ಬೇಲೂರಿನಲ್ಲಿ ಶಾಂತಿ ಸಭೆ : ಡಿಜೆ ಸೌಂಡ್‌ಗೆ ಸಂಪೂರ್ಣ ನಿಷೇಧ – ನಿಯಮ ಉಲ್ಲಂಘಿಸಿದರೆ ಕ್ರಮ.. ಪಿ ಐ ರೇವಣ್ಣ
ಬೇಲೂರು, : ಯಾವುದೇ ಶುಭ ಸಮಾರಂಭ ಅಥವಾ ದೊಡ್ಡ ಕಾರ್ಯಕ್ರಮಗಳಲ್ಲಿ ಡಿಜೆ ಸೌಂಡ್ ಬಳಕೆ ಮಾಡದಂತೆ ಸರ್ಕಾರ ಕಠಿಣ ಸುತ್ತೋಲೆ ಹೊರಡಿಸಿರುವ ಹಿನ್ನೆಲೆಯಲ್ಲಿ ಸಾರ್ವಜನಿಕರು ಹೆಚ್ಚಿನ ಸಹಕಾರ ನೀಡಬೇಕು ಹಾಗೂ ಬಕ್ರೀದ್ ಹಬ್ಬವನ್ನು ಶಾಂತಿಯುತವಾಗಿ ಆಚರಿಸಬೇಕು ಎಂದು ರೇವಣ್ಣ ಹೇಳಿದರು.
ಪಟ್ಟಣದ ನೆಹರುನಗರ ಪೊಲೀಸ್ ಠಾಣೆಯಲ್ಲಿ ಬಕ್ರೀದ್ ಹಬ್ಬದ ಪ್ರಯುಕ್ತ ಆಯೋಜಿಸಿದ್ದ ಶಾಂತಿ ಸಭೆಯಲ್ಲಿ ಮಾತನಾಡಿದ ಅವರು, “ನಾನು ಬೇಲೂರಿಗೆ ಬಂದು ಒಂದೂವರೆ ವರ್ಷವಾಗಿದೆ. ಈ ಅವಧಿಯಲ್ಲಿ ಯಾವುದೇ ಅಹಿತಕರ ಘಟನೆ ನಡೆದಿಲ್ಲ. ಎಲ್ಲಾ ಧರ್ಮದ ಜನರು ಒಗ್ಗಟ್ಟಿನಿಂದ ಬದುಕುತ್ತಿದ್ದು, ಉತ್ತಮ ಸಂದೇಶ ನೀಡುತ್ತಿದ್ದಾರೆ” ಎಂದರು.
ಹಿಂದೂ ಹಾಗೂ ಮುಸ್ಲಿಂ ಸಮುದಾಯದ ಯಾವುದೇ ಹಬ್ಬ ಅಥವಾ ಉತ್ಸವಗಳಲ್ಲಿ ಡಿಜೆ ಸೌಂಡ್ ಬಳಕೆಗೆ ಸಂಪೂರ್ಣ ನಿಷೇಧ ಇರುವುದರಿಂದ ಸಾರ್ವಜನಿಕರು ನಿಯಮ ಪಾಲಿಸಬೇಕು ಎಂದು ಮನವಿ ಮಾಡಿದರು.
ಪಟ್ಟಣದಲ್ಲಿ ಟ್ರಾಫಿಕ್ ನಿಯಂತ್ರಣಕ್ಕೆ ಪೊಲೀಸ್ ಇಲಾಖೆ ನಿರಂತರ ಪ್ರಯತ್ನ ನಡೆಸುತ್ತಿದೆ. ಆದರೂ ಕೆಲವರು ಎಲ್ಲೆಂದರಲ್ಲಿ ವಾಹನ ನಿಲುಗಡೆ ಮಾಡುತ್ತಿರುವುದರಿಂದ ಸಮಸ್ಯೆ ಹೆಚ್ಚಾಗಿದೆ. ವಾಹನ ಸಂಚಾರ ನಿಯಮ ಉಲ್ಲಂಘನೆಗೆ ವಿಧಿಸುವ ದಂಡವನ್ನು ಕಠಿಣಗೊಳಿಸಲಾಗಿದೆ ಎಂದು ತಿಳಿಸಿದರು.
