🔴ಮಕ್ಕಳಲ್ಲಿ ನಾಯಕತ್ವ, ಜಾಗೃತಿ ಮತ್ತು ಪ್ರಶ್ನಿಸುವ ಧೈರ್ಯ ಬೆಳೆಸುವ ವಿನೂತನ ಕಾರ್ಯಕ್ರಮ
ಸಕಲೇಶಪುರ: ಮಕ್ಕಳಲ್ಲಿ ಸಮಾಜದ ಬಗ್ಗೆ ಜಾಗೃತಿ ಮೂಡಿಸಿ, ನಾಯಕತ್ವ ಗುಣಗಳನ್ನು ಬೆಳೆಸುವ ಹಾಗೂ ತಮ್ಮ ಹಕ್ಕುಗಳ ಬಗ್ಗೆ ಅರಿವು ಮೂಡಿಸುವ ಉದ್ದೇಶದಿಂದ ಸಕಲೇಶಪುರ ತಾಲ್ಲೂಕಿನ ಉದೇವಾರ ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ವಿದ್ಯಾರ್ಥಿಗಳಿಂದ ಮಾದರಿ ಯುವ ಗ್ರಾಮಸಭೆ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಉದೇವಾರ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಸಾಹಿತ್ಯ ಮಾತನಾಡಿ, ಗ್ರಾಮಪಂಚಾಯಿತಿ ವ್ಯವಸ್ಥೆಯ ಬಗ್ಗೆ ಮಕ್ಕಳಲ್ಲಿ ಅರಿವು ಮೂಡಿಸುವ ಈ ಕಾರ್ಯಕ್ರಮವು ಅತ್ಯಂತ ಅರ್ಥಪೂರ್ಣವಾಗಿದೆ ಎಂದು ಹೇಳಿದರು.
“ನಾವು ನಡೆಸುವ ಗ್ರಾಮಸಭೆಗಳ ಮಹತ್ವವನ್ನು ಈ ಮಕ್ಕಳು ತಮ್ಮ ಶಿಸ್ತುಬದ್ಧವಾದ ಕಾರ್ಯಕ್ರಮದ ಮೂಲಕ ನೆನಪಿಸಿಕೊಟ್ಟಿದ್ದಾರೆ. ವಿದ್ಯಾರ್ಥಿಗಳು ಕೇಳಿದ ಪ್ರಶ್ನೆಗಳು ಹಾಗೂ ನೀಡಿದ ಉತ್ತರಗಳು ಎಲ್ಲ ಗ್ರಾಮ ಪಂಚಾಯಿತಿಗಳಿಗೆ ಮಾದರಿಯಾಗುವಂತಿವೆ” ಎಂದು ಅಭಿಪ್ರಾಯಪಟ್ಟರು.
ಬಹುತೇಕ ಕಡೆಗಳಲ್ಲಿ ಕೆಲವು ರಾಜಕೀಯ ಹಿತಾಸಕ್ತಿಗಳ ಪರಿಣಾಮವಾಗಿ ಗ್ರಾಮಸಭೆಗಳು ಅರ್ಥಪೂರ್ಣವಾಗಿ ನಡೆಯದೆ ಅರ್ಧದಲ್ಲೇ ಮುಕ್ತಾಯವಾಗುವ ಪರಿಸ್ಥಿತಿ ಕಂಡುಬರುತ್ತಿದೆ. ವೈಯಕ್ತಿಕ ದ್ವೇಷದ ಪ್ರಶ್ನೆಗಳಿಗಿಂತ ಸಮಾಜದ ಅಭಿವೃದ್ಧಿಗೆ ಸಂಬಂಧಿಸಿದ ಪ್ರಶ್ನೆಗಳು ಕೇಳಬೇಕಾಗುತ್ತದೆ. ಈ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಕೇಳಿದ ಪ್ರಶ್ನೆಗಳು ಜನರಿಗೆ ಮಾದರಿಯಾಗಬೇಕು ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಾಲೆಯ ಮುಖ್ಯೋಪಾಧ್ಯಾಯರಾದ ಹೆಚ್.ಏನ್. ಕೃಷ್ಣಮೂರ್ತಿ ಮಾತನಾಡಿ, ಗ್ರಾಮಸ್ಥರ ಸಮಸ್ಯೆಗಳನ್ನು ಅಧಿಕಾರಿಗಳ ಗಮನಕ್ಕೆ ತಂದು ಸ್ಥಳದಲ್ಲಿಯೇ ಪರಿಹಾರ ಕಂಡುಕೊಳ್ಳುವ ವೇದಿಕೆಯೇ ಗ್ರಾಮಸಭೆ ಎಂದು ಹೇಳಿದರು. ವಿದ್ಯಾರ್ಥಿಗಳು ಇಂತಹ ಗ್ರಾಮಸಭೆಯ ಮಾದರಿಯನ್ನು ರೂಪಿಸುವ ಮೂಲಕ ಅಧಿಕಾರಿಗಳನ್ನು ಧೈರ್ಯವಾಗಿ ಪ್ರಶ್ನಿಸುವ ಮನೋಭಾವವನ್ನು ಬೆಳೆಸಿಕೊಳ್ಳುತ್ತಾರೆ. ಇದರಿಂದ ಮುಂದಿನ ದಿನಗಳಲ್ಲಿ ತಮ್ಮ ಪ್ರತಿಭೆಗೆ ತಕ್ಕ ಉದ್ಯೋಗಗಳನ್ನು ಆತ್ಮವಿಶ್ವಾಸದಿಂದ ಎದುರಿಸಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು.
