Blog

ಪ್ಲಾಂಟರ್ ಸಂಘದ ಸಭೆ

🔴ಕಾಡಾನೆ ಸಮಸ್ಯೆ ಪರಿಹಾರಕ್ಕೆ ಒಗ್ಗಟ್ಟಿನ ಹೋರಾಟ ಅಗತ್ಯ: ಮಂಜುನಾಥ್ ಶೆಟ್ಟಿ.

🔴ಐದು ಸಾವಿರ ಬೆಳೆಗಾರರೊಂದಿಗೆ ಬೃಹತ್ ಪ್ರತಿಭಟನೆಗೆ ಚಿಂತನೆ.ಕಾಫಿ ದಿನಾಚರಣೆ ಸ್ಥಳದ ಬಗ್ಗೆ ಮುಂದಿನ ಸಭೆಯಲ್ಲಿ ಅಂತಿಮ ನಿರ್ಧಾರ.

ಸಕಲೇಶಪುರ: ಕಾಡಾನೆ ಹಾವಳಿಗೆ ಶಾಶ್ವತ ಪರಿಹಾರ ಕಲ್ಪಿಸುವಂತೆ ಸರ್ಕಾರದ ಗಮನ ಸೆಳೆಯಲು ಬೆಳೆಗಾರರು ಒಗ್ಗಟ್ಟಾಗಿ ಹೋರಾಟ ನಡೆಸಬೇಕಿದೆ ಎಂದು ಹಾಸನ ಜಿಲ್ಲಾ ಪ್ಲಾಂಟರ್ಸ್ ಸಂಘದ ಅಧ್ಯಕ್ಷ ಮಂಜುನಾಥ್ ಶೆಟ್ಟಿ ಹೇಳಿದರು.

ಪಟ್ಟಣದ ಖಾಸಗಿ ಹೋಟೆಲ್ ಸಭಾಂಗಣದಲ್ಲಿ ಮಂಗಳವಾರ ನಡೆದ ಸಂಘದ 2026–28ನೇ ಸಾಲಿನ ಕಾರ್ಯಕಾರಿ ಮಂಡಳಿಯ ಮೂರನೇ ಮಾಸಿಕ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

‘ಕಾಡಾನೆ ಸಮಸ್ಯೆ ದಿನದಿಂದ ದಿನಕ್ಕೆ ತೀವ್ರವಾಗುತ್ತಿದ್ದು, ಅಧಿಕಾರಿಗಳ ವರ್ಗಾವಣೆಯಿಂದ ಸಮಸ್ಯೆಗೆ ಶಾಶ್ವತ ಪರಿಹಾರ ಸಿಗುತ್ತಿಲ್ಲ. ಈ ಹಿನ್ನೆಲೆಯಲ್ಲಿ ಈ ತಿಂಗಳಲ್ಲಿ ಮೊದಲು ಬೇಲೂರು, ಬಳಿಕ ಸಕಲೇಶಪುರ ಹಾಗೂ ಹಾಸನದಲ್ಲಿ ಬೃಹತ್ ಪ್ರತಿಭಟನೆ ನಡೆಸುವ ಬಗ್ಗೆ ಚಿಂತನೆ ನಡೆಸಲಾಗಿದೆ. ಕನಿಷ್ಠ ಐದು ಸಾವಿರ ಬೆಳೆಗಾರರು ಭಾಗವಹಿಸುವಂತೆ ಸಂಘಟಿಸುವ ಉದ್ದೇಶವಿದೆ’ ಎಂದರು.

