ರಾಮದೂತ ಹಿಂದೂ ಮಹಾಗಣಪತಿ ಸಮಿತಿ ಹಾಗೂ ಸಕಲೇಶಪುರ ಗಣಪತಿ ಸಮಿತಿ ಒಕ್ಕೂಟದ ವತಿಯಿಂದ ಇಂದು ಸಕಲೇಶಪುರದ ಲಯನ್ಸ್ ಹಾಲ್‌ನಲ್ಲಿ ಸಕಲೇಶಪುರ ನಗರ ಹಾಗೂ ಸುತ್ತಮುತ್ತಲಿನ ಗ್ರಾಮಗಳ ಗಣಪತಿ ಪ್ರತಿಷ್ಠಾಪನಾ ಸಮಿತಿಗಳ ಸಲಹಾ ಸಭೆಯನ್ನು ಆಯೋಜಿಸಲಾಗಿತ್ತು.
ಸಭೆಯಲ್ಲಿ 35ಕ್ಕೂ ಹೆಚ್ಚು ಗಣಪತಿ ಸಮಿತಿಗಳ ಅಧ್ಯಕ್ಷರು, ಪದಾಧಿಕಾರಿಗಳು ಹಾಗೂ ಸದಸ್ಯರು ಭಾಗವಹಿಸಿ ತಮ್ಮ ಸಲಹೆ ಮತ್ತು ಸೂಚನೆಗಳನ್ನು ನೀಡಿದರು. ಟೌನ್ ಹಾಲ್ ಗಣಪತಿ ಸಮಿತಿಯ ಅಧ್ಯಕ್ಷರಾದ ಶ್ರೀ ಸತೀಶ್ ಹಾಗೂ ಮಾಜಿ ಅಧ್ಯಕ್ಷರಾದ ಶ್ರೀ ರವಿಕುಮಾರ್ ಸೇರಿದಂತೆ ಹಲವು ಪ್ರಮುಖರು ಸಭೆಯಲ್ಲಿ ಉಪಸ್ಥಿತರಿದ್ದರು.
ಗಣಪತಿ ಪ್ರತಿಷ್ಠಾಪನೆ ಹಾಗೂ ವಿಸರ್ಜನೆಯ ಸಂದರ್ಭದಲ್ಲಿ ಯಾವುದೇ ರೀತಿಯ ಗೊಂದಲಗಳು ಉಂಟಾಗದಂತೆ ಎಲ್ಲ ಸಮಿತಿಗಳು ಸಾಮೂಹಿಕವಾಗಿ ಚರ್ಚಿಸಿ, ಸೂಕ್ತ ಸಮಯದಲ್ಲಿ ಒಗ್ಗಟ್ಟಿನ ನಿರ್ಧಾರಗಳನ್ನು ಕೈಗೊಳ್ಳಬೇಕು ಎಂದು ಸಭೆಯಲ್ಲಿ ಸಲಹೆ ನೀಡಲಾಯಿತು.
ರಾಮದೂತ ಹಿಂದೂ ಮಹಾಗಣಪತಿ ಸಮಿತಿಯ ಕಾರ್ಯಕರ್ತರಾದ ರಘು ಸಕಲೇಶಪುರ ಅವರು ಮಾತನಾಡಿ, ಗಣಪತಿ ಪ್ರತಿಷ್ಠಾಪನೆ ಮತ್ತು ಕಾರ್ಯಕ್ರಮಗಳನ್ನು ಅಚ್ಚುಕಟ್ಟಾಗಿ, ಕಡಿಮೆ ಅವಧಿಯಲ್ಲಿ ಹಾಗೂ ಹಿಂದೂ ಸಂಸ್ಕೃತಿ ಮತ್ತು ಪರಂಪರೆಯನ್ನು ಬಿಂಬಿಸುವ ರೀತಿಯಲ್ಲಿ ನಡೆಸಬೇಕು. ವಿಸರ್ಜನಾ ಸಂದರ್ಭದಲ್ಲಿ ಪೊಲೀಸ್ ಇಲಾಖೆ ನೀಡುವ ಎಲ್ಲಾ ಸೂಚನೆಗಳನ್ನು ಸಮಿತಿಗಳು ಕಡ್ಡಾಯವಾಗಿ ಪಾಲಿಸಬೇಕು ಎಂದು ತಿಳಿಸಿದರು.