ಸಹ ಶಿಕ್ಷಕರಾದ ಸುಬ್ರಹ್ಮಣ್ಯ ಎಚ್. ಕೆ ಮಾತನಾಡಿ, ಪ್ರತಿಯೊಬ್ಬ ಮತದಾರರೂ ಗ್ರಾಮಸಭೆಯ ಭಾಗವಾಗಿದ್ದು, ಗ್ರಾಮಗಳ ಅಭಿವೃದ್ಧಿಯಲ್ಲಿ ಜನರ ಪಾತ್ರ ಅತ್ಯಂತ ಪ್ರಮುಖವಾಗಿದೆ ಎಂದು ಹೇಳಿದರು. ಕೆಲವು ಕಡೆಗಳಲ್ಲಿ ಗ್ರಾಮಸಭೆಗಳು ವಿಫಲವಾಗುತ್ತಿರುವುದು ದುಃಖಕರ. ಇಂತಹ ಕಾರ್ಯಕ್ರಮಗಳ ಮೂಲಕ ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸಿದರೆ ಗ್ರಾಮಸಭೆಗಳು ಯಶಸ್ವಿಯಾಗಲು ಸಾಧ್ಯ ಎಂದು ಅಭಿಪ್ರಾಯಪಟ್ಟರು.
ಗ್ರಾಮಗಳು ದೇಶದ ಬೆನ್ನೆಲುಬಾಗಿದ್ದು, ಗ್ರಾಮೀಣ ಪ್ರದೇಶದ ಅಭಿವೃದ್ಧಿಗೆ ಮೂಲಭೂತ ಸೌಲಭ್ಯಗಳು ಸಮರ್ಪಕವಾಗಿ ತಲುಪಬೇಕು. ಇತ್ತೀಚೆಗೆ ಉದ್ಯೋಗಕ್ಕಾಗಿ ನಗರಗಳಿಗೆ ವಲಸೆ ಹೋಗುವವರ ಸಂಖ್ಯೆ ಹೆಚ್ಚುತ್ತಿದೆ. ರೈತರಿಗೆ ತಮ್ಮ ಬೆಳೆಗಳಿಗೆ ಸಮರ್ಪಕ ಬೆಲೆ ಸಿಗದಿರುವುದು ಸೇರಿದಂತೆ ಹಲವು ಸಮಸ್ಯೆಗಳು ಎದುರಾಗುತ್ತಿವೆ. ಸರ್ಕಾರದ ವಿವಿಧ ಯೋಜನೆಗಳು ಜನರಿಗೆ ತಲುಪಬೇಕಾದರೆ ಜನರಲ್ಲಿ ಜಾಗೃತಿ ಮೂಡಬೇಕು ಎಂದು ಅವರು ಹೇಳಿದರು.
ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಗ್ರಾಮಸಭೆಯ ಮಾದರಿಯನ್ನು ರೂಪಿಸಿ, ಗ್ರಾಮಾಭಿವೃದ್ಧಿ, ಸ್ವಚ್ಛತೆ, ಶಿಕ್ಷಣ, ಪರಿಸರ ಸಂರಕ್ಷಣೆ ಸೇರಿದಂತೆ ಹಲವು ಪ್ರಮುಖ ವಿಷಯಗಳ ಕುರಿತು ಚರ್ಚೆ ನಡೆಸಿದರು. ವಿದ್ಯಾರ್ಥಿಗಳು ಅಧ್ಯಕ್ಷರು, ಸದಸ್ಯರು ಹಾಗೂ ಸಾರ್ವಜನಿಕರ ಪಾತ್ರಗಳನ್ನು ವಹಿಸಿಕೊಂಡು ಸಮಸ್ಯೆಗಳು ಮತ್ತು ಪರಿಹಾರಗಳ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದರು.