ಬೆಳೆಗಾರರ ಐದು ಪ್ರಮುಖ ಬೇಡಿಕೆ.:-

ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗದೊಂದಿಗೆ ನಡೆದ ಬೆಳೆಗಾರರ ಕುಂದುಕೊರತೆ ಹಾಗೂ ಅಹವಾಲು ಸಭೆಯಲ್ಲಿ ಸಂಘದ ವತಿಯಿಂದ ಐದು ಪ್ರಮುಖ ಬೇಡಿಕೆಗಳನ್ನು ಮಂಡಿಸಲಾಗಿದೆ. 10 ಎಚ್‌ಪಿ ವರೆಗೆ ಉಚಿತ ವಿದ್ಯುತ್, ವಿದ್ಯುತ್ ಪರಿವರ್ತಕ (ಟಿಸಿ) ಕೆಟ್ಟರೆ ತಕ್ಷಣ ಬದಲಾವಣೆ, ಒಂಬತ್ತು ತಿಂಗಳ ಶೂನ್ಯ ಅಥವಾ ಕಡಿಮೆ ಬಡ್ಡಿಯ ಸಾಲ ಸೌಲಭ್ಯ, ಎನ್‌ಟಿ–4ಸಿ ಜಮೀನುಗಳನ್ನು ಎನ್‌ಟಿ–4ಎ ವ್ಯಾಪ್ತಿಗೆ ತಂದು ಅಗತ್ಯ ಸೌಲಭ್ಯ ಕಲ್ಪಿಸುವುದು ಹಾಗೂ ತೋಟಗಳೊಳಗೆ ಹಾದುಹೋಗುವ ವಿದ್ಯುತ್ ಮಾರ್ಗಗಳಿಗೆ ತಾಗುವ ಮರಗಳನ್ನು ಇಲಾಖೆಯೇ ತೆರವುಗೊಳಿಸುವುದು ಪ್ರಮುಖ ಬೇಡಿಕೆಗಳಾಗಿವೆ ಎಂದು ತಿಳಿಸಿದರು.

ಡಿಬಿಟಿ ವ್ಯವಸ್ಥೆಗೆ ಸಂಬಂಧಿಸಿದಂತೆ ರಾಜ್ಯದ ಎಲ್ಲ ಜಿಲ್ಲೆಗಳಿಗೂ ಒಂದೇ ರೀತಿಯ ನಿಯಮ ರೂಪಿಸುವ ಕುರಿತು ಅಧಿಕಾರಿಗಳು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ಕಾಳುಮೆಣಸು ಬೆಳೆ ವಿಮೆ ಪಾವತಿಗೆ ಹೆಚ್ಚುವರಿಯಾಗಿ 15 ದಿನಗಳ ಕಾಲಾವಕಾಶ ನೀಡುವಂತೆ ಸಂಘ ಸಲ್ಲಿಸಿದ್ದ ಮನವಿಗೂ ಸ್ಪಂದನೆ ದೊರೆತಿದೆ ಎಂದರು.

ಒತ್ತುವರಿ ಸಮಸ್ಯೆಗೆ ಸಂಬಂಧಿಸಿದಂತೆ ಬೇಲೂರು, ಮೂಡಿಗೆರೆ, ಕಳಸ ಸೇರಿದಂತೆ ವಿವಿಧ ಭಾಗಗಳಲ್ಲಿ ಸಂಘದ ವತಿಯಿಂದ ಹೋರಾಟ ನಡೆಸಿದ ಪರಿಣಾಮ ಜಮೀನುಗಳನ್ನು ಒತ್ತುವರಿ ಲೀಸ್‌ಗೆ ನೀಡುವ ಯೋಜನೆ ರೂಪುಗೊಂಡಿದೆ. ಬೆಳೆಗಾರರ ಸಮಸ್ಯೆಗಳಿಗೆ ಪರಿಹಾರ ದೊರೆಯುವವರೆಗೆ ಸಂಘ ನಿರಂತರವಾಗಿ ಹೋರಾಟ ನಡೆಸಲಿದೆ ಎಂದು ಹೇಳಿದರು.

ಪರಿಸರ ಸಂರಕ್ಷಣೆಗೆ ಆದ್ಯತೆ :-

ಕಾಫಿ ಬೆಳೆಗಾರರು ಸಾವಿರಾರು ಗಿಡಗಳನ್ನು ನೆಟ್ಟು, ನೂರಾರು ಕೆರೆಗಳನ್ನು ನಿರ್ಮಿಸುವ ಮೂಲಕ ಪರಿಸರ ಸಂರಕ್ಷಣೆಗೆ ಮಹತ್ವದ ಕೊಡುಗೆ ನೀಡಿದ್ದಾರೆ. ಹಾಗಾಗಿ ನಾವು ಕಸ್ತೂರಿ ರಂಗನ್ ವರದಿಯನ್ನು ಬಹಿಷ್ಕರಿಸಬೇಕು.ಮುಂದಿನ ದಿನಗಳಲ್ಲಿ ಗ್ರಾಮ ಪಂಚಾಯಿತಿ ಮಟ್ಟದಲ್ಲಿಯೂ ಪರಿಸರ ಸಂರಕ್ಷಣಾ ಕಾರ್ಯಗಳಿಗೆ ಆದ್ಯತೆ ನೀಡಬೇಕು ಎಂದು ಮಂಜುನಾಥ್ ಶೆಟ್ಟಿ ಹೇಳಿದರು.

