ಬೊಬ್ಬನಹಳ್ಳಿ–ಜಾತಹಳ್ಳಿಯ ಶ್ರೀ ಮಲ್ಲೇಶ್ವರ ಸ್ವಾಮಿ ದರ್ಶನ ಪಡೆದ ಮಾಜಿ ಶಾಸಕ ಹೆಚ್.ಕೆ.ಕುಮಾರಸ್ವಾಮಿ.
ಸಕಲೇಶಪುರ :-ಹೆತ್ತೂರು ಹೋಬಳಿಯ ಬೊಬ್ಬನಹಳ್ಳಿ–ಜಾತಹಳ್ಳಿಯಲ್ಲಿ ಇತಿಹಾಸ ಪ್ರಸಿದ್ಧ ಶ್ರೀ ಮಲ್ಲೇಶ್ವರ ಸ್ವಾಮಿಯ ವಾರ್ಷಿಕ ಜಾತ್ರಾ ಮಹೋತ್ಸವವು ಸಾವಿರಾರು ಭಕ್ತಾದಿಗಳ ಸಮ್ಮುಖದಲ್ಲಿ ಭಕ್ತಿಭಾವ ಹಾಗೂ ಸಂಭ್ರಮದಿಂದ ಅದ್ದೂರಿಯಾಗಿ ನಡೆಯಿತು.
ಈ ಸಂದರ್ಭದಲ್ಲಿ ಮಾಜಿ ಶಾಸಕ ಹೆಚ್.ಕೆ.ಕುಮಾರಸ್ವಾಮಿ ಅವರು ಶ್ರೀ ಮಲ್ಲೇಶ್ವರ ಸ್ವಾಮಿಯ ದರ್ಶನ ಪಡೆದು, ದೇವಸ್ಥಾನ ಸಮಿತಿಯಿಂದ ಗೌರವ ಉಡುಗೊರೆ ಸ್ವೀಕರಿಸಿದರು.
ಬಳಿಕ ಜಾತ್ರೆಗೆ ಆಗಮಿಸಿದ ಭಕ್ತರೊಂದಿಗೆ ಆತ್ಮೀಯವಾಗಿ ಸಂವಾದ ನಡೆಸಿದರು.ಈ ವೇಳೆ ಮಾತನಾಡಿದ ಅವರು, “ಗಾಂಧೀಜಿಯವರ ಕನಸಿನಂತೆ ಪ್ರತಿಯೊಂದು ಗ್ರಾಮ ಅಭಿವೃದ್ಧಿಯಾಗಿದಾಗಲೇ ದೇಶ ಅಭಿವೃದ್ಧಿಯಾಗುತ್ತದೆ. ನನ್ನ ಶಾಸಕತ್ವದ ಅವಧಿಯಲ್ಲಿ ದೊಡ್ಡ–ಚಿಕ್ಕ ಹಳ್ಳಿಗಳೆಂಬ ಬೇಧವಿಲ್ಲದೆ ಅಭಿವೃದ್ಧಿ ಕಾರ್ಯಗಳನ್ನು ಕೈಗೊಂಡಿದ್ದೇವೆ. ಎತ್ತಿನಹೊಳೆ ಯೋಜನೆಯ ಅನುದಾನದಲ್ಲಿ ಸುಮಾರು 360 ಕೋಟಿ ರೂ.ಗಳನ್ನು ಬಳಸಿದ್ದು, ಅದರಲ್ಲಿ ಹೆಚ್ಚಿನ ಮೊತ್ತ ವಳಲಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಬಳಕೆಯಾಗಿದೆ. ಪ್ರತಿಯೊಂದು ಹಳ್ಳಿಗೂ ಸುಮಾರು ಒಂದೊಂದು ಕೋಟಿ ರೂ. ಅನುದಾನದಲ್ಲಿ ರಸ್ತೆ ನಿರ್ಮಿಸಲಾಗಿದೆ” ಎಂದರು.
ಇದೇ ವೇಳೆ ದೇವಸ್ಥಾನದ ಅಭಿವೃದ್ಧಿಗೆ ಅನುದಾನ ನೀಡಿರುವುದಾಗಿ ತಿಳಿಸಿದ ಅವರು, ದೇವಸ್ಥಾನದ ಪಕ್ಕದಲ್ಲಿ ಊಟದ ಹಾಲ್ ನಿರ್ಮಾಣಕ್ಕಾಗಿ ಎಂಎಲ್‌ಸಿ ಸೂರಜ್ ರೇವಣ್ಣ ಅವರಿಗೆ ಮನವಿ ಮಾಡಿದ್ದು, ಅದಕ್ಕೂ ಅನುಮೋದನೆ ದೊರೆತಿದೆ ಎಂದರು. ಮುಂದಿನ ದಿನಗಳಲ್ಲಿ ರೈತರು ಹಾಗೂ ಕಾರ್ಮಿಕರ ಪರ ಹೋರಾಟ ಮುಂದುವರಿಸುವುದಾಗಿ ಹೇಳಿದರು.
ಈ ಸಂದರ್ಭದಲ್ಲಿ ಸಕಲೇಶಪುರ ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ವಳಲಹಳ್ಳಿ ರಾಜೇಗೌಡ, ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಕರಗೂರು ರಮೇಶ್, ಸಮಾಜ ಸೇವಕರಾದ ಉಮೇಶ್, ಟಿವಿ9 ವರದಿಗಾರ ಸುನಿಲ್, ವಳಲಹಳ್ಳಿ ಗ್ರಾಮ ಪಂಚಾಯಿತಿ ಬೆಳೆಗಾರರ ಸಂಘದ ಅಧ್ಯಕ್ಷ ವಿ.ಪಿ ವಿಶ್ವನಾಥ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.
