ಮಲೆನಾಡಿನ ರೈತರು ಕಾಡಾನೆ ಹಾವಳಿ,ಅತಿವೃಷ್ಟಿ, ಅನಾವೃಷ್ಟಿಯಂತಹ ಸಮಸ್ಯೆಗಳನ್ನು ಎದುರಿಸುತ್ತಿದ್ದು ಈ ಸಮಸ್ಯೆ ಪರಿಹಾರಕ್ಕಾಗಿ ರಾಜ್ಯ ಸರ್ಕಾರ ಹಾಗೂ ಕೇಂದ್ರ ಸರ್ಕಾರ ಪ್ರಯತ್ನ ಆರಂಭಿಸಿ ರೈತರಿಗೆ ಸಹಕಾರ ನೀಡುವ ಕಾರ್ಯ ಮಾಡಬೇಕು ಎಂದು ಶಾಸಕರಾದ ಸಿಮೆಂಟ್ ಮಂಜುನಾಥ್ ನುಡಿದರು.
ಕರ್ನಾಟಕ ಗ್ರೋವರ್ಸ್ ಫೆಡರೇಶನ್ (ರಿ ) ಹಾಗೂ ಹಾಸನ ಜಿಲ್ಲಾ ಪ್ಲಾಂಟರ್ಸ್ ಸಂಘ(ರಿ) ವತಿಯಿಂದ 11ನೇ ಅಂತಾರಾಷ್ಟ್ರೀಯ ಕಾಫಿ ದಿನಾಚರಣೆಯು ಸಕಲೇಶಪುರ ಆನೆಮಹಲ್ ಬಳಿಯ ನಾಡಪ್ರಭು ಕೆಂಪೇಗೌಡರ ಪ್ರತಿಮೆಯ ಮುಂದೆ ನಿರ್ಮಾಣ ಮಾಡಿದ್ದ ಪದ್ಮಭೂಷಣ ಡಾ. ಎಸ್ ಎಲ್ ಭೈರಪ್ಪ ವೇದಿಕೆಯಲ್ಲಿ ಹಮ್ಮಿಕೊಳ್ಳಲಾಗಿತ್ತು.
ಕಾಫಿ ಗಿಡದಿಂದ ಕಾಫಿ ಹಣ್ಣನ್ನು ತೆಗೆಯುವ ಮೂಲಕ ಕಾರ್ಯಕ್ರಮ ಉದ್ಘಾಟನೆ ಮಾಡಲಾಯಿತು.
ಬಳಿಕ ಮಾತನಾಡಿದ ಶಾಸಕರು ಮಲೆನಾಡು ರೈತರು ಕಾಡಾನೆ ಹಾವಳಿಯಿಂದ ಭತ್ತವನ್ನು ಬೆಳೆಯುವದನ್ನೆ ಬಿಟ್ಟಿದ್ದಾರೆ. ಅಲ್ಲದೆ ಅತಿ ಹೆಚ್ಚು ಮಳೆಯಿಂದ ಶೇಕಡ 70ರಷ್ಟು ಕಾಫಿ ನೆಲಕಚ್ಚಿದೆ. ಅಧಿವೇಶನ ದಲ್ಲಿ ಈ ಬಗ್ಗೆ ಕಂದಾಯ ಸಚಿವರಲ್ಲಿ ಪ್ರಸ್ತಾಪ ಮಾಡಿದ್ದೇನೆ ಎಂದರು.
ಕಾಫಿ ಬೆಳೆ ನಮ್ಮ ನಾಡಿನ ಸಂಸ್ಕೃತಿ.ಎಷ್ಟೇ ಸಮಸ್ಯೆಯಾದರೂ ಕೂಡ ಇದನ್ನು ನಾವು ಬೆಳೆಯುವುದನ್ನು ಬಿಡುತ್ತಿಲ್ಲ ಹೀಗಾಗಿ ಈ ಸಮಸ್ಯೆ ಪರಿಹಾರ ಕ್ಕಾಗಿ ಎರಡೂ ಸರಕಾರ ಗಳು ಪ್ರಯತ್ನ ಮಾಡಲಿ ಎಂದರು.
ಅರಣ್ಯ ಇಲಾಖೆಯವರು ಅನವಶ್ಯಕವಾಗಿ ಸೆಕ್ಷನ್ 4 ಹೆಸರಿನಲ್ಲಿ ಬೆಳೆಗಾರರಿಗೆ ತೊಂದರೆ ಕೊಡುತ್ತಿದ್ದಾರೆ.