ಕೆಜಿಎಫ್ ಮಾಜಿ ಅಧ್ಯಕ್ಷ ಕೃಷ್ಣಪ್ಪ ಮಾತನಾಡಿ, ಬೆಳೆಗಾರರು ತಮ್ಮ ಸಮಸ್ಯೆಗಳ ಕುರಿತು ಸಂಘಕ್ಕೆ ನಿರಂತರವಾಗಿ ಮನವಿ ಸಲ್ಲಿಸುವ ಮೂಲಕ ಒಗ್ಗಟ್ಟು ಪ್ರದರ್ಶಿಸಬೇಕು. ಅರಣ್ಯ ಸಚಿವರು, ಆರ್‌ಎಫ್‌ಒ ಹಾಗೂ ಡಿಎಫ್‌ಒಗಳು ಪದೇಪದೇ ಬದಲಾಗುತ್ತಿರುವುದರಿಂದ ಸಮಸ್ಯೆಗಳು ಮುಂದುವರಿಯುತ್ತಿವೆ. ಆನೆಗಳಿಗೆ ರೇಡಿಯೊ ಕಾಲರ್ ಅಳವಡಿಸುವುದರಿಂದ ಮಾತ್ರ ಸಮಸ್ಯೆ ಪರಿಹಾರವಾಗುವುದಿಲ್ಲ. ಬೆಳೆಗಾರರು ಒಗ್ಗಟ್ಟಾಗಿ ಹೋರಾಟ ನಡೆಸಿದರೆ ಸಂಘದಿಂದ ಸಂಪೂರ್ಣ ಸಹಕಾರ ನೀಡಲಾಗುವುದು. ಬೆಳೆಗಾರರ ಜ್ವಲಂತ  ಸಮಸ್ಯೆಗಳಿಗೆ ಕಾನೂನು ಪ್ರಕಾರ ಶಾಶ್ವತ ಪರಿಹಾರಕ್ಕೆ ಮುಂದಾಗಬೇಕು ಇದಕ್ಕೆ ಹಣಕಾಸಿನ ನೆರವನ್ನು ಸಂಘದ ಎಲ್ಲಾ ಅಂಗ ಸಂಸ್ಥೆಗಳು ನೀಡಬೇಕು. ಎಂದರು.

ಕೆಜಿಎಫ್ ಉಪಾಧ್ಯಕ್ಷ ಬೆಕ್ಕನಹಳ್ಳಿ ನಾಗರಾಜ್ ಮಾತನಾಡಿ, ಸರ್ಫೇಸಿ ಕಾಯ್ದೆಯಿಂದ ಕಾಫಿ ಬೆಳೆಗಾರರಿಗೆ ತೊಂದರೆಯಾಗದಂತೆ ಅವರನ್ನು ಕಾಯ್ದೆಯ ವ್ಯಾಪ್ತಿಯಿಂದ ಹೊರಗಿಡಲು ಹೋರಾಟ ನಡೆಸಲಾಗುತ್ತಿದೆ. ಕಸ್ತೂರಿರಂಗನ್ ವರದಿಗೆ ಸಂಬಂಧಿಸಿದಂತೆ ಗ್ರಾಮ ಪಂಚಾಯಿತಿ ಮಟ್ಟದಿಂದಲೇ ಆಕ್ಷೇಪಣೆ ಸಲ್ಲಿಸುವ ಅಗತ್ಯವಿದೆ. ಕಾಡಾನೆ ಸಮಸ್ಯೆಗೆ ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಸಮನ್ವಯದಿಂದ ಕಾರ್ಯನಿರ್ವಹಿಸಿದಾಗ ಮಾತ್ರ ಶಾಶ್ವತ ಪರಿಹಾರ ಸಾಧ್ಯ ಎಂದರು.

ಬೆಂಗಳೂರು, ಸಕಲೇಶಪುರ ಅಥವಾ ಆದಿಚುಂಚನಗಿರಿ? :-

ಸಭೆಯಲ್ಲಿ 12ನೇ ಅಂತರರಾಷ್ಟ್ರೀಯ ಕಾಫಿ ದಿನಾಚರಣೆಯನ್ನು ಎಲ್ಲಿ ಆಚರಿಸಬೇಕು ಎಂಬ ಬಗ್ಗೆಯೂ ಸುದೀರ್ಘ ಚರ್ಚೆ ನಡೆಯಿತು. ಹೋಬಳಿ ಅಧ್ಯಕ್ಷರು, ನಿರ್ದೇಶಕರು ಹಾಗೂ ಮಹಿಳಾ ಪ್ರತಿನಿಧಿಗಳು ವಿವಿಧ ಸಲಹೆಗಳನ್ನು ನೀಡಿದರು.