ಮಕ್ಕಳಲ್ಲಿ ಸಾಮಾಜಿಕ ಜವಾಬ್ದಾರಿ ಬೆಳೆಸುವುದು, ತಮ್ಮ ಸಮಸ್ಯೆಗಳನ್ನು ಧೈರ್ಯವಾಗಿ ಹೇಳುವ ಮನೋಭಾವ ಮೂಡಿಸುವುದು ಹಾಗೂ ಪೋಷಕರು ಮತ್ತು ಸಮಾಜವು ಮಕ್ಕಳ ಮಾತುಗಳಿಗೆ ಸ್ಪಂದಿಸುವಂತಹ ವಾತಾವರಣ ನಿರ್ಮಿಸುವುದೇ ಈ ಕಾರ್ಯಕ್ರಮದ ಮುಖ್ಯ ಉದ್ದೇಶವಾಗಿದೆ ಎಂದು ಶಿಕ್ಷಕರು ತಿಳಿಸಿದರು.
ತಾಲ್ಲೂಕಿನ ಹಲವು ಶಾಲೆಗಳ ಪೈಕಿ ಉದೇವಾರ ಸರ್ಕಾರಿ ಪ್ರೌಢಶಾಲೆಯನ್ನು ಮಾದರಿ ಯುವ ಗ್ರಾಮಸಭೆ ನಡೆಸಲು ಆಯ್ಕೆ ಮಾಡಿರುವುದು ಹೆಮ್ಮೆಯ ಸಂಗತಿ ಎಂದು ಶಾಲೆಯ ಶಿಕ್ಷಕರು ಹಾಗೂ ಸಿಬ್ಬಂದಿ ಸಂತೋಷ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು ಸೇರಿದಂತೆ ಶಾಲೆಯ ಶಿಕ್ಷಕರಾದ ಶೆಲ್ವರಾಜ್ ಪಿ., ವೇದಾವತಿ ಹೆಚ್.ಎಸ್., ಹನುಮಪ್ಪ ಸಿದ್ಧಿ, ಸುಮಾ ಉಡುಪ, ವಿದ್ಯಾರ್ಥಿಗಳು ಹಾಗೂ ಗ್ರಾಮಸ್ಥರು ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.
ಕಾರ್ಯಕ್ರಮದ ಮುಖ್ಯ ಉದ್ದೇಶಗಳು
▪ ಮಕ್ಕಳಲ್ಲಿ ನಾಯಕತ್ವ ಹಾಗೂ ಸಾಮಾಜಿಕ ಜವಾಬ್ದಾರಿ ಬೆಳೆಸುವುದು
▪ ಗ್ರಾಮಸಭೆಯ ಮಹತ್ವ ಮತ್ತು ಪಂಚಾಯಿತಿ ವ್ಯವಸ್ಥೆಯ ಬಗ್ಗೆ ಅರಿವು ಮೂಡಿಸುವುದು
▪ ವಿದ್ಯಾರ್ಥಿಗಳಲ್ಲಿ ಪ್ರಶ್ನಿಸುವ ಧೈರ್ಯ ಹಾಗೂ ಆತ್ಮವಿಶ್ವಾಸ ಹೆಚ್ಚಿಸುವುದು
▪ ಗ್ರಾಮಾಭಿವೃದ್ಧಿ, ಸ್ವಚ್ಛತೆ, ಶಿಕ್ಷಣ ಮತ್ತು ಪರಿಸರ ಸಂರಕ್ಷಣೆ ಬಗ್ಗೆ ಜಾಗೃತಿ ಮೂಡಿಸುವುದು
▪ ವಿದ್ಯಾರ್ಥಿಗಳು ಸಮಾಜದ ಸಮಸ್ಯೆಗಳನ್ನು ಅರಿತು ಪರಿಹಾರ ಹುಡುಕುವ ಮನೋಭಾವ ಬೆಳೆಸುವುದು
▪ ಪೋಷಕರು ಮತ್ತು ಸಮಾಜವು ಮಕ್ಕಳ ಅಭಿಪ್ರಾಯಗಳನ್ನು ಗಮನಿಸುವ ವಾತಾವರಣ ನಿರ್ಮಿಸುವುದು
ವಿದ್ಯಾರ್ಥಿಗಳಲ್ಲಿ ಪ್ರಶ್ನಿಸುವ ಧೈರ್ಯ ಮತ್ತು ನಾಯಕತ್ವ ಬೆಳೆದರೆ, ಮುಂದಿನ ದಿನಗಳಲ್ಲಿ ಸಮಾಜಕ್ಕೆ ಉತ್ತಮ ನಾಯಕರು ರೂಪುಗೊಳ್ಳುತ್ತಾರೆ.”
— ಹೆಚ್.ಎನ್. ಕೃಷ್ಣಮೂರ್ತಿ , ಮುಖ್ಯೋಪಾಧ್ಯಾಯರು, ಉದೇವಾರ ಸರ್ಕಾರಿ ಪ್ರೌಢಶಾಲೆ.