ಎಂದ ಶಾಸಕರು ಈ ಭಾಗದ ಕಾಫಿ ಬೆಳೆಗಾರರು ಅರಣ್ಯಕ್ಕೆ ಹೆಚ್ಚು ಕೊಡುಗೆಯನ್ನು ಕೊಟ್ಟಿದ್ದಾರೆ. ಮುಂದಿನ ದಿನಗಲ್ಲಿ ಬೆಳೆಗಾರರಿಗೆ ಒಂದು ಭವನ ಕಟ್ಟುವುದಕ್ಕೆ ಸಂಪೂರ್ಣ ಸಹಕಾರ ಕೊಡುವುದಾಗಿ ಈ ಸಂದರ್ಭದಲ್ಲಿ ಭರವಸೆ ನೀಡಿದರು.
ಮುಖ್ಯ ಅತಿಥಿಯಾಗಿ ಬೆಂಗಳೂರು ಬಿ ಬಿ.ಎಂ.ಪಿ ವೈದ್ಯಾಧಿಕಾರಿಗಳಾದ ಸುಪ್ರಿತ ಗೌಡ ಮಾತನಾಡಿ ಚಿಕೋರಿ ಇಲ್ಲದ ಕಾಫಿ ಕುಡಿಯುವ ಮೂಲಕ ಅರೋಗ್ಯ ವೃದ್ಧಿ ಮಾಡಿಕೊಳ್ಳಬವುದು. ಪ್ರತಿನಿತ್ಯ 2ರಿಂದ 3 ಕಪ್ ಕಾಫಿ ಕುಡಿಯುವ ಮೂಲಕ ಹೃದಯ ರೋಗ, ಮರೆವು ಕಾಯಿಲೆ, ಫ್ಯಾಟಿ ಲಿವರ್ ಸಮಸ್ಯೆ ಕಡಿಮೆ ಮಾಡಬವುದು. ಅಲ್ಲದೆ ಶೇಕಡ 18% ಹೃದಯ ಅಪಘಾತ ತಪ್ಪಿಸಬಹುದೆಂದು 2015-18 ರಲ್ಲಿ ನಡೆಸಿದ ಒಂದು ಸಂಶೋಧನೆ ಸಂಸ್ಥೆಯಿಂದ ತಿಳಿದು ಬಂದಿದೆ ಎಂದರು.
ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಚಲನಚಿತ್ರ ಹಿರಿಯ ನಟ ದೊಡ್ಡಣ್ಣ ಮಾತನಾಡುತ್ತಾ ನಾವು ಬೆಳಗ್ಗೆ ಎದ್ದ ಕೂಡಲೆ ಕಾಫಿಯನ್ನು ಕುಡಿಯುವುದರೊಂದಿಗೆ ನಮ್ಮ ದೈನಂದಿನ ಜೀವನದ ಚಟುವಟಿಕೆಯನ್ನು ಪ್ರಾರಂಭಿಸುತ್ತೇವೆ. ಅಷ್ಟರಮಟ್ಟಿಗೆ ನಾವು ಕಾಫಿಯೊಂದಿಗೆ ಬೆರೆತು ಹೋಗಿದ್ದೇವೆ. ಇಂತಹ ಕಾಫಿಯನ್ನು ಬೆಳೆಯುವ ಬೆಳೆಗಾರರು ಯಾವಗಲು ಸಮಸ್ಯೆಗಳಿಂದ ಮುಕ್ತರಾಗಿ ನೆಮ್ಮದಿಯಿಂದ,ಖುಷಿಯ ಜೀವನವನ್ನು ಸಾಗಿಸಬೇಕು. ಎಂದರು
ಕೆ.ಜಿ.ಎಫ್ ಪ್ರಧಾನ ಕಾರ್ಯದರ್ಶಿ ಸುರೇಂದ್ರ ಪ್ರಸ್ತಾವನೆ ಮಾಡಿ ದೇಶದ ಆದಾಯದ ಬೊಕ್ಕಸಕ್ಕೆ 1500 ಕೋಟಿ, ಹಾಗೂ ಲಕ್ಷಾಂತರ ಜನರಿಗೆ ಉದ್ಯೋಗ ಜೊತೆಗೆ ಜೀವನವನ್ನು ಕಟ್ಟಿಕೊಟ್ಟಿರುವ ಈ ಕಾಫಿ ಉದ್ಯಮಕ್ಕೆ ಜಾಗತಿಕ ಮಟ್ಟದಲ್ಲಿ ತನ್ನದೇ ಆದಂತಹ ವೇದಿಕೆಯನ್ನು ಸೃಷ್ಟಿ ಮಾಡಿಕೊಳ್ಳಬೇಕು. ಈಗಾಗಲೆ ಕಾಫಿ ನೆರಳಿನಲ್ಲಿ ಬೆಳೆಯುವ ಭಾರತದ ಕಾಫಿಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಬೇಡಿಕೆ ಬಂದಿದೆ. ಮುಂದಿನ ದಿನಗಳಲ್ಲಿ ಇದನ್ನು ಉಳಿಸಿ ಮುಂದಿನ ತಲೆಮಾರಿಗೆ ಹಸ್ತಾಂತರ ಮಾಡುವುದಕ್ಕೆ ಈ ತರಹ ಕಾರ್ಯಕ್ರಮ ಅರ್ಥಪೂರ್ಣವಾಗಿ ಆಚರಿಸಬೇಕಿದೆ. ಎಂದರು.
