Blog

ಹೋಟೆಲ್ ಮೇಲೆ ಆಹಾರ ಇಲಾಖೆ ದಾಳಿ

🔴ಬೇಲೂರಿನ ಉಡುಪಿ ಗ್ರಾಂಡ್ ಹೋಟೆಲ್ ಮೇಲೆ ಆಹಾರ ಇಲಾಖೆ ದಾಳಿ: ಗೃಹಬಳಕೆಯ ಎರಡು ಸಿಲಿಂಡರ್‌ ವಶಕ್ಕೆ

🔴ವಾಣಿಜ್ಯ ಉದ್ದೇಶಕ್ಕೆ ಗೃಹಬಳಕೆಯ ಅನಿಲ ಬಳಕೆ ಆರೋಪ; ಹೋಟೆಲ್ ಮಾಲೀಕರ ವಿರುದ್ಧ ಪ್ರಕರಣ ದಾಖಲಿಸಲು ಕ್ರಮ**

ಬೇಲೂರು:ಪಟ್ಟಣದ ನೆಹರು ನಗರ ವೃತ್ತದಲ್ಲಿರುವ ಉಡುಪಿ ಗ್ರಾಂಡ್ ಹೋಟೆಲ್ ಮೇಲೆ ಆಹಾರ ಇಲಾಖೆ ಅಧಿಕಾರಿಗಳು ದಿಢೀರ್ ದಾಳಿ ನಡೆಸಿ, ವಾಣಿಜ್ಯ ಉದ್ದೇಶಕ್ಕೆ ಬಳಸಲಾಗುತ್ತಿದ್ದ ಗೃಹಬಳಕೆಯ ಅನಿಲ ಸಿಲಿಂಡರ್‌ಗಳನ್ನು ವಶಪಡಿಸಿಕೊಂಡಿದ್ದಾರೆ.

ಹೋಟೆಲ್‌ನಲ್ಲಿ ಗೃಹಬಳಕೆಯ ಸಿಲಿಂಡರ್‌ಗಳನ್ನು ಅಕ್ರಮವಾಗಿ ಬಳಸಲಾಗುತ್ತಿದೆಯೇ ಎಂಬ ಕುರಿತು ಪರಿಶೀಲನೆ ನಡೆಸಿದ ಅಧಿಕಾರಿಗಳು, ನಿಯಮ ಉಲ್ಲಂಘನೆ ಕಂಡುಬಂದ ಹಿನ್ನೆಲೆಯಲ್ಲಿ ಕ್ರಮ ಕೈಗೊಂಡಿದ್ದಾರೆ.

ಆಹಾರ ಇಲಾಖೆ ಆಹಾರ ನಿರೀಕ್ಷಕಿ ವೀಣಾ ಹಾಗೂ ಆಹಾರ ಶಿರಸ್ತೇದಾರ್ ಗೀತಾಂಜಲಿ ಅವರು ಬೇಲೂರು ಪೊಲೀಸ್ ಠಾಣೆಯ ಸಿಬ್ಬಂದಿ ಉಮೇಶ್ ಕೆ.ಆರ್. ಅವರ ಸಹಯೋಗದೊಂದಿಗೆ ಈ ದಾಳಿ ನಡೆಸಿದರು. ನೆಹರು ನಗರ ವೃತ್ತದಲ್ಲಿರುವ ಹೋಟೆಲ್‌ಗೆ ದಿಢೀರ್ ಭೇಟಿ ನೀಡಿ, ಅಡುಗೆ ಕಾರ್ಯಕ್ಕೆ ಬಳಸುತ್ತಿದ್ದ ಅನಿಲ ಸಿಲಿಂಡರ್‌ಗಳ ಕುರಿತು ಪರಿಶೀಲನೆ ನಡೆಸಿದರು.

