🔴ಗ್ರಾಮಗಳ ಅಭಿವೃದ್ಧಿಗೆ ಒತ್ತು: ಬಾಗೆಯಲ್ಲಿ ಅರ್ಥಪೂರ್ಣ ಗ್ರಾಮ ಸಭೆ
ಸಕಲೇಶಪುರ: ತಾಲೂಕಿನ ಬಾಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ 2026–27ನೇ ಸಾಲಿನ ಗ್ರಾಮ ಸಭೆಯನ್ನು ಗುರುವಾರ ಆಡಳಿತಾಧಿಕಾರಿ ಪ್ರಕಾಶ್ ಕುಮಾರ್ ಯು.ಎಂ. ಅವರ ಅಧ್ಯಕ್ಷತೆಯಲ್ಲಿ, ನೋಡಲ್ ಅಧಿಕಾರಿ ಪ್ರಕೃತಿ ಅವರ ಸಮ್ಮುಖದಲ್ಲಿ ಅರ್ಥಪೂರ್ಣವಾಗಿ ನಡೆಸಲಾಯಿತು.
ಸಭೆಯಲ್ಲಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ವಿವಿಧ ಗ್ರಾಮಗಳ ಸಾರ್ವಜನಿಕರು, ಗ್ರಾಮಸ್ಥರು ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಭಾಗವಹಿಸಿ, ಗ್ರಾಮಗಳ ಅಭಿವೃದ್ಧಿ ಹಾಗೂ ಸಾರ್ವಜನಿಕ ಸಮಸ್ಯೆಗಳ ಕುರಿತು ಸುದೀರ್ಘವಾಗಿ ಚರ್ಚಿಸಿದರು.
ಗ್ರಾಮಸ್ಥರು ತಮ್ಮ ವ್ಯಾಪ್ತಿಯಲ್ಲಿರುವ ಕುಡಿಯುವ ನೀರು, ರಸ್ತೆ, ಚರಂಡಿ, ವಿದ್ಯುತ್, ಸ್ವಚ್ಛತೆ, ಸಾರ್ವಜನಿಕ ಆರೋಗ್ಯ ಹಾಗೂ ಶಿಕ್ಷಣ ಸೇರಿದಂತೆ ವಿವಿಧ ಮೂಲಭೂತ ಸೌಕರ್ಯಗಳ ಸಮಸ್ಯೆಗಳನ್ನು ಸಭೆಯ ಗಮನಕ್ಕೆ ತಂದರು. ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಲ್ಪಿಸುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಮನವಿ ಮಾಡಿದರು.
ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ನಡೆಯುತ್ತಿರುವ ವಿವಿಧ ಅಭಿವೃದ್ಧಿ ಕಾಮಗಾರಿಗಳ ಪ್ರಗತಿ, ಮುಂದಿನ ದಿನಗಳಲ್ಲಿ ಕೈಗೊಳ್ಳಬೇಕಾದ ಅಗತ್ಯ ಕಾಮಗಾರಿಗಳು ಹಾಗೂ ಸರ್ಕಾರದ ವಿವಿಧ ಯೋಜನೆಗಳ ಸೌಲಭ್ಯಗಳನ್ನು ಅರ್ಹ ಫಲಾನುಭವಿಗಳಿಗೆ ತಲುಪಿಸುವ ಕುರಿತು ಅಧಿಕಾರಿಗಳು ಮಾಹಿತಿ ನೀಡಿದರು.
ಗ್ರಾಮಗಳ ಸಮಗ್ರ ಅಭಿವೃದ್ಧಿಗೆ ಸಾರ್ವಜನಿಕರ ಸಹಕಾರ ಅತ್ಯಗತ್ಯ. ಗ್ರಾಮಸ್ಥರು ಗ್ರಾಮ ಸಭೆಗಳಲ್ಲಿ ಸಕ್ರಿಯವಾಗಿ ಪಾಲ್ಗೊಂಡು ತಮ್ಮ ಸಮಸ್ಯೆಗಳು ಹಾಗೂ ಸಲಹೆಗಳನ್ನು ಮುಕ್ತವಾಗಿ ಮಂಡಿಸಬೇಕು ಎಂದು ಆಡಳಿತಾಧಿಕಾರಿ ಪ್ರಕಾಶ್ ಮನವಿ ಮಾಡಿದರು. ಸಭೆಯಲ್ಲಿ ಸಾರ್ವಜನಿಕರಿಂದ ವ್ಯಕ್ತವಾದ ಬೇಡಿಕೆ ಹಾಗೂ ಸಲಹೆಗಳನ್ನು ಪರಿಶೀಲಿಸಿ, ನಿಯಮಾನುಸಾರ ಅಗತ್ಯ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.
ಸಭೆಯಲ್ಲಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಜೈಪ್ರಕಾಶ್, ತಾಲೂಕು ಪಂಚಾಯಿತಿ ಸಹಾಯಕ ನಿರ್ದೇಶಕ ಆದಿತ್ಯ, ವಿವಿಧ ಇಲಾಖೆಗಳ ಅಧಿಕಾರಿಗಳು, ವೈದ್ಯಾಧಿಕಾರಿಗಳು, ಅಂಗನವಾಡಿ ಹಾಗೂ ಆಶಾ ಕಾರ್ಯಕರ್ತೆಯರು, ಸಂಜೀವಿನಿ ಒಕ್ಕೂಟದ ಸದಸ್ಯರು, ಮಾಜಿ ಜನಪ್ರತಿನಿಧಿಗಳು, ಪಂಚಾಯಿತಿ ಸಿಬ್ಬಂದಿ ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.
previous post
next post