ಬೆಂಗಳೂರು, ಸಕಲೇಶಪುರ ಹಾಗೂ ಆದಿಚುಂಚನಗಿರಿಯಲ್ಲಿ ಕಾರ್ಯಕ್ರಮ ಆಯೋಜಿಸುವ ಕುರಿತು ಚರ್ಚೆ ನಡೆಯಿತು. ಕಾಫಿ ಮಂಡಳಿ ವತಿಯಿಂದ ಬೆಂಗಳೂರಿನಲ್ಲಿ ಕಾಫಿ ದಿನಾಚರಣೆ ನಡೆಸುವ ಪ್ರಸ್ತಾಪ ಈಗಾಗಲೇ ಬಂದಿರುವುದರಿಂದ, ಹೆಚ್ಚಿನ ಸಂಖ್ಯೆಯಲ್ಲಿ ಕಾಫಿ ಬೆಳೆಗಾರರು ಭಾಗವಹಿಸುವ ಅವಕಾಶ ದೊರೆಯುವುದರ ಜೊತೆಗೆ ಕಾಫಿಯ ಹೊಸ ತಳಿಗಳ ಬಿಡುಗಡೆ ಸೇರಿದಂತೆ ವಿವಿಧ ಕಾರ್ಯಕ್ರಮಗಳನ್ನು ನಡೆಸಲು ಬೆಂಗಳೂರಿನಲ್ಲಿ ಆಚರಿಸುವುದು ಸೂಕ್ತ ಎಂಬ ಅಭಿಪ್ರಾಯವೂ ವ್ಯಕ್ತವಾಯಿತು.

‘ಕಾಫಿ ಸೇವನೆ ಕಡಿಮೆ ಇರುವ ಪ್ರದೇಶಗಳಲ್ಲಿಯೂ ಕಾಫಿಯ ಬಗ್ಗೆ ಅರಿವು ಮೂಡಿಸುವ ರೀತಿಯಲ್ಲಿ ಕಾಫಿ ದಿನಾಚರಣೆ ನಡೆಯಬೇಕು. ಕಾಫಿಗೆ ಹೆಚ್ಚಿನ ಪ್ರಚಾರ ದೊರೆಯುವಂತಿರಬೇಕು’ ಎಂದು ಎಚ್‌ಡಿಪಿಎ ಮಾಜಿ ಅಧ್ಯಕ್ಷ ಪರಮೇಶ್ ಸಲಹೆ ನೀಡಿದರು.

ಮಹಿಳಾ ಪ್ರತಿನಿಧಿ ನೇತ್ರ ಮಂಜುನಾಥ್ ಮಾತನಾಡಿ, ‘ಆದಿಚುಂಚನಗಿರಿಯಲ್ಲಿ ಕಾರ್ಯಕ್ರಮ ಆಯೋಜಿಸಿದರೆ ಮಠದ ಗುರುಗಳನ್ನು ಆಹ್ವಾನಿಸಬಹುದು. ಇದರಿಂದ ಕಾರ್ಯಕ್ರಮಕ್ಕೆ ಹೆಚ್ಚಿನ ಪ್ರಚಾರ ದೊರೆಯುವ ಸಾಧ್ಯತೆ ಇದೆ’ ಎಂದರು. ನಂದಿನಿ ಹೇದುರ್ಗ ಸೇರಿದಂತೆ ಹಲವು ನಿರ್ದೇಶಕರು ಈ ಸಲಹೆಗೆ ಬೆಂಬಲ ವ್ಯಕ್ತಪಡಿಸಿದರು.

ಇನ್ನೂ ಕೆಲವರು ಬೆಂಗಳೂರಿನಲ್ಲಿ ಕಾರ್ಯಕ್ರಮ ನಡೆಸಿದರೆ ಮುಖ್ಯಮಂತ್ರಿಗಳನ್ನು ಆಹ್ವಾನಿಸುವ ಮೂಲಕ ಹೆಚ್ಚಿನ ಪ್ರಚಾರ ಪಡೆಯಬಹುದು ಎಂಬ ಅಭಿಪ್ರಾಯ ವ್ಯಕ್ತಪಡಿಸಿದರು.

