ಅ.1ರಂದು ಕಾಫಿ ದಿನಾಚರಣೆ: ಹೆಚ್ಚಿನ ಸಂಖ್ಯೆಯಲ್ಲಿ ಬೆಳೆಗಾರರು ಪಾಲ್ಗೊಳ್ಳಿ
ಇಂದು ಬೆಳಿಗ್ಗೆ 9ರಿಂದ ಸಂಜೆ 4ರವರೆಗೆ ಕಾರ್ಯಕ್ರಮ | 30ಕ್ಕೂ ಹೆಚ್ಚು ಮಳಿಗೆಗಳು | 8 ಸಾವಿರ ಕಪ್ ಉಚಿತ ಕಾಫಿ ವಿತರಣೆ
ಸಕಲೇಶಪುರ: ರಾಷ್ಟ್ರೀಯ ಹೆದ್ದಾರಿ 75ರ ದಿ ಒಸ್ಸೂರು ಹೋಟೆಲ್ ಸಮೀಪ ಇಂದು (ಅ.1) ಬೆಳಿಗ್ಗೆ 9ರಿಂದ ಸಂಜೆ 4ರವರೆಗೆ 12ನೇ ಅಂತಾರಾಷ್ಟ್ರೀಯ ಕಾಫಿ ದಿನಾಚರಣೆ ನಡೆಯಲಿದೆ. 30ಕ್ಕೂ ಹೆಚ್ಚು ಕೃಷಿ ಹಾಗೂ ಕಾಫಿ ಕ್ಷೇತ್ರದ ಮಳಿಗೆಗಳು, ನಾಲ್ಕು ವಿಭಾಗಗಳಲ್ಲಿ 8 ಸಾವಿರ ಕಪ್ ಉಚಿತ ಕಾಫಿ ವಿತರಣೆ ಹಾಗೂ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ.
ಜಿಲ್ಲೆಯ ಕಾಫಿ ಬೆಳೆಗಾರರು ಕುಟುಂಬ ಸಮೇತರಾಗಿ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಕಾಫಿ ದಿನಾಚರಣೆಯನ್ನು ಯಶಸ್ವಿಗೊಳಿಸಬೇಕು ಎಂದು ಹಾಸನ ಜಿಲ್ಲಾ ಬೆಳೆಗಾರರ ಸಂಘದ ಅಧ್ಯಕ್ಷ ಮಂಜುನಾಥ್ ಶೆಟ್ಟಿ ಮನವಿ ಮಾಡಿದ್ದಾರೆ.
ಕಾಫಿ ಕ್ಷೇತ್ರದ ಪ್ರಸ್ತುತ ಸ್ಥಿತಿ, ಬೆಳೆಗಾರರ ಸಮಸ್ಯೆಗಳು, ಆಧುನಿಕ ತಂತ್ರಜ್ಞಾನ ಹಾಗೂ ಭವಿಷ್ಯದ ಅವಕಾಶಗಳ ಕುರಿತು ವಿಚಾರ ವಿನಿಮಯಕ್ಕೆ ಕಾರ್ಯಕ್ರಮ ವೇದಿಕೆಯಾಗಲಿದೆ. ಕೃಷಿ ಪರಿಕರಗಳು, ಯಂತ್ರೋಪಕರಣಗಳು, ನೀರಾವರಿ ವ್ಯವಸ್ಥೆ ಹಾಗೂ ಕಾಫಿ ಸಂಸ್ಕರಣಾ ತಂತ್ರಜ್ಞಾನಗಳ ಪ್ರದರ್ಶನವೂ ಇರಲಿದೆ ಎಂದು ಅವರು ತಿಳಿಸಿದ್ದಾರೆ.

