🔴ಜಮೀನು ವಿವಾದಕ್ಕೆ ಜಗಳ ವಿಕೋಪ: ಚಾಕು ಇರಿತದಿಂದ ವ್ಯಕ್ತಿ ಸಾವು
🔴ಅಕ್ಕಿ ವಿಚಾರವೂ ಸೇರಿ ಗಲಾಟೆ | ಪ್ರಕರಣ ದಾಖಲು, ಆರೋಪಿ ಬಂಧನ
ಬೇಲೂರು: ತಾಲೂಕಿನ ಸೋಂಪುರ ಗ್ರಾಮದಲ್ಲಿ ಜಮೀನು ವಿವಾದ ಹಾಗೂ ಪಡಿತರ ಅಂಗಡಿಯಿಂದ ಪಡೆದ ಅಕ್ಕಿಗೆ ಸಂಬಂಧಿಸಿದ ವಿಚಾರವಾಗಿ ನಡೆದ ಜಗಳ ವಿಕೋಪಕ್ಕೆ ತಿರುಗಿ ವ್ಯಕ್ತಿಯೊಬ್ಬರು ಚಾಕು ಇರಿತದಿಂದ ಮೃತಪಟ್ಟಿರುವ ಘಟನೆ ಗುರುವಾರ ಸಂಜೆ ನಡೆದಿದೆ.
ಮೃತರನ್ನು ರಘು ಎಂದು ಗುರುತಿಸಲಾಗಿದೆ. ಜಮೀನು ವಿಚಾರ ಹಾಗೂ ಪಡಿತರ ಅಕ್ಕಿಗೆ ಸಂಬಂಧಿಸಿದಂತೆ ಮಾತಿನ ಚಕಮಕಿ ಆರಂಭವಾಗಿ, ಬಳಿಕ ಜಗಳ ತೀವ್ರಗೊಂಡಿದೆ ಎನ್ನಲಾಗಿದೆ.
ಈ ವೇಳೆ ದೇವರಾಜ್ ಎಂಬಾತ ರಘು ಅವರಿಗೆ ಚಾಕುವಿನಿಂದ ಇರಿದಿರುವುದಾಗಿ ಆರೋಪಿಸಲಾಗಿದೆ. ಗಂಭೀರವಾಗಿ ಗಾಯಗೊಂಡ ರಘು ಅವರನ್ನು ಆಸ್ಪತ್ರೆಗೆ ಕರೆದೊಯ್ಯುವ ವೇಳೆ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.
ಘಟನೆಗೆ ಸಂಬಂಧಿಸಿದಂತೆ ದೇವರಾಜ್ ವಿರುದ್ಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಆರಕ್ಷಕ ವೃತ್ತ ನಿರೀಕ್ಷಕ ರೇವಣ್ಣ ಅವರ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸಲಾಗಿದೆ.
ಘಟನೆಯ ನಿಖರ ಕಾರಣ ಹಾಗೂ ಜಗಳಕ್ಕೆ ಕಾರಣವಾದ ವಿಚಾರಗಳ ಕುರಿತು ಪೊಲೀಸರು ತನಿಖೆ ಮುಂದುವರಿಸಿದ್ದಾರೆ. ಪ್ರಕರಣದಲ್ಲಿ ಇನ್ನೂ ಯಾರಾದರೂ ಭಾಗಿಯಾಗಿದ್ದಾರೆಯೇ ಎಂಬ ಬಗ್ಗೆಯೂ ಪರಿಶೀಲನೆ ನಡೆಸಲಾಗುತ್ತಿದೆ.
ಇದೇ ವೇಳೆ ಮೃತ ರಘು ಅವರ ಕುಟುಂಬದ ಕೋಮಲಮಣಿ ಅವರು, ತಮ್ಮ ಕುಟುಂಬಕ್ಕೆ ಹಲವು ವರ್ಷಗಳಿಂದ ಕಿರುಕುಳ ನೀಡಲಾಗುತ್ತಿದೆ ಎಂದು ಆರೋಪಿಸಿದ್ದಾರೆ.
ಈ ಹಿನ್ನೆಲೆಯಲ್ಲಿ ಪ್ರಕರಣವನ್ನು ಸಮಗ್ರವಾಗಿ ತನಿಖೆ ನಡೆಸಿ, ಸತ್ಯಾಸತ್ಯತೆ ಬಹಿರಂಗಪಡಿಸುವುದರ ಜೊತೆಗೆ ಕುಟುಂಬಕ್ಕೆ ನ್ಯಾಯ ಹಾಗೂ ಸೂಕ್ತ ರಕ್ಷಣೆ ನೀಡುವಂತೆ ಪೊಲೀಸರಿಗೆ ಮನವಿ ಮಾಡಿದ್ದಾರೆ.
ಘಟನೆಯಿಂದ ಸೋಂಪುರ ಗ್ರಾಮದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದ್ದು, ಯಾವುದೇ ಅಹಿತಕರ ಘಟನೆ ನಡೆಯದಂತೆ ಪೊಲೀಸರು ಮುನ್ನೆಚ್ಚರಿಕೆ ವಹಿಸಿದ್ದಾರೆ. ಪ್ರಕರಣದ ತನಿಖೆ ಮುಂದುವರಿದಿದೆ.

