ಸಕಲೇಶಪುರ: ಸಮಾಜಸೇವಕ, ಕೊಡುಗೈ ದಾನಿ ಹಾಗೂ ಉದ್ಯಮಿಯಾಗಿದ್ದ ಬಾಚಹಳ್ಳಿ ಪ್ರತಾಪ್ ಗೌಡ ಅವರ ಅಕಾಲಿಕ ನಿಧನದ ಹಿನ್ನೆಲೆಯಲ್ಲಿ ವಳಲಹಳ್ಳಿ ಗ್ರಾಮ ಪಂಚಾಯಿತಿ ಬೆಳೆಗಾರರ ಸಂಘದ ವತಿಯಿಂದ ಶನಿವಾರ ವಳಲಹಳ್ಳಿ ಕೂಡಿಗೆ–ಹಿರಿಯೂರು ವೃತ್ತದಲ್ಲಿ ಶ್ರದ್ಧಾಂಜಲಿ ಸಭೆ ನಡೆಯಿತು.
ಗ್ರಾಮ ಪಂಚಾಯಿತಿ ವ್ಯಾಪ್ತಿಯ ನೂರಾರು ಗ್ರಾಮಸ್ಥರು, ಬೆಳೆಗಾರರು ಹಾಗೂ ವಿವಿಧ ಸಂಘ-ಸಂಸ್ಥೆಗಳ ಪದಾಧಿಕಾರಿಗಳು ಪಾಲ್ಗೊಂಡು ಪ್ರತಾಪ್ ಗೌಡ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಗೌರವ ನಮನ ಸಲ್ಲಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ತಾಲ್ಲೂಕು ಪಂಚಾಯಿತಿ ಮಾಜಿ ಉಪಾಧ್ಯಕ್ಷ ಕೆ.ಪಿ. ಕೃಷ್ಣೇಗೌಡ, ಪ್ರತಾಪ್ ಗೌಡ ಅವರು ತಮ್ಮ ಸಂಪಾದನೆಯ ಬಹುಪಾಲು ಹಣವನ್ನು ಸಮಾಜಮುಖಿ ಕಾರ್ಯಗಳಿಗೆ ವಿನಿಯೋಗಿಸಿದ ಅಪರೂಪದ ವ್ಯಕ್ತಿಯಾಗಿದ್ದರು. ತಾಲ್ಲೂಕಿನ ವಿವಿಧ ಕ್ಷೇತ್ರಗಳಿಗೆ ಸುಮಾರು ಎಂಟು ಕೋಟಿ ರೂಪಾಯಿಗೂ ಅಧಿಕ ಮೊತ್ತದ ನೆರವು ನೀಡಿದ್ದಾರೆ. ದೇವಸ್ಥಾನಗಳ ನಿರ್ಮಾಣ ಮತ್ತು ಅಭಿವೃದ್ಧಿ, ಬಡ ಮಕ್ಕಳ ಶಿಕ್ಷಣ, ಬೆಳೆಗಾರರ ಸಂಘದ ಕಟ್ಟಡಗಳ ನಿರ್ಮಾಣ ಹಾಗೂ ಸಂಕಷ್ಟದಲ್ಲಿದ್ದ ಕುಟುಂಬಗಳಿಗೆ ನೆರವು ನೀಡುವ ಮೂಲಕ ಜನರ ಮನಸ್ಸಿನಲ್ಲಿ ಶಾಶ್ವತ ಸ್ಥಾನ ಪಡೆದಿದ್ದರು. ತಾಲ್ಲೂಕಿನಲ್ಲಿ ಕೆಂಪೇಗೌಡರ ಪ್ರತಿಮೆ ನಿರ್ಮಾಣಕ್ಕೂ ಸುಮಾರು 25 ಲಕ್ಷ ರೂ. ಕೊಡುಗೆ ನೀಡಿದ್ದರು. ಇಂತಹ ಉದಾರ ಮನಸ್ಸಿನ ವ್ಯಕ್ತಿಯನ್ನು ಕಳೆದುಕೊಂಡಿರುವುದು ಸಮಾಜಕ್ಕೆ ತುಂಬಲಾರದ ನಷ್ಟ ಎಂದು ಭಾವುಕರಾದರು.
ತಾಲ್ಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ವಿ.ಎಂ. ರಾಜೇಗೌಡ ಮಾತನಾಡಿ, ಕೊಡುಗೈ ದಾನಿಗಳು ದೇವರಿಗೆ ಸಮಾನ. ಪ್ರತಾಪ್ ಗೌಡ ಅವರು ಬಡವರ ಸಂಕಷ್ಟಗಳಿಗೆ ಸ್ಪಂದಿಸುವುದರ ಜತೆಗೆ ರೈತರ ಅನುಕೂಲಕ್ಕಾಗಿ ಹೆತ್ತೂರಿನಲ್ಲಿ ಬೃಹತ್ ಕಟ್ಟಡ ನಿರ್ಮಿಸಿಕೊಟ್ಟಿದ್ದರು. ಹಲವು ಜನಪರ ಕಾರ್ಯಗಳಿಗೆ ಕೋಟ್ಯಂತರ ರೂಪಾಯಿ ದೇಣಿಗೆ ನೀಡಿದ್ದಾರೆ. ಅವರ ಸೇವೆ ಮತ್ತು ದಾನಧರ್ಮವನ್ನು ಎಂದಿಗೂ ಮರೆಯಲು ಸಾಧ್ಯವಿಲ್ಲ ಎಂದರು.
ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಗೊದ್ದು ಲೋಕೇಶ್ ಮಾತನಾಡಿ, ಪ್ರತಾಪ್ ಗೌಡ ಅವರ ಕೊಡುಗೆಗಳನ್ನು ಲೆಕ್ಕ ಹಾಕಲು ಸಾಧ್ಯವಿಲ್ಲ. ಅವರ ಸೇವೆ ಪ್ರತಿಯೊಂದು ಮನೆಯಲ್ಲೂ ಸ್ಮರಣೀಯವಾಗಿದೆ. ದೇವಸ್ಥಾನಗಳ ಅಭಿವೃದ್ಧಿ ಸೇರಿದಂತೆ ಸಾಮಾಜಿಕ ಮತ್ತು ಧಾರ್ಮಿಕ ಕಾರ್ಯಗಳಿಗೆ ಉದಾರವಾಗಿ ನೆರವು ನೀಡುತ್ತಿದ್ದರು. ಸಹಾಯ ಕೇಳಿಕೊಂಡು ಬಂದವರನ್ನು ಬರಿಗೈಯಲ್ಲಿ ಕಳುಹಿಸಿದವರಲ್ಲ. ಅವರಲ್ಲಿದ್ದ ಮಾನವೀಯತೆ, ಉದಾರ ಮನಸ್ಸು ಹಾಗೂ ಪರೋಪಕಾರದ ಗುಣವೇ ಅವರನ್ನು ಎಲ್ಲರಿಗೂ ಆತ್ಮೀಯರನ್ನಾಗಿಸಿತ್ತು. ಅವರ ಅಗಲಿಕೆಯಿಂದ ಸಮಾಜ ದೊಡ್ಡ ಶಕ್ತಿಯನ್ನು ಕಳೆದುಕೊಂಡಿದೆ ಎಂದರು.
ಕರ್ನಾಟಕ ರಕ್ಷಣಾ ವೇದಿಕೆಯ ರೈತ ಘಟಕದ ತಾಲ್ಲೂಕು ಅಧ್ಯಕ್ಷ ವಸಂತ್ ಬೊಮ್ಮನಕೆರೆ ಮಾತನಾಡಿ, ಯಾವುದೇ ಪ್ರತಿಫಲಾಪೇಕ್ಷೆಯಿಲ್ಲದೆ ಸಮಾಜದ ಒಳಿತಿಗಾಗಿ ದುಡಿಯುವವರು ಅಪರೂಪ. ಪ್ರತಾಪ್ ಗೌಡ ಅವರು ರೈತರು, ಬಡವರು ಹಾಗೂ ಸಂಕಷ್ಟದಲ್ಲಿದ್ದವರಿಗೆ ಸದಾ ನೆರವಿನ ಹಸ್ತ ಚಾಚುತ್ತಿದ್ದರು. ಮಕ್ಕಳ ಶಿಕ್ಷಣ ಮತ್ತು ಧಾರ್ಮಿಕ ಕಾರ್ಯಗಳಿಗೂ ಸಹಕಾರ ನೀಡುತ್ತಿದ್ದರು. ಅವರ ಜನಪರ ಕಾಳಜಿ ಹಾಗೂ ಸೇವಾ ಮನೋಭಾವ ಎಲ್ಲರಿಗೂ ಮಾದರಿಯಾಗಿತ್ತು ಎಂದು ಸ್ಮರಿಸಿದರು.
ಈ ಸಂದರ್ಭದಲ್ಲಿ ಮಾಜಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ರಾಮಚಂದ್ರ, ತಾಲ್ಲೂಕು ಪಿಎಲ್‌ಡಿ ಬ್ಯಾಂಕ್ ಉಪಾಧ್ಯಕ್ಷ ವೀರೇಶ್ ವಳಲಹಳ್ಳಿ, ವಳಲಹಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ವಸಂತ್ ಹಾಗೂ ಹಿರಿದನಹಳ್ಳಿ ಹೂವಣ್ಣ ಗೌಡ ಸೇರಿದಂತೆ ವಿವಿಧ ಗಣ್ಯರು ಪ್ರತಾಪ್ ಗೌಡ ಅವರ ಸೇವೆಯನ್ನು ಸ್ಮರಿಸಿ ಸಂತಾಪ ಸೂಚಿಸಿದರು.
ಸಭೆಯಲ್ಲಿ ಬೆಳೆಗಾರರ ಸಂಘದ ಪದಾಧಿಕಾರಿಗಳು, ರೈತರು, ಗ್ರಾಮಸ್ಥರು ಹಾಗೂ ವಿವಿಧ ಸಂಘ-ಸಂಸ್ಥೆಗಳ ಪ್ರತಿನಿಧಿಗಳು ಉಪಸ್ಥಿತರಿದ್ದರು.
previous post