ಸಣ್ಣ ಗಣಪತಿ ಸಮಿತಿಗಳಿಗೆ ಸಿಸಿಟಿವಿ ಸೇರಿದಂತೆ ಪೊಲೀಸ್ ಇಲಾಖೆಯ ಕೆಲವು ನಿಯಮಗಳನ್ನು ಪಾಲಿಸುವ ಸಂದರ್ಭದಲ್ಲಿ ಎದುರಾಗಬಹುದಾದ ಸಮಸ್ಯೆಗಳ ಕುರಿತು ಕೂಡ ಸಭೆಯಲ್ಲಿ ಚರ್ಚಿಸಲಾಯಿತು. ಈ ಕುರಿತು ಪೊಲೀಸ್ ಇಲಾಖೆಯ ಸಲಹೆ ಮತ್ತು ಮಾರ್ಗದರ್ಶನ ಪಡೆದು ಸೂಕ್ತ ನಿರ್ಧಾರ ಕೈಗೊಳ್ಳಲು ಸಮಿತಿಗಳು ಒಮ್ಮತಕ್ಕೆ ಬಂದವು.
ಟೌನ್ ಹಾಲ್ ಗಣಪತಿ ಸಮಿತಿಯ ಅಧ್ಯಕ್ಷರಾದ ಶ್ರೀ ಸತೀಶ್ ಅವರು ಮಾತನಾಡಿ, ಇಂತಹ ಸಲಹಾ ಸಭೆ ಅತ್ಯಂತ ಅಗತ್ಯವಾಗಿತ್ತು. ತಾಲೂಕು ಹಾಗೂ ಜಿಲ್ಲಾ ಕೇಂದ್ರಗಳಲ್ಲಿ ಗಣಪತಿ ಸಮಿತಿಗಳು ಒಗ್ಗಟ್ಟಿನಿಂದ ಕಾರ್ಯನಿರ್ವಹಿಸಿದರೆ, ಯಾವುದೇ ರೀತಿಯ ಸಮಸ್ಯೆಗಳನ್ನು ಪರಿಹರಿಸಿಕೊಳ್ಳುವುದರ ಜೊತೆಗೆ ಗಣಪತಿ ಸಮಿತಿಗಳ ಮೇಲೆ ಅನಗತ್ಯ ಒತ್ತಡ ಬೀಳದಂತೆ ನೋಡಿಕೊಳ್ಳಬಹುದು ಎಂದು ಅಭಿಪ್ರಾಯಪಟ್ಟರು.
ಈ ಸಂದರ್ಭದಲ್ಲಿ ಶ್ರೀ ರವಿಕುಮಾರ್ ಅವರು ಕೂಡ ಹಲವು ಮಹತ್ವದ ಸಲಹೆಗಳನ್ನು ನೀಡಿದರು.
ರಾಮದೂತ ಹಿಂದೂ ಮಹಾಗಣಪತಿ ಸಮಿತಿಯ ಕಾರ್ಯದರ್ಶಿ ಶ್ರೀ ಮಂಜುನಾಥ್ ಅವರು ಮಾತನಾಡಿ, ಸೆಪ್ಟೆಂಬರ್ 14 ರಿಂದ 20ರವರೆಗೆ ನಡೆಯುವ ರಾಮದೂತ ಹಿಂದೂ ಮಹಾಗಣಪತಿ ಕಾರ್ಯಕ್ರಮಗಳು ಹಾಗೂ ಸೆಪ್ಟೆಂಬರ್ 20ರಂದು ನಡೆಯುವ ವಿಸರ್ಜನಾ ಕಾರ್ಯಕ್ರಮಕ್ಕೆ ಎಲ್ಲಾ ಗಣಪತಿ ಸಮಿತಿಗಳು ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.
previous post