ಪರಿಶೀಲನೆಯ ಸಂದರ್ಭದಲ್ಲಿ 14.2 ಕೆ.ಜಿ. ತೂಕದ ಎಚ್‌ಪಿ ಕಂಪನಿಯ ಒಂದು ಖಾಲಿ ಸಿಲಿಂಡರ್ ಹಾಗೂ ಒಂದು ತುಂಬಿದ ಸಿಲಿಂಡರ್ ಸೇರಿದಂತೆ ಒಟ್ಟು ಎರಡು ಗೃಹಬಳಕೆಯ ಅನಿಲ ಸಿಲಿಂಡರ್‌ಗಳನ್ನು ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಗೃಹಬಳಕೆಗೆ ಮೀಸಲಾದ ಸಿಲಿಂಡರ್‌ಗಳನ್ನು ವಾಣಿಜ್ಯ ಉದ್ದೇಶಕ್ಕೆ ಬಳಸಿರುವ ಆರೋಪದ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ.

ಹೋಟೆಲ್ ಮಾಲೀಕ ಪ್ರಸನ್ನ ಬಿನ್ ನಿರ್ವಾಣೆಗೌಡ ಅವರ ವಿರುದ್ಧ ಕಾನೂನು ಕ್ರಮ ಕೈಗೊಂಡು ಪ್ರಕರಣ ದಾಖಲಿಸಲಾಗುವುದು ಎಂದು ಆಹಾರ ನಿರೀಕ್ಷಕಿ ವೀಣಾ ತಿಳಿಸಿದ್ದಾರೆ. ಗೃಹಬಳಕೆಯ ಅನಿಲ ಸಿಲಿಂಡರ್‌ಗಳನ್ನು ವಾಣಿಜ್ಯ ಚಟುವಟಿಕೆಗಳಿಗೆ ಬಳಸುವುದು ನಿಯಮಬಾಹಿರವಾಗಿದ್ದು, ಇಂತಹ ಉಲ್ಲಂಘನೆಗಳ ಕುರಿತು ಇಲಾಖೆ ನಿಗಾ ವಹಿಸಿದೆ ಎಂದು ಅವರು ಹೇಳಿದರು.

ಹೋಟೆಲ್‌ಗಳು ಹಾಗೂ ಇತರೆ ವಾಣಿಜ್ಯ ಸಂಸ್ಥೆಗಳು ನಿಯಮಾನುಸಾರ ವಾಣಿಜ್ಯ ಅನಿಲ ಸಿಲಿಂಡರ್‌ಗಳನ್ನೇ ಬಳಸಬೇಕು. ಗೃಹಬಳಕೆಯ ಸಿಲಿಂಡರ್‌ಗಳ ದುರ್ಬಳಕೆ ಕಂಡುಬಂದಲ್ಲಿ ಪರಿಶೀಲನೆ ನಡೆಸಿ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ ಎಂದು ಇಲಾಖೆ ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ. ಈ ದಾಳಿಯಿಂದ ಪಟ್ಟಣದ ಹೋಟೆಲ್‌ಗಳಲ್ಲಿ ಅನಿಲ ಬಳಕೆಯ ನಿಯಮಗಳ ಪಾಲನೆಯ ಕುರಿತು ಚರ್ಚೆ ಆರಂಭವಾಗಿದೆ.


ವರದಿ
ಅರುಣ್ ರಾಜಪುತ್

Related posts

ಸರಕಾರಿ ನೌಕರರ ಸಂಘದ ಮಹಾ ಸಭೆ

Bimba Prakashana

ಅಪಘಾತ – ಬೇಲೂರು ಹಾಗೂ ಚಿಕ್ಕಮಗಳೂರುವಿನ ಹಲವರು ಮೃತ್ಯು

Bimba Prakashana

ಆಲೂರು ಯುವಕ ಕರಡಿ ಬೆಟ್ಟ ರಸ್ತೆಯಲ್ಲಿ ಮೃತ್ಯು

Bimba Prakashana

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More