ಕೆಲವೆಡೆ ಗಾಂಜಾ ಪ್ರಕರಣಗಳ ಬಗ್ಗೆ ಮಾಹಿತಿ ಬರುತ್ತಿದ್ದು, ಈ ಕುರಿತು ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳಲಾಗಿದೆ. ಸಾರ್ವಜನಿಕರು ಇಂತಹ ಅಕ್ರಮ ಚಟುವಟಿಕೆಗಳ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಬೇಕು ಎಂದು ಕೋರಿದರು. ಜೊತೆಗೆ, ಬಕ್ರೀದ್ ಹಬ್ಬವನ್ನು ಶಾಂತಿಯುತವಾಗಿ ಆಚರಿಸಿ, ಅಪ್ರಾಪ್ತರಿಗೆ ವಾಹನ ನೀಡಬಾರದು ಹಾಗೂ ರಸ್ತೆ ಸುರಕ್ಷತಾ ನಿಯಮಗಳನ್ನು ಪಾಲಿಸಬೇಕು ಎಂದು ಸಲಹೆ ನೀಡಿದರು.
ಹಿಂದೂಪರ ಸಂಘಟನೆ ಮುಖಂಡರಾದ ಮೋಹನ್ ಕುಮಾರ್ ಮತ್ತು ಸಂತೋಷ ಮಾತನಾಡಿ, “ಬೇಲೂರು ಶಾಂತಿಯ ನಾಡು. ಇಲ್ಲಿ ಶಾಂತಿ ಸಭೆಯ ಅಗತ್ಯವೇ ಇಲ್ಲ. ಆದರೆ ಕೆಲವರು ಗೊಂದಲ ಸೃಷ್ಟಿಸಲು ಯತ್ನಿಸುತ್ತಿರುವುದರಿಂದ ಸಮಾಜ ಎಚ್ಚರಿಕೆಯಿಂದಿರಬೇಕು” ಎಂದು ಹೇಳಿದರು.
ಮುಸ್ಲಿಂ ಮುಖಂಡರಾದ ನವೀದ್ ಹಾಗೂ ಖಾದರ್ ಮಾತನಾಡಿ, ಬಕ್ರೀದ್ ಹಬ್ಬವು ತ್ಯಾಗ ಮತ್ತು ಬಲಿದಾನದ ಪ್ರತೀಕವಾಗಿದ್ದು, ಆ ದಿನ ಯಾವುದೇ ಮೆರವಣಿಗೆ ಅಥವಾ ಉತ್ಸವವಿಲ್ಲದೆ ಸೌಹಾರ್ದಯುತ ಪ್ರಾರ್ಥನೆ ನಡೆಯುತ್ತದೆ ಎಂದು ತಿಳಿಸಿದರು.
ಕರವೇ ತಾಲ್ಲೂಕು ಅಧ್ಯಕ್ಷ ಚಂದ್ರಶೇಖರ ಮಾತನಾಡಿ, “ಗಾಂಜಾ ಪ್ರಕರಣಗಳಿಂದ ಯುವಜನತೆ ದುಶ್ಚಟಗಳಿಗೆ ಒಳಗಾಗುತ್ತಿದೆ. ಈ ಹಿಂದೆ ಕರವೇ ಇಂತಹ ಪ್ರಕರಣಗಳನ್ನು ಪತ್ತೆಹಚ್ಚಿ ಪೊಲೀಸರಿಗೆ ಒಪ್ಪಿಸಿದೆ. ಬಕ್ರೀದ್ ದಿನ ಅತಿವೇಗ ಮತ್ತು ಅಸಭ್ಯ ಬೈಕ್ ಚಾಲನೆಗೆ ಕಡಿವಾಣ ಹಾಕಬೇಕು” ಎಂದು ಆಗ್ರಹಿಸಿದರು.
ಸಭೆಯಲ್ಲಿ ಮುಖಂಡರಾದ ಭರತ್, ನಾಗೇಶ್. ನವೀದ್. ಖಾದರ್. ಚಂದ್ರುಶೇಖರ್.ಸೇರಿದಂತೆ ವಿವಿಧ ಸಮುದಾಯದ ಮುಖಂಡರು ಭಾಗವಹಿಸಿದ್ದರು. ಪೊಲೀಸ್ ಅಧಿಕಾರಿ ದೇವರಾಜ್ ಕೂಡ ಉಪಸ್ಥಿತರಿದ್ದರು.