ಸಭ ಕಾರ್ಯಕ್ರಮಕ್ಕೂ ಮುಂಚೆ ಶ್ರೀ ಸಕಲೇಶ್ವರಸ್ವಾಮಿ ದೇವಸ್ಥಾನದಿಂದ ಶ್ರೀ ಬಸವೇಶಪುತ್ಥಳಿಯವರೆಗೆ “ಕಾಫಿ ವಿಥ್ ವಾಕ್” ಎಂಬ ಹೆಸರಿನಲ್ಲಿ ನೂರಾರು ಕಾಫಿ ಬೆಳೆಗಾರರು ಕಾಲ್ನಡಿಗೆ ಜಾಥಾ ನಡೆಸಿದರು.
ಇದರಲ್ಲಿ ಯೋಧರು ಕೂಡ ಭಾಗವಹಿಸಿದ್ದು ವಿಶೇಷವಾಗಿತ್ತು. ಇಳಿ ವಯಸ್ಸಿನಲ್ಲೂ ಕೃಷಿ ಚಟುವಟಿಕೆಯಲ್ಲಿ ಸತಾತವಾಗಿ ತೊಡಗಿಸಿಕೊಡಿರುವ ಜೊತೆಗೆ ಸಾಮಾಜಿಮುಖ ಕೆಲಸದಲ್ಲಿ ಗುರುತಿಸಿಕೊಂಡಿದ್ದ ಹೆಚ್. ಎಸ್ ರಾಜೇಗೌಡ ಅವರಿಗೆ ಈ ಸಂದರ್ಭದಲ್ಲಿ ಸನ್ಮಾನ ಮಾಡಲಾಯಿತು.ಕಾರ್ಯಕ್ರಮದಲ್ಲಿ ಉಚಿತವಾಗಿ ಪ್ರತಿಯೊಬ್ಬರಿಗೂ ಮೂಕಾಂಬಿಕಾ ಕಾಫಿ ಟ್ರೇಡರ್ಸ್ ವತಿಯಿಂದ ಕಾಫಿಯನ್ನು ನೀಡಿದರು.
ವೇದಿಕೆಯಲ್ಲಿ ಕಿರುಕೊಡ್ಲಿ ಮಠದ ಸದಾಶಿವ ಸ್ವಾಮೀಜಿ,ಹಾಸನ ಜಿಲ್ಲಾ ಪ್ಲಾಂಟರ್ಸ್ ಸಂಘ ಅಧ್ಯಕ್ಷರಾದ ಪರಮೇಶ್, ಮಿಸ್ ಯೂನಿವರ್ಸ್ ಆಫ್ ಕರ್ನಾಟಕರಾದ ಡಾ. ವಂಶಿ ಉದಯ್, ಚಿತ್ರ ನಟ ವಿಶ್ವ ರಾಜ್, ಹಾಸನ ಜಿಲ್ಲಾ ಪ್ಲಾಂಟರ್ಸ್ ಸಂಘ ಕಾರ್ಯದರ್ಶಿ ಕೆ. ಬಿ ಲೋಹಿತ್,ಕೆ. ಜಿ.ಎಪ್. ಉಪಾಧ್ಯಕ್ಷರಾದ ಬೆಕ್ಕನಹಳ್ಳಿ ನಾಗರಾಜ್ ಇದ್ದರು.












