗಿ ಜಾರಿಯಾಗಬೇಕಿದೆ.

Related posts

ಬೇಲೂರುನಲ್ಲಿ ಡಿ ಜೆ ಸೌಂಡ್ ಸಂಪೂರ್ಣ ನಿಷೇಧ

Bimba Prakashana

ಬೇಲೂರುನಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ

Bimba Prakashana

ಸಕಲೇಶಪುರ 5 ನೇ ವಾರ್ಡ್ ನಲ್ಲಿ ಚರಂಡಿಯಲ್ಲಿ ಬ್ಲಾಕ್ ಆದ ತ್ಯಾಜ್ಯ

Bimba Prakashana

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More