ಎಲ್ಲಾ ಸದಸ್ಯರ ಸಲಹೆಗಳನ್ನು ಆಲಿಸಿದ ಅಧ್ಯಕ್ಷ ಮಂಜುನಾಥ್ ಶೆಟ್ಟಿ, ಮೂರು ಸ್ಥಳಗಳ ಸಾಧಕ–ಬಾಧಕಗಳನ್ನು ಪರಿಶೀಲಿಸಿ, ಮುಂದಿನ ಸಭೆಯಲ್ಲಿ ಕಾಫಿ ದಿನಾಚರಣೆಯ ಅಂತಿಮ ಸ್ಥಳವನ್ನು ನಿರ್ಧರಿಸಲಾಗುವುದು ಎಂದು ತಿಳಿಸಿದರು.

ಸಭೆಯಲ್ಲಿ ಹಿಂದಿನ ಸಭೆಯ ನಡವಳಿಕೆ, ಪ್ರಮುಖ ಪತ್ರವ್ಯವಹಾರಗಳು, ಕೆಜಿಎಫ್ ಮಾಸಿಕ ಸಭೆಯ ಚರ್ಚೆಗಳು ಹಾಗೂ ತೀರ್ಮಾನಗಳು, ಕಂದಾಯ ಮತ್ತು ತೋಟಗಾರಿಕೆ ಇಲಾಖೆಯ ಸೇವೆ–ಸೌಲಭ್ಯಗಳು, ಸರ್ಫೇಸಿ ಕಾಯ್ದೆ, ಕಾಫಿ ದಿನಾಚರಣೆ ಹಾಗೂ ಲೆಕ್ಕಪತ್ರ ಸೇರಿದಂತೆ ವಿವಿಧ ವಿಷಯಗಳ ಕುರಿತು ಚರ್ಚಿಸಲಾಯಿತು.

ಖಜಾಂಚಿ ಅವರು ಸಂಘದ ತಿಂಗಳ ಹಣಕಾಸು ವ್ಯವಹಾರಗಳ ಖರ್ಚು–ವೆಚ್ಚದ ವಿವರ ಮಂಡಿಸಿದರು. ಹೋಬಳಿ ಮಟ್ಟದಿಂದ ನೂತನವಾಗಿ ಆಯ್ಕೆಯಾದ ಮಹಿಳಾ ಪ್ರತಿನಿಧಿಗಳು ಸಭೆಯಲ್ಲಿ ಪರಿಚಯ ಮಾಡಿಕೊಂಡು, ಕಾಡಾನೆ ಹಾವಳಿಗೆ ಶಾಶ್ವತ ಪರಿಹಾರ ಕಲ್ಪಿಸುವಂತೆ ಒತ್ತಾಯಿಸಿದರು.

ಗೌರವ ಕಾರ್ಯದರ್ಶಿ ಹೆಗ್ಗೋವೆ ಪುಟ್ಟರಾಜ್, ಉಪಾಧ್ಯಕ್ಷ ಸಚಿನ್ ಹೆತ್ತೂರು, ಜಂಟಿ ಕಾರ್ಯದರ್ಶಿ ರವಿಕುಮಾರ್ ಎಚ್.ಎ., ಸಂಘಟನಾ ಕಾರ್ಯದರ್ಶಿ ಎಚ್.ಎಂ. ಮಂಜುನಾಥ್ ಸೇರಿದಂತೆ ವಿವಿಧ ತಾಲ್ಲೂಕು ಹಾಗೂ ಹೋಬಳಿ ಮಟ್ಟದ ಪದಾಧಿಕಾರಿಗಳು, ಕಾರ್ಯದರ್ಶಿಗಳು ಮತ್ತು ಸದಸ್ಯರು ಉಪಸ್ಥಿತರಿದ್ದರು.

Related posts

ಬೇಲೂರನ್ನು ಪ್ಲಾಸ್ಟಿಕ್ ಮುಕ್ತ ಮಾಡಲು ಕರೆ

Bimba Prakashana

ಡಾ. ಬಿ ಆರ್ ಅಂಬೇಡ್ಕರ್ ಜನ್ಮ ಜಯಂತಿ

Bimba Prakashana

ಅಕ್ರಮ ಗಾಂಜಾ ಮಾರಾಟ

Bimba Prakashana

